ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲೆಯ ಐಟಿಐ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಕೇವಲ ಪದವಿ ನೀಡುವುದಷ್ಟೇ ಅಲ್ಲದೆ, ಅವರಿಗೆ ಉದ್ಯೋಗ ದೊರಕಿಸಿಕೊಡುವುದು ಸಂಸ್ಥೆಗಳ ಮುಖ್ಯ ಜವಾಬ್ದಾರಿಯಾಗಬೇಕು. ಐಟಿಐ ಮತ್ತು ಡಿಪ್ಲೋಮಾ ಕಾಲೇಜುಗಳಿಂದ ಪ್ರತಿ ವರ್ಷ ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಅವರಲ್ಲಿ ಎಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ ಎಂಬ ನಿಖರವಾದ ಅಂಕಿ-ಅಂಶ ಇರಬೇಕು. ಎಸ್‍ಎಸ್‍ಎಲ್‍ಸಿ ಮುಗಿಸಿ ತಕ್ಷಣದ ಉದ್ಯೋಗಕ್ಕಾಗಿ ಐಟಿಐ ಸೇರುವ ಬಡ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ಅವರನ್ನು ಉದ್ಯೋಗ ಕಲ್ಪಿಸುವುದು ಇಲಾಖೆಯ ಆದ್ಯತೆಯಾಗಬೇಕು ಎಂದು ಹೇಳಿದರು.
ಜಿಲ್ಲೆಯ ಐಟಿಐ ಕಾಲೇಜುಗಳಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಅಪ್ರೆಂಟಿಶಿಪ್ ತರಬೇತಿಯ ಪ್ರಗತಿ ಕುಂಠಿತವಾಗಿರುವುದಕ್ಕೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು. ಕಾಲೇಜುಗಳಿಂದ ವಾರ್ಷಿಕವಾಗಿ ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಆದರೆ ಈ ಪೈಕಿ ಕೇವಲ 181 ವಿದ್ಯಾರ್ಥಿಗಳು ಮಾತ್ರ ಅಪ್ರೆಂಟಿಶಿಪ್‍ಗೆ ನೋಂದಾಯಿಸಿಕೊಂಡಿರುವುದು ವಿಷಾದನೀಯ. ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಕನಿಷ್ಟ ಶೇ.50ರಷ್ಟು ಮಂದಿಯನ್ನಾದರೂ ಅಪ್ರೆಂಟಿಶಿಪ್‍ಗೆ ಸೇರಿಸುವ ಗುರಿ ಹೊಂದಬೇಕು ಎಂದು ಸೂಚಿಸಿದರು.ಚಿತ್ರದುರ್ಗ ಹಿಂದುಳಿದ ಜಿಲ್ಲೆಯಾಗಿರುವುದರಿಂದ ಇಲ್ಲಿನ ಯುವಕರಿಗೆ ಹೆಚ್ಚಿನ ತಾಂತ್ರಿಕ ತರಬೇತಿ ಮತ್ತು ಉದ್ಯೋಗದ ನೆರವು ನೀಡುವಲ್ಲಿ ಐಟಿಐ ಕಾಲೇಜುಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಣ್ಣಕ್ಕಿ ಮಾರುತಿ ಮಾತನಾಡಿ, ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ 5,597 ಫಲಾನುಭವಿಗಳು ಶೇ.25ರಷ್ಟು ಅಂದರೆ 2,118 (ಶೇ.37) ಯುವನಿಧಿ ಫಲಾನುಭವಿಗಳ ನೈಜತೆ ಪರಿಶೀಲನೆ ಕಾರ್ಯ ಪೂರ್ಣಗೊಂಡಿರುತ್ತದೆ. ಯುವನಿಧಿ ಫಲಾನುಭವಿಗಳನ್ನು ತರಬೇತಿಗೆ ಸಜ್ಜುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಎಸ್‍ಎಸ್‍ಒ ವೇಮಣ್ಣ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ, ಜಿಲ್ಲಾ ಉದ್ಯೋಗಾಧಿಕಾರಿ ರವಿಚಂದ್ರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.