ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ರಚಿಸುವ ಉದ್ದೇಶ ಇದೆ. ಉತ್ತರ ಕರ್ನಾಟಕ ವಿಮೋಚನಾ ದಿನದಂದೇ ಈ ಬಗ್ಗೆ ಹೇಳಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳಿಂದ ಇದೆ. ಪ್ರತ್ಯೇಕ ಸಚಿವಾಲಯ ಮಾಡುವ ಉದ್ದೇಶ ಕೂಡ ನಮಗಿದೆ ಎಂದರು.ಬಳಿಕ, ಜಯದೇವ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ, ತೊಗರಿ ರೈತರ ಹಾನಿಯ ಬಗ್ಗೆ ಪ್ರಸ್ತಾಪಿಸಿದರು. ಕಾಂಡಮಚ್ಚೆ ರೋಗದಿಂದ ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ಕಲಬುರಗಿ ಭಾಗದ ತೊಗರಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಸಂಬಂಧ ಅಧಿಕಾರಿಗಳಿಂದ ವರದಿ ಕೇಳಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರೈತರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ತೊಗರಿಗೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಿ ಎನ್ನುವ ಬೇಡಿಕೆ ರೈತರಿಂದ ಇದೆ. ಈಗಾಗಲೇ ಬೆಳಗಾವಿ ಅಧಿವೇಶನದಲ್ಲಿಯೂ ಈ ವಿಷಯ ಪ್ರಸ್ತಾಪವಾಗಿದೆ. ಕೃಷಿ ಇಲಾಖೆಯಿಂದ ವರದಿ ಕೇಳಿದ್ದೇನೆ. ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ರೈತರ ಹಾನಿ ಭರಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ತೊಗರಿ ರೈತರ ನೆರವಿಗೆ ಬನ್ನಿ ಎಂದ ಶಾಸಕ ಅಲ್ಲಂಪ್ರಭು:ಜಯದೇವ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲರು ಮಾತನಾಡುತ್ತಾ, ನೆಟೆರೋಗದಿಂದ ಜಿಲ್ಲೆಯಲ್ಲಿ 2 ಲಕ್ಷ ಟನ್ ತೊಗರಿ ಹಾಳಾಗಿದೆ. ರೈತರು ತೊಂದರೆಯಲ್ಲಿದ್ದಾರೆ. ಸಾವು-ನೋವು ಶುರುವಾಗಿದೆ. ತಕ್ಷಣ ರೈತರ ನೆರವಿಗೆ ಸರ್ಕಾರ ಬರಬೇಕು. ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಸಿಎಂ ಗಮನ ಸೆಳೆದರು.
ಕಲಬುರಗಿ, ಮೈಸೂರಲ್ಲಿ ಶೀಘ್ರ ನಿಮ್ಹಾನ್ಸ್: ಶೀಘ್ರವೇ ಕಲಬುರಗಿ ಹಾಗೂ ಮೈಸೂರಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯ ಶಾಖೆಗಳನ್ನು ತೆರೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಲ್ಲದೆ, ಕಲಬುರಗಿಯಲ್ಲಿ ಮಧುಮೇಹ ಅಧ್ಯಯನ ಕೇಂದ್ರದ ಪ್ರತ್ಯೇಕ ಘಟಕ ಸ್ಥಾಪನೆಗೂ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿಯಲ್ಲಿ ನಿಮ್ಹಾನ್ಸ್ ಮತ್ತು ಮಧುಮೇಹ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಸಿಎಂಗೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಕಲಬುರಗಿಯಲ್ಲಿ ನಿಮ್ಹಾನ್ಸ್ ಘಟಕ ಸ್ಥಾಪಿಸುವ ಭರವಸೆ ನೀಡಿದರು. ಅಲ್ಲದೆ, ವೇದಿಕೆಯಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರತ್ತ ನೋಡಿ, ಮೈಸೂರಿಗೂ ನಿಮ್ಹಾನ್ಸ್ ಅಗತ್ಯವಿದೆ. ಮೈಸೂರನ್ನು ಮರಿಯಬೇಡ ಎಂದರು.
ಆಸ್ಪತ್ರೆ ಲೋಕಾರ್ಪಣೆಗೆ ಪ್ರಿಯಾಂಕ್ ಖರ್ಗೆ ಗೈರು: ಭಾನುವಾರ ನಡೆದ 371 ಹಾಸಿಗೆಗಳ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಕಟ್ಟಡ ಲೋಕಾರ್ಪಣೆ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗೈರು ಹಾಜರಿ ಭಾರಿ ಚರ್ಚೆಗೆ ಗ್ರಾಸವಾಯಿತು. ಕಳೆದ 3 ದಿನದಿಂದ ಕಲಬುರಗಿಯಲ್ಲೇ ವಾಸ್ತವ್ಯ ಹೂಡಿ ಆಸ್ಪತ್ರೆ ಲೋಕಾರ್ಪಣೆಗಾಗಿ ಸಿದ್ಧತೆಗಳನ್ನು ನಡೆಸಿದ್ದ ಸಚಿವರು, ಉದ್ಘಾಟನೆಯ ದಿನವೇ ಯಾಕೆ ಗೈರಾದರು ಎಂಬ ಪ್ರಶ್ನೆ ಸೇರಿದ್ದವರನ್ನೆಲ್ಲ ಕಾಡಿತ್ತು. ಈ ಬಗ್ಗೆ ತಮ್ಮ ಭಾಷಣದ ವೇಳೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ, ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಿಯಾಂಕ್ ತುದಿಗಾಲಲ್ಲಿ ನಿಂತಿದ್ದರು. ಆದರೆ ಬೆಂಗಳೂರಲ್ಲಿ ಮತ್ತೊಂದು ಮಹತ್ವದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವಂತೆ ನಾನೇ ಸೂಚಿಸಿದ್ದೇನೆ ಎಂದು ಕುತೂಹಲಕ್ಕೆ ತೆರೆ ಎಳೆದರು.
ಏತನ್ಮಧ್ಯೆ ಸಚಿವ ಪ್ರಿಯಾಂಕ್ ಖರ್ಗೆ ಅನುಪಸ್ಥಿತಿಯಲ್ಲಿ ಸಿಎಂ ಹಾಗೂ ಎಐಸಿಸಿ ಅಧ್ಯಕ್ಷರಿಂದ ಆಸ್ಪತ್ರೆ ಲೋಕಾರ್ಪಣೆ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಖರ್ಗೆ ಗೈರುಹಾಜರಿ ಬಗ್ಗೆ ಯಾರೂ ಮಾತನಾಡಿರಲಿಲ್ಲ. ಆದರೆ, ಕಲಬುರಗಿ ಶಾಸಕ ಅಲ್ಲಂಪ್ರಭು ಪಾಟೀಲರು ತಮ್ಮ ಮಾತಲ್ಲಿ ಕೆಲಸದ ನಿಮಿತ್ತ ಪ್ರಿಯಾಂಕ್ ಅವರಿಲ್ಲ, ಅವರೂ ಕೂಡಾ ದೂರದೃಷ್ಟಿ ನಾಯಕರೆಂದು ಹೇಳಿ ವಿಷಯದ ಬಗ್ಗೆ ಗಮನ ಸೆಳೆದರು. ನಂತರ ತಮ್ಮ ಮಾತಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು, ಪ್ರಿಯಾಂಕ್ ಖರ್ಗೆ ಇಲ್ಲಿಗೆ ಬರಲು ತುದಿಗಾಲಲ್ಲಿ ನಿಂತಿದ್ದರು. ನಾನೇ ಬೇಡವೆಂದು ಹೇಳಿ ಬೇರೊಂದು ಜವಾಬ್ದಾರಿ ನಿಭಾಯಿಸಲು ಹೇಳಿದ್ದೇನೆ. ಬೆಂಗಳೂರಲ್ಲಿ ಅಲಯನ್ಸ್ ವಿವಿ, ಗವರ್ನರ್ ಅವರಿಗೆ ಡಾಕ್ಟರೇಟ್ ಪದವಿ ನೀಡುತ್ತಿದೆ. ಅವರ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾನೇ ಸೂಚಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಅಲ್ಲಂಪ್ರಭು ಪಾಟೀಲರ ಅಭಿಮಾನಿಗಳಿಂದ ಪ್ರತಿಭಟನೆ:
ಕಾರ್ಯಕ್ರಮದ ನಾಮಫಲಕದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತು ಸ್ಥಳೀಯ ಶಾಸಕರ ಭಾವಚಿತ್ರ ಮತ್ತು ಹೆಸರು ಕೈಬಿಟ್ಟಿದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಶಾಸಕರ ಬೆಂಬಲಿಗರು ಆಸ್ಪತ್ರೆ ಮುಂದೆಯೇ ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯಪ್ರವೇಶ ಮಾಡಿ, ಪ್ರತಿಭಟನಾಕಾರರನ್ನು ಚದುರಿಸಿದರು.
ತೊಗರಿಗೆ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ ಸಿಎಂ ಕಾರಿಗೆ ಮುತ್ತಿಗೆ ಯತ್ನ: ರೋಗಬಾಧೆಯಿಂದ ಹಾಳಾಗಿರುವ ತೊಗರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ರೈತ ಮುಖಂಡರು ಭಾನುವಾರ ನಗರದ ಜಯದೇವ ಆಸ್ಪತ್ರೆ ರಸ್ತೆಯಲ್ಲಿರುವ ಅನ್ನಪೂರ್ಣ ಕ್ರಾಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್ ತೊಗರಿ ಬೆಳೆ ಹಾನಿಯಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಪರಿಹಾರ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿ, ಹತ್ತಾರು ರೈತ ಮುಖಂಡರು ಮುತ್ತಿಗೆಗೆ ಯತ್ನಿಸಿದರು.
ಈ ವೇಳೆ, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ಪರಿಹಾರಕ್ಕೆ ಒತ್ತಾಯಿಸುತ್ತಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಎಂ.ಬಿ. ಸಜ್ಜನ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಅಲ್ಲದೆ, ರೈತರು ಸುತ್ತಲಿನ ಹಳ್ಳಿಗಳಿಂದ ಕಲಬುರಗಿಗೆ ಬರುತ್ತಿರುವುದನ್ನು ಮೊದಲೇ ಅರಿತಿದ್ದ ಜಿಲ್ಲಾ ಪೊಲೀಸರು ರೈತರನ್ನು ಕರೆದುಕೊಂಡು ಬರುತ್ತಿದ್ದ ವಾಹನಗಳನ್ನು ಸುತ್ತಲಿನ ಹಳ್ಳಿಗಳ ರಸ್ತೆಗಳಲ್ಲೇ ತಡೆದರು.