ಕಲ್ಯಾಣ ಕರ್ನಾಟಕ ಪ್ರಗತಿಗೆ ಪ್ರತ್ಯೇಕ ಸಚಿವಾಲಯ: ಕರವೇ ಆಗ್ರಹ

KannadaprabhaNewsNetwork | Published : Sep 13, 2024 1:33 AM

ಸಾರಾಂಶ

Separate Ministry for Welfare Karnataka Progress: Karaway Agraha

-17ಕ್ಕೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ । ಕಲ್ಯಾಣ ಕರ್ನಾಟಕಕ್ಕೆ ಸಭೆ ಮಾದರಿಯಾಗಲಿ । ಮುಖ್ಯಮಂತ್ರಿಗೆ ರಕ್ಷಣಾ ವೇದಿಕೆ ಆಗ್ರಹ

-------

ಕನ್ನಡಪ್ರಭ ವಾರ್ತೆ ಯಾದಗಿರಿ

ಕಲ್ಯಾಣ ಕರ್ನಾಟಕ ಉತ್ಸವ (ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ) ಪ್ರಯುಕ್ತ 17 ರಂದು ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟದ ಸಭೆ ನಡೆಸಲು ಉದ್ದೇಶಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧಾರವನ್ನು ಸ್ವಾಗತಿಸಿರುವ ಕರ್ನಾಟಕ ರಕ್ಷಣಾ ವೇದಿಕೆ, ಈ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ನಿವಾರಣೆಯ ಬಗ್ಗೆ ಮತ್ತೂ ರಚನಾತ್ಮಕ ಪ್ರಗತಿಗೆ ಸಂಬಂಧಿಸಿದ ವಿಷಯಗಳಿಗೆ ವಿಶೇಷ ಸ್ಪಂದನೆ ನೀಡುವ ಮೂಲಕ ಕಲಬುರಗಿಯ ಸಭೆ ಮಾದರಿಯಾಗಬೇಕೆಂದು ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ. ಎನ್‌. ಭೀಮುನಾಯಕ್‌, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ 371 (ಜೆ) ಕಲಂ ಜಾರಿಯಾಗಿ 10 ವರ್ಷಗಳ ದಶಮಾನೋತ್ಸವದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ, ಕಲಬುರಗಿಯಲ್ಲಿ 17 ರಂದು ಸಂಪುಟ ಸಭೆ ನಡೆಸಲು ನಿರ್ಧಾರ ಕೈಗೊಂಡಿರುವುದಕ್ಕೆ ಕರವೇ ಸ್ವಾಗತಿಸುತ್ತದೆ ಎಂದರು.

ಯಾದಗಿರಿ ಜಿಲ್ಲೆಗೆ ಪೂರಕವಾಗಿರುವುದು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗಕ್ಕೆ ವರವಾಗುವ ಕೆಲವೊಂದು ಹಕ್ಕೊತ್ತಾಯಗಳನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮಂಡಿಸಲಿದ್ದು, ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಹಾಲಿ ಶಾಸಕರು ಮುಖ್ಯಮಂತ್ರಿಗಳಿಗೆ ಈ ಹಕ್ಕೋತ್ತಾಯಗಳನ್ನು ಅನುಷ್ಠಾನಕ್ಕೆ ತರುವಂತೆ ಒತ್ತಡ ಹೇರಬೇಕೆಂದು ಭೀಮುನಾಯಕ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಯಾದಗಿರಿ ತಾಲೂಕಾಧ್ಯಕ್ಷ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವರಾಧ್ಯ ದಿಮ್ಮೆ, ಅಂಬ್ರೇಶ ಹತ್ತಿಮನಿ, ಸಂತೋಷ ನಿರ್ಮಲ್ಕರ್, ವಿಶ್ವರಾಜ ಹೊನಗೆರಾ, ಅಬ್ದುಲ್ ಚಿಗಾನೂರು, ಭೀಮರಾಯ ರಾಮಸಮುದ್ರ, ಸಿದ್ದಲಿಂಗರೆಡ್ಡಿ ಮುನಗಲ್, ಸುರೇಶ ಬೆಳಗುಂದಿ, ರಮೇಶ ಡಿ.ನಾಯಕ ಉಪಸ್ಥಿತರಿದ್ದರು.

-----------------------------

.....ಬಾಕ್ಸ್‌....(ಬುಲೆಟ್ಸ್‌)

ಹಕ್ಕೊತ್ತಾಯ ಅನುಷ್ಠಾನಕ್ಕೆ ಮುಖ್ಯಮಂತ್ರಿಗೆ ಶಾಸಕರಿಂದ ಒತ್ತಡ

- ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು 371 (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ.

- 371 (ಜೆ) ಕಲಂ ಕಂಡಿಕೆ 12 (ಎ) ಪ್ರಕಾರ ವಿಶೇಷ ಸ್ಥಾನಮಾನದಡಿ ಸಮಸ್ಯೆಗಳ ಮತ್ತು ಅಪೀಲು ನಿವಾರಣೆಗೆ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ಪ್ರತ್ಯೇಕ ನ್ಯಾಯಮಂಡಳಿ ಸ್ಥಾಪನೆ.

- 371 (ಜೆ) ಕಲಂ ನಿಯಮಗಳಲ್ಲಿ ಉಲ್ಲೇಖಿಸಿರುವಂತೆ ನೆನೆಗುದಿಗೆ ಬಿದ್ದಿರುವ ಅಂಶಗಳನ್ನು ಅನುಷ್ಠಾನ.

- ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಮತ್ತು ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕೆ.ಕೆ.ಆರ್.ಡಿ.ಬಿ. ಯಿಂದ ದೂರದೃಷ್ಟಿಕೋನವನ್ನಿಟ್ಟುಕೊಂಡು 5 ವರ್ಷಗಳಲ್ಲಿ ಕ್ರಿಯಾಯೋಜನೆ ರೂಪಿಸಿ, ಕಾಲಮಿತಿಯಲ್ಲಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.

- ಡಾ. ನಂಜುಂಡಪ್ಪ ವರದಿಯನ್ನು ಮಾನದಂಡವಾಗಿ ಇಟ್ಟುಕೊಂಡು ಕಲ್ಯಾಣ ಕರ್ನಾಟಕದ ಒಂದು ಗ್ರಾಮ ಪಂಚಾಯತಿಯನ್ನು ಘಟಕ ಮಾಡಿಕೊಂಡು ಮೂಲ ಸೌಕರ್ಯಗಳು, ಆರೋಗ್ಯ ಸೇವೆಗಳು, ಆದಾಯದ ಮೂಲಗಳು ಸೇರಿದಂತೆ ಪ್ರಮುಖ ಸೂಚ್ಯಂಕಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ರೀತಿಯಲ್ಲಿ ವರದಿ ತಯಾರಿಸಿಕೊಳ್ಳಬೇಕು. ಆ ವರದಿಯ ಆಧಾರದಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಕೆ.ಆರ್.ಡಿ.ಬಿ.) ಮೂಲಕ 5 ವರ್ಷಗಳ ವೈಜ್ಞಾನಿಕ ಕ್ರಿಯಾಯೋಜನೆಯನ್ನು ರಚಿಸುವುದು.

-ಯಾದಗಿರಿ ಜಿಲ್ಲೆ ಮಹತ್ವಾಕಾಂಕ್ಷೆಯಾಗಿರುವದರಿಂದ, ಭೀಮಾ ಮತ್ತು ಕೃಷ್ಣನದಿಗಳಿಗೆ ಬ್ರಿಡ್ಜ್-ಕಂ-ಬ್ಯಾರೇಜುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸಿ, ಈ ಭಾಗದ ರೈತರಿಗೆ ನೀರಿನ ಸದುಪಯೋಗ ಮಾಡಿಕೊಳ್ಳುವುದು.

- ಕಲಬುರಗಿಯ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಗೆ ಸಂಪುಟ ಸಭೆಯಿಂದ ಕೇಂದ್ರಕ್ಕೆ ಒತ್ತಡ ತರುವುದು.

- ಯಾದಗಿರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ವಾಸ್ತವಿಕ ನೆಲೆಗಟ್ಟಿನ ಮೇಲೆ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು.

- ಯಾದಗಿರಿ ಜಿಲ್ಲೆಗೆ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಎಂಜಿನೀಯರಿಂಗ್ ಕಾಲೇಜು ಸ್ಥಾಪಿಸಬೇಕು,

- ಮಹತ್ವಕಾಂಕ್ಷಿ ಯಾದಗಿರಿ ಜಿಲ್ಲೆಯಾದ ವಿಶೇಷ ಪ್ಯಾಕೇಜ್ ನೀಡುವ ಮೂಲಕ ನವನಗರ ನಿರ್ಮಾಣಮಾಡಿ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಿಕೊಡುವುದು.

--------

12ವೈಡಿಆರ್‌13 : ಯಾದಗಿರಿಯಲ್ಲಿ ಗುರುವಾರ ಕರವೇ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.

Share this article