ಸೈಬರ್‌ ಕ್ರೈಂ ಕಡಿವಾಣಕ್ಕೆ ಡಿಜಿಪಿ ನೇತೃತ್ವದಲ್ಲಿ ಪ್ರತ್ಯೇಕ ತಂಡ: ಗೃಹ ಸಚಿವ ಪರಮೇಶ್ವರ

KannadaprabhaNewsNetwork | Published : Dec 25, 2024 12:47 AM

ಸಾರಾಂಶ

ಎಲ್ಲ ಅಪರಾಧ ಪ್ರಕರಣಗಳು ಒಂದೆಡೆಯಾದರೆ ಸೈಬರ್‌ ಕ್ರೈಂಗಳೇ ಮತ್ತೊಂದು ತೂಕ ಎಂಬಂತಾಗಿದೆ. ಇಡೀ ವಿಶ್ವದಲ್ಲೇ ಅತಿ ಹೆಚ್ಚು ಅಪರಾಧ ಪ್ರಕರಣಗಳು ಇದೀಗ ಸೈಬರ್‌ಗೆ ಸಂಬಂಧಿಸಿದ್ದಾಗಿದೆ.

ಹುಬ್ಬಳ್ಳಿ:

ಸೈಬರ್‌ ಕ್ರೈಂಗಳಿಗೆ ಕಡಿವಾಣ ಹಾಕಲು, ಪತ್ತೆ ಹಚ್ಚಲೆಂದೇ ಪ್ರತ್ಯೇಕ ತಂಡ ರಚಿಸಿದ್ದೇವೆ. ಡಿಜಿಪಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ಕೆಲಸ ಮಾಡುತ್ತಿದೆ ಎಂದು ತಿಳಿಸಿದ ಗೃಹ ಸಚಿವ ಜಿ. ಪರಮೇಶ್ವರ, ರಾಜ್ಯವನ್ನು ಡ್ರಗ್‌ ಮುಕ್ತ ಮಾಡುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಡ್ರಗ್ಸ್‌ ವಿರುದ್ಧ ಸರ್ಕಾರ ಸಮರ ಸಾರಿದೆ. ಪೊಲೀಸ್‌ ಅಧಿಕಾರಿಗಳಿಗೆ ಟಾರ್ಗೆಟ್‌ ಕೂಡ ನೀಡಲಾಗಿದೆ ಎಂದು ತಿಳಿಸಿದರು.

ಇಲ್ಲಿನ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಗೋಕುಲ ರಸ್ತೆ ಹಾಗೂ ವಿದ್ಯಾನಗರ ಠಾಣೆ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ವ್ಯಾಪ್ತಿಗೆ ಬರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್‌ ಇಲಾಖೆಗೆ ದೊಡ್ಡ ಸವಾಲುಗಳೆಂದರೆ ಸೈಬರ್ ಕ್ರೈಂ ಹಾಗೂ ಡ್ರಗ್ಸ್‌ ಎಂದ ಅವರು, ಎಲ್ಲ ಅಪರಾಧ ಪ್ರಕರಣಗಳು ಒಂದೆಡೆಯಾದರೆ ಸೈಬರ್‌ ಕ್ರೈಂಗಳೇ ಮತ್ತೊಂದು ತೂಕ ಎಂಬಂತಾಗಿದೆ. ಇಡೀ ವಿಶ್ವದಲ್ಲೇ ಅತಿ ಹೆಚ್ಚು ಅಪರಾಧ ಪ್ರಕರಣಗಳು ಇದೀಗ ಸೈಬರ್‌ಗೆ ಸಂಬಂಧಿಸಿದ್ದಾಗಿದೆ. ಇದಕ್ಕಾಗಿಯೇ ರಾಜ್ಯದಲ್ಲೇ ಪ್ರತ್ಯೇಕ ತಂಡವನ್ನೇ ರಚಿಸಲಾಗಿದೆ. ಡಿಜಿಪಿ, ಎಡಿಜಿಪಿ, ಏಳು ಜನ ಎಸ್ಪಿಗಳು ಸೈಬರ್‌ಗಾಗಿಯೇ ಕೆಲಸ ಮಾಡುತ್ತಿದ್ದಾರೆ. 43 ಸಿಎಎನ್‌ ಠಾಣೆಗಳನ್ನು ತೆರೆಯಲಾಗಿದೆ. ಈ ಮೂಲಕ ಸೈಬರ್‌ ಕ್ರೈಂಗಳಿಗೆ ಕಡಿವಾಣ ಹಾಕಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.

ಇಡೀ ರಾಜ್ಯವೇ ಡ್ರಗ್ಸ್‌ ಆವರಿಸಿದೆ. ಇದನ್ನು ಡ್ರಗ್ಸ್‌ ಮುಕ್ತವನ್ನಾಗಿ ಮಾಡಬೇಕೆನ್ನುವುದೇ ನಮ್ಮ ಗುರಿ. ಇದು ಪೊಲೀಸ್‌ ಇಲಾಖೆಗೂ ದೊಡ್ಡ ಸವಾಲಾಗಿದೆ. ಚಿಕ್ಕ ಚಿಕ್ಕ ಮಕ್ಕಳಿಗೆ ಚಾಕೋಲೆಟ್‌ ಮೂಲಕ ಡ್ರಗ್ಸ್‌ ನೀಡುವ ಕೆಲಸ ನಡೆಯುತ್ತಿದೆ. ಎಲ್ಲ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕಟ್ಟುನಿಟ್ಟಿನ ಸೂಚನೆಯನ್ನೂ ಕೊಟ್ಟಿದ್ದು, ಡ್ರಗ್ಸ್‌ ವಿರುದ್ಧ ನಮ್ಮ ಸರ್ಕಾರ ಸಮರವನ್ನೇ ಸಾರಿದೆ. ಎಲ್ಲ ಜಿಲ್ಲೆಗಳ ಎಸ್ಪಿ, ಪೊಲೀಸ್‌ ಕಮಿಷನರೇಟ್‌ಗಳೊಂದಿಗೆ ಸಭೆ ನಡೆಸಲಾಗಿದೆ. ಎಲ್ಲರಿಗೂ ಡ್ರಗ್‌ ಪೆಡ್ಲರ್‌ ಇದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಡ್ರಗ್‌ ಎನ್ನುವುದನ್ನು ಬುಡದಿಂದಲೇ ಕಿತ್ತೆಸೆಯಬೇಕು ಎಂದು ನಿರ್ದೇಶನ ನೀಡಿದ್ದೇನೆ ಎಂದರು. ಎಲ್ಲರೂ ಡ್ರಗ್ಸ್‌ ಮುಕ್ತ ಜಿಲ್ಲೆಗಳನ್ನಾಗಿ ಮಾಡಲು ಒಪ್ಪಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೆಲಸವೂ ಶುರುವಾಗಿದೆ. ಬೆಂಗಳೂರಲ್ಲಿ ನೈಜೀರಿಯಾ ಮಹಿಳೆಯಿಂದ ₹ 25 ಕೋಟಿ ಮೌಲ್ಯದ 14 ಕೆಜಿ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ ಎಂದರು.

ಟಾರ್ಗೆಟ್‌:

ಹುಬ್ಬಳ್ಳಿ-ಧಾರವಾಡ ಆಯುಕ್ತಾಲಯ ಹಾಗೂ ಜಿಲ್ಲಾ ವರಿಷ್ಠಾಧಿಕಾರಿಗಳಿಗೂ ಇದೇ ಟಾರ್ಗೆಟ್‌. ಇನ್ನೆರಡು ವರ್ಷದಲ್ಲಿ ಡ್ರಗ್ಸ್‌ ಮುಕ್ತ ಮಾಡಬೇಕು. ಎಲ್ಲ ಠಾಣೆಗಳ ಅಧಿಕಾರಿಗಳು, ಪ್ರತಿತಿಂಗಳು ಆಯಾ ವ್ಯಾಪ್ತಿಯಲ್ಲಿ ಶಾಲೆ, ಕಾಲೇಜ್‌ಗಳಿಗೆ ತೆರಳಿ ಡ್ರಗ್ಸ್‌ ಹಾಗೂ ಸೈಬರ್‌ ಕ್ರೈಂಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಜನಸ್ನೇಹಿಯಾಗಲಿ:

ಎಲ್ಲ ಪೊಲೀಸ್‌ ಠಾಣೆಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಎಲ್ಲ ಅತ್ಯಾಧುನಿಕ ಸೌಲಭ್ಯಗಳು ಹೊಸ ಕಟ್ಟಡಗಳಲ್ಲಿ ಇವೆ. ಯಾವುದೇ ಕಾರ್ಪೋರೇಟ್‌ ಕಂಪನಿಗಳಿಗಿಂತ ಠಾಣೆಗಳ ಹೊಸ ಕಟ್ಟಡಗಳು ಕಮ್ಮಿಯಿಲ್ಲ. ಕಾರ್ಪೋರೇಟ್‌ ಕಚೇರಿ ಎಂಬಂತೆ ಇವೆ. ಇಲ್ಲಿಗೆ ಬರುವ ಪ್ರತಿಯೊಬ್ಬರು ಅಪರಾಧಿಗಳಾಗಿರುವುದಿಲ್ಲ. ಆದಕಾರಣ ಅವರೊಂದಿಗೆ ಸ್ನೇಹ ಹಾಗೂ ಸೌಹಾರ್ದಯುತವಾಗಿ ಅಧಿಕಾರಿ ವರ್ಗ ನಡೆದುಕೊಳ್ಳಬೇಕು. ಜನಸ್ನೇಹಿ ಠಾಣೆಗಳಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್‌.ಎಚ್‌. ಕೋನರಡ್ಡಿ, ಮಹೇಶ ಟೆಂಗಿನಕಾಯಿ, ವಿಧಾನಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಜಿಲ್ಲಾಧಿಕಾರಿ ದಿವ್ಯಪ್ರಭು, ಸಿಇಒ ಸ್ವರೂಪಾ ಟಿ.ಕೆ., ಉತ್ತರ ವಲಯದ ಐಜಿಪಿ ವಿಕಾಸಕುಮಾರ ವಿಕಾಸ, ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ, ಜಿಲ್ಲಾ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್‌ ಸೇರಿದಂತೆ ಹಲವರಿದ್ದರು.

Share this article