ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರವಾಸೋದ್ಯಮ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ 300 ಕಿಮೀ ಉದ್ದದ, ಸಂಪದ್ಭರಿತ ಕರಾವಳಿ ತೀರ ಪ್ರದೇಶವಿದ್ದರೂ ಹಲವು ಕಾರಣಗಳಿಂದ ಪ್ರವಾಸೋದ್ಯಮದಲ್ಲಿ ಹಿಂದುಳಿದಿದೆ. ಇದೀಗ ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಕಾನೂನು ಅಡೆತಡೆಗಳನ್ನು ನಿವಾರಿಸುವ ಉದ್ದೇಶದಿಂದ ಹೂಡಿಕೆದಾರರು, ಉನ್ನತ ಅಧಿಕಾರಿಗಳು, ಸ್ಥಳೀಯ ಸಂಘ-ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿದ ಬಳಿಕ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸಿ ಕ್ಯಾಬಿನೆಟ್‌ಗೆ ತರುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಕರಾವಳಿ ಎಂದರೆ ಸೌಂದರ್ಯ, ಜ್ಞಾನ, ಸಂಪತ್ತನ್ನೊಳಗೊಂಡ ಪ್ರವಾಸಿಗರ ಸ್ವರ್ಗ. ಇಲ್ಲಿನ ಹಿರಿಯರು ಸಂಪತ್ತಿನ ಜತೆಗೆ ರಾಷ್ಟ್ರಕ್ಕೆ ಹಲವು ಬ್ಯಾಂಕ್‌ಗಳ ಕೊಡುಗೆ ನೀಡಿದ್ದಾರೆ. ಈ ಭಾಗವು ಶಿಕ್ಷಣದ ಹಬ್ ಆಗಿ ಸಶಕ್ತ ಮಾನವ ಸಂಪನ್ಮೂಲ ತಯಾರಿಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲೂ ಇಂತಹ ವ್ಯವಸ್ಥೆ ಇಲ್ಲ. ಕರಾವಳಿ- ಮಲೆನಾಡಿನ ಪ್ರಕೃತಿ ಸೌಂದರ್ಯ ಗೋವಾ ರಾಜ್ಯಕ್ಕೆ ಕಡಿಮೆಯಿಲ್ಲ. ಹಾಗಿದ್ದರೂ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಎಲ್ಲೋ ಎಡವಿದ್ದೇವೆ. ಈ ಅಡೆತಡೆಗಳನ್ನು ನಿವಾರಿಸಿ ಹೂಡಿಕೆದಾರರನ್ನು ಆಕರ್ಷಣೆ ಮಾಡಬೇಕಾದರೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅಗತ್ಯವಿದೆ. ಅದನ್ನು ಮಂಗಳೂರಿನಿಂದಲೇ ಚರ್ಚಿಸಿ ಆರಂಭಿಸಲಾಗುವುದು, ಅದಕ್ಕಾಗಿ ಈ ಮಹತ್ವದ ಸಮಾವೇಶ ಏರ್ಪಡಿಸಲಾಗಿದೆ ಎಂದರು.ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಪ್ರವಾಸೋದ್ಯಮ ಎನ್ನುವುದು ಹೂಡಿಕೆ. ಕರಾವಳಿಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅತ್ಯುತ್ತಮ ಪ್ರದೇಶಗಳಿದ್ದು, ಕೈಗಾರಿಕೆಗಳ ಮಾದರಿಯಲ್ಲಿ ಇವುಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ಆಗಬೇಕಿದೆ. ಕೈಗಾರಿಕೆಗಳಿಗೆ ಕೆಐಎಡಿಬಿ ಮೂಲಕ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಮೂಲ ಸೌಕರ್ಯ ಒದಗಿಸುವಂತೆ ಪ್ರವಾಸೋದ್ಯಮ ಅಭಿವೃದ್ಧಿಗೂ ಭೂಸ್ವಾಧೀನ ಮಾಡಿದರೆ ಹೂಡಿಕೆ ಮಾಡಲು ಸಾಕಷ್ಟು ಮಂದಿ ಸಿದ್ಧರಿದ್ದಾರೆ. ಈ ನಿಟ್ಟಿನಲ್ಲಿ ಸಮಗ್ರ ನಿರ್ಧಾರಕ್ಕೆ ಬರಬೇಕಾಗಿದೆ ಎಂದು ಸಲಹೆ ನೀಡಿದರು.
ಶಾಸಕ ಸುನಿಲ್ ಕುಮಾರ್ ಮಾತನಾಡಿ, ಟೆಂಪಲ್, ಇಕೋ, ಬೀಚ್ ಪ್ರವಾಸೋದ್ಯಮ ಅಡಿಪಾಯವಾಗಿರಿಸಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾಗಿದೆ ಎಂದು ಹೇಳಿದರು.
ಕೆಲ ದಿನಗಳ ಹಿಂದೆ ನಾನು ‘ಮಂಗಳೂರು ರಾತ್ರಿ 7-8 ಗಂಟೆಗೇ ಡೆಡ್ ಸಿಟಿಯಾಗುತ್ತದೆ’ ಎಂದು ಹೇಳಿದ್ದೆ. ಈ ಕಾರಣದಿಂದಲಾದರೂ ಈ ಭಾಗಕ್ಕೆ ಛಲ ಮೂಡಿ ಏಳಿಗೆಗೆ ಕಾರಣವಾಗಲಿ ಎಂಬ ಕಾರಣಕ್ಕೆ ಈ ಟೀಕೆ ಮಾಡಿದ್ದೆ ಎಂದು ತಿಳಿಸಿದ ಡಿ.ಕೆ.ಶಿವಕುಮಾರ್ ಅವರು, ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಆದರೆ ಸಿಕ್ಕಿದ ಅವಕಾಶದಲ್ಲಿ ಮಾಡಿದ ಕಾರ್ಯಗಳು ಮಾತ್ರ ಉಳಿಯುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಕಾರ್ಯಕ್ಕೆ ಕೈಹಾಕಿದ್ದೇವೆ ಎಂದರು.ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು:
ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರವಾಸೋದ್ಯಮ ಸಮಾವೇಶದ ಸಮಾರೋಪದಲ್ಲಿ ಅವರು ಮಾತನಾಡಿದರು.
ಶಾಂತಿಸ್ಥಾಪನೆ ಉಳಿಸಿಕೊಳ್ಳಿ:ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಮಾತ್ರ ಅಂತಹ ಪ್ರದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಸದ್ಯ ಇಲ್ಲಿ ಶಾಂತಿ ಸ್ಥಾಪನೆಯಾಗಿದ್ದು, ಇದು ಹೀಗೆಯೇ ಮುಂದುವರಿಯಬೇಕು. ಜಾತಿ, ಧರ್ಮಗಳ ಹೆಸರಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು. ಎಲ್ಲ ಧರ್ಮಗಳೂ ಪ್ರೀತಿಯನ್ನೇ ಹೊರತು ದ್ವೇಷವನ್ನು ಬೋಧಿಸಿಲ್ಲ. ಕರಾವಳಿ ಯಾವಾಗಲೂ ಕುವೆಂಪು ಕಲ್ಪನೆಯ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು. ಇದಕ್ಕೆ ಪೂರಕವಾದ ಎಲ್ಲ ಸಹಕಾರವನ್ನೂ ಸರ್ಕಾರ ನೀಡುತ್ತದೆ ಎಂದರು.