ಕನ್ನಡಪ್ರಭ ವಾರ್ತೆ ಕುಂದಗೋಳ
ಕಾರು ಮತ್ತು ಲಾರಿಯ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಬೆಳ್ಳಿಗಟ್ಟಿ ಬಳಿ ಶನಿವಾರ ಬೆಳಗಿನ ಜಾವ ನಡೆದಿದೆ.ಹಾಸನ ಜಿಲ್ಲೆ ಅರಕಲಗೂಡಿನ ಮಣಿಕಂಠ (36), ಪವನ (23), ಚಂದ್ರಣ್ಣ (31) ಹಾಗೂ ಬೆಂಗಳೂರಿನ ಹರೀಶ (34) ಮೃತಪಟ್ಟವರು. ಇವರೆಲ್ಲರೂ ಹಾಸನದಿಂದ ಗೋವಾಕ್ಕೆ ತೆರಳುತ್ತಿದ್ದರು. ಬೆಳಗಿನ ಜಾವ ಮಂಜು ಕವಿದ ವಾತಾವರಣ ಇದ್ದುದರಿಂದಲೇ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೊದಲು ಬೆಂಗಳೂರಿನಿಂದ ಶಿರಡಿಗೆ ಹೊರಟ ಕಾರು ಹಾಗೂ ಗೋವಾಕ್ಕೆ ಹೊರಟ ಕಾರಿನ ನಡುವೆ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು. ಅವರನ್ನು ಆ್ಯಂಬುಲೆನ್ಸ್ ಮೂಲಕ ಹುಬ್ಬಳ್ಳಿ ಕಿಮ್ಸ್‌ಗೆ ಸಾಗಿಸಲಾಗಿದೆ. ಇನ್ನುಳಿದ ನಾಲ್ವರು ಅಪಘಾತವಾದ ಕಾರಿನ ಬಳಿಯೇ ಮಾತನಾಡುತ್ತ ನಿಂತಿದ್ದರು. ಇವರ ಮೇಲೆ ವೇಗವಾಗಿ ಬಂದ ತಮಿಳುನಾಡು ಮೂಲದ ಲಾರಿ ಹರಿದಿದೆ. ನಾಲ್ವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬ್ಯಾಕೋಡ್, ಹೆಚ್ಚುವರಿ ಎಸ್‌ಪಿ ಎನ್.ವಿ. ಬರಮನಿ, ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಶವಗಳನ್ನು ಹುಬ್ಬಳ್ಳಿ ಕಿಮ್ಸ್‌ಗೆ ಸಾಗಿಸಲಾಗಿದೆ.
ಕಿಮ್ಸ್‌ಗೆ ಸಚಿವ ಲಾಡ್ ಭೇಟಿಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ಕಿಮ್ಸ್ ಶವಗಾರಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟವರ ಮಾಹಿತಿ ಪಡೆದರು. ಶವಗಳನ್ನು ನೋಡಿ ಭಾವುಕರಾದ ಲಾಡ್, ಇದೊಂದು ಅನಿರೀಕ್ಷಿತ ಅಪಘಾತ, ಕಾರು ಅಪಘಾತ ಸಂಭವಿಸಿದ ನಂತರ ರಸ್ತೆ ಬದಿ ನಿಂತವರ ಮೇಲೆ ಲಾರಿ ಹಾಯ್ದಿದೆ ಎಂದು ವಿಷಾಧಿಸಿದರು.