ಹೆದ್ದಾರಿಯಲ್ಲಿ ಸರಣಿ ಅಪಘಾತ: 6 ಮಂದಿಗೆ ತೀವ್ರ ಗಾಯ

KannadaprabhaNewsNetwork | Published : Jun 16, 2024 1:54 AM

ಸಾರಾಂಶ

ಗೆಜ್ಜಲಗೆರೆ ಸಮೀಪ ಮನಮುಲ್ ಡೇರಿ ಬಳಿ ಮುಂಜಾನೆ 5. 45ರ ಸುಮಾರಿಗೆ ಮೈಸೂರು ಕಡೆಗೆ ತೆರಳುತ್ತಿದ್ದ ಟಾಟಾ ಎಸಿ ಗೂಡ್ಸ್ ವಾಹನಕ್ಕೆ ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಎಸಿ ವಾಹನ ರಸ್ತೆ ಬದಿಗೆ ಉರುಳಿ ಬಿದ್ದಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಟಾಟಾ ಎ.ಸಿ .ಗೂಡ್ಸ್ ವಾಹನ ಸೇರಿ ಆರು ಕಾರುಗಳ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಮಹಿಳೆ ಸೇರಿ ಆರು ಮಂದಿ ತೀವ್ರವಾಗಿ ಗಾಯಗೊಂಡು 15 ಕ್ಕೂ ಹೆಚ್ಚು ಮಂದಿ ಪ್ರಾಣಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಗೆಜ್ಜೆಲಗೆರೆ ಸಮೀಪದ ಮನಮುಲ್ ಬಳಿಯ ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಶನಿವಾರ ಮುಂಜಾನೆ ಜರುಗಿದೆ.

ಟಾಟಾ ಗೂಡ್ಸ್ ವಾಹನದಲ್ಲಿದ್ದ ಮಂಡ್ಯ ತಾಲೂಕು ಮಾಚಹಳ್ಳಿಯ ಶಿವಕುಮಾರ್. ಬೆಂಗಳೂರಿನ ಬಸವನಗುಡಿ ನಿವಾಸಿಗಳಾದ ಎಚ್.ಆರ್. ಗಣೇಶ್. ಕಮಲಾಕ್ಷಿ. ಎಚ್.ಆರ್. ಸುಹಾಸ್. ಎಂ. ಸಿ. ಮಧು ಹಾಗೂ ಕೇರಳ ರಾಜ್ಯದ ಕ್ಯಾಲಿಕಟ್ ನ ಬಿನ್ಸಿ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳೆಲ್ಲರೂ ಮಂಡ್ಯ. ಮದ್ದೂರು ಸಾರ್ವಜನಿಕ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೆಜ್ಜಲಗೆರೆ ಸಮೀಪ ಮನಮುಲ್ ಡೇರಿ ಬಳಿ ಮುಂಜಾನೆ 5. 45ರ ಸುಮಾರಿಗೆ ಮೈಸೂರು ಕಡೆಗೆ ತೆರಳುತ್ತಿದ್ದ ಟಾಟಾ ಎಸಿ ಗೂಡ್ಸ್ ವಾಹನಕ್ಕೆ ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಎಸಿ ವಾಹನ ರಸ್ತೆ ಬದಿಗೆ ಉರುಳಿ ಬಿದ್ದಿದೆ. ಇದರಿಂದ ಎರಡೂ ವಾಹನಗಳಲ್ಲಿ ಇದ್ದ ಚಾಲಕರು ಸೇರಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಅಪಘಾತ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಇದೇ ಸ್ಥಳದಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಆರು ಕಾರುಗಳು ಚಾಲಕರ ನಿಯಂತ್ರಣ ತಪ್ಪಿ ಹಿಂದಿನಿಂದ ಡಿಕ್ಕಿ ಹೊಡೆದುಕೊಂಡ ಪರಿಣಾಮ ಅಪಘಾತ ಸಂಭವಿಸಿ ಎಲ್ಲಾ ವಾಹನಗಳಲ್ಲಿದ್ದ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದಿಂದಾಗಿ ಬೆಂಗಳೂರು ಮೈಸೂರ್ ಹೆದ್ದಾರಿಯ ಮೈಸೂರು ಮಾರ್ಗದಲ್ಲಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಂಚಾರಿ ಠಾಣೆ ಪೊಲೀಸರು ಅಪಘಾತದಿಂದ ಜಖಂಗೊಂಡಿದ್ದ ವಾಹನಗಳನ್ನು ರಸ್ತೆಯಿಂದ ಸರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share this article