ಬಳ್ಳಾರಿಯಲ್ಲಿ ಸರಣಿ ಕಳ್ಳತನ, ಸ್ಥಳೀಯರಲ್ಲಿ ಆತಂಕ

KannadaprabhaNewsNetwork |  
Published : Jan 14, 2024, 01:30 AM ISTUpdated : Jan 14, 2024, 05:25 PM IST
ಕಳ್ಳತನ | Kannada Prabha

ಸಾರಾಂಶ

ಬಳ್ಳಾರಿ ನಗರದ ಕಪ್ಪಗಲ್ ರಸ್ತೆ, ಜೈನ್ ಮಾರ್ಕೆಟ್, ಗಾಂಧಿನಗರ ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳಲ್ಲಿ ಶುಕ್ರವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ನಾಲ್ವರು ಆರೋಪಿಗಳು ಈ ಕೃತ್ಯ ಎಸಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಳ್ಳಾರಿ: ನಗರದ ಕಪ್ಪಗಲ್ ರಸ್ತೆ, ಜೈನ್ ಮಾರ್ಕೆಟ್, ಗಾಂಧಿನಗರ ಸೇರಿದಂತೆ ವಿವಿಧ ವಾಣಿಜ್ಯ ಮಳಿಗೆಗಳಲ್ಲಿ ಶುಕ್ರವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಸುಮಾರು ಮೂರರಿಂದ ನಾಲ್ಕು ಜನರಿದ್ದ ಕಳ್ಳರ ಗುಂಪು ಅಂಗಡಿಗಳಲ್ಲಿ ಸಿಕ್ಕ ಹಣವನ್ನು ದೋಚಿ ಪರಾರಿಯಾಗಿದೆ.

ಕಪ್ಪಗಲ್ ರಸ್ತೆಯ ಮೆಡ್‌ಪ್ಲಸ್ ಅಂಗಡಿಗೆ ನುಗ್ಗಿರುವ ಕಳ್ಳರು ₹24,880 ಕದ್ದಿದ್ದಾರೆ. ವಿಜಯ ರಾಮ್ ಸೂಪರ್ ಮಾರ್ಕೆಟ್‌ನಲ್ಲಿ ₹17 ಸಾವಿರ ದೋಚಲಾಗಿದೆ. ಸಾಯಿ ಇಂದಿರಾ ಮೆಡಿಕಲ್ಸ್ ಹಾಗೂ ಕನಕದುರ್ಗ ಸ್ಟೋರ್‌ನಲ್ಲಿ ಸಹ ಕಳ್ಳತನ ನಡೆದಿದ್ದು, ಸಾವಿರಾರು ರು.ಗಳನ್ನು ದೋಚಿದ್ದಾರೆ. ಬ್ರೂಸ್‌ಪೇಟೆ ಠಾಣೆ ವ್ಯಾಪ್ತಿಯ ಜೈನ್ ಮಾರ್ಕೆಟ್‌ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ₹60 ಸಾವಿರ ದೋಚಿದ್ದಾರೆ. ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಗ್ರಾಮೀಣ ಬ್ಯಾಂಕ್‌ಗೆ ನುಗ್ಗಿ ಡಿವಿಡಿಯೊಂದನ್ನು ಕದ್ದಿದ್ದಾರೆ.

ಮಾಸ್ಕ್‌ಗಳನ್ನು ಧರಿಸಿ, ಬ್ಯಾಟರಿ ಹಿಡಿದು ಕಬ್ಬಿಣದ ರಾಡ್‌ಗಳಿಂದ ಬೀಗ ಒಡೆದು ಒಳ ನುಗ್ಗಿರುವ ಕಳ್ಳರು, ಅಂಗಡಿಗಳಲ್ಲಿನ ಕ್ಯಾಷ್ ಕೌಂಟರ್‌ಗೆ ನೇರವಾಗಿ ತೆರಳಿ, ಅಲ್ಲಿದ್ದ ಹಣವನ್ನು ಲಪಟಾಯಿಸಿ, ಪರಾರಿಯಾಗಿದ್ದಾರೆ. ಈ ಎಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಗರದಲ್ಲಿ ನಡೆದಿರುವ ಕಳ್ಳತನ ಕುರಿತಾಗಿ ಗಾಂಧಿನಗರ, ಬ್ರೂಸ್‌ಪೇಟೆ ಹಾಗೂ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಕಳ್ಳತನ ಪ್ರಕರಣ-ಸಾರ್ವಜನಿಕರ ಆತಂಕ: ನಗರದ ಕಪ್ಪಗಲ್ ರಸ್ತೆ ಸೇರಿದಂತೆ ವಿವಿಧೆಡೆಗಳಲ್ಲಿ ಏಕಕಾಲಕ್ಕೆ ನಡೆದಿರುವ ಸರಣಿ ಕಳ್ಳತನದಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಬ್ಯಾಂಕ್, ಅಂಗಡಿಗಳಂತೆಯೇ ಮನೆಗಳಿಗೆ ನುಗ್ಗಿದರೆ ಹೇಗೆ? ಎಂಬ ಚಿಂತೆ ಸ್ಥಳೀಯರನ್ನು ಕಾಡಿದೆ.

ಕಪ್ಪಗಲ್ ರಸ್ತೆ ಸೇರಿದಂತೆ ನಗರದ ನಾನಾ ಕಡೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಗಸ್ತು ತಿರುಗಾಟ ಹೆಚ್ಚಿಸಬೇಕು. ಕಳ್ಳತನ ಪ್ರಕರಣವನ್ನು ಕೂಡಲೇ ಭೇದಿಸಿ ಆರೋಪಿಗಳನ್ನು ಸೆರೆ ಹಿಡಿಯಬೇಕು. ರಾತ್ರಿ ವೇಳೆ ಮಹಿಳೆಯರು ಒಂಟಿಯಾಗಿ ಓಡಾಡುತ್ತಿರುತ್ತಾರೆ. ಹೀಗಾಗಿ ಜನ ರಕ್ಷಣೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳ್ಳತನ ಪ್ರಕರಣ ಭೇದಿಸಿದ ಕೌಲ್‌ಬಜಾರ್ ಪೊಲೀಸರು: ನಗರದ ಕೌಲ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಲ್ಲಿನ ಗೌತಮ ನಗರದ ನಿವಾಸಿ ಗಂಗಾಧರ ನಾಯ್ಕ (22) ಎಂಬಾತನನ್ನು ಬಂಧಿಸಿ, ₹9 ಲಕ್ಷ ಮೌಲ್ಯದ ಚಿನ್ನಾಭರಣ, ಸುಮಾರು ₹13,500 ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕುವೆಂಪು ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಕೃತ್ಯ ಬಯಲಾಗಿದೆ. ಕಳ್ಳತನ ಮಾಡಿದ ಚಿನ್ನಾಭರಣ, ಬೆಳ್ಳಿ ಆಭರಣಗಳ ಜತೆಗೆ ಕಬ್ಬಿಣದ ರಾಡ್‌ನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. 

ಕೌಲ್‌ಬಜಾರ್ ಸಿಪಿಐ ಸುಭಾಷ್‌ಚಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಗೆ ಠಾಣೆಯ ಸಿಬ್ಬಂದಿ ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ