ದಾವಣಗೆರೆ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಟಾಪನೆ ಧರ್ಮದ ಪುನರುತ್ಥಾನದ ಸಂಕಲ್ಪವಾಗಿದ್ದು, ಅಲ್ಲಿ ರಾಮ ಮಂದಿರ ಬರೀ ಮಂದಿರವಾಗಿ ನಿರ್ಮಾಣವಾಗುತ್ತಿಲ್ಲ, ಅದು ಭಾರತೀಯ ಸಂಸ್ಕೃತಿ, ಧರ್ಮವನ್ನು ಜಗತ್ತಿಗೆ ಪ್ರತಿಪಾದಿಸುವ ಮಹತ್ವದ ಕಾರ್ಯವೂ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದರು.
ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿಗಳ ಬಳಗ ಹಾಗೂ ಜಿಲ್ಲಾ ಬಿಜೆಪಿ ಕಾರ್ಯಕರ್ತರ ವೇದಿಕೆ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 99ನೇ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಶ್ರೀರಾಮ ಮಂದಿರ ಉದ್ಘಾಟನೆ ಕೋಟ್ಯಾಂತರ ಹಿಂದುಗಳ ಆಶಯವಾಗಿದೆ. ಧರ್ಮ ಪ್ರತಿಷ್ಠಾಪನೆ ಮಾಡಬೇಕೆಂಬುದು ಶ್ರೀರಾಮನ ಆಶಯವೂ ಆಗಿತ್ತು. ಹಿಂದೆ ರಾಜಪ್ರಭುತ್ವ ಇತ್ತು. ಈಗ ಪ್ರಜಾಪ್ರಭುತ್ವವಿದೆ. ಜನರಿಗೆ ಬೇಕಿರುವುದು ರಾಮರಾಜ್ಯ. ರಾಮರಾಜ್ಯವೆಂದರೆ ನಿರ್ಭಯವಾಗಿ ಬಾಳುವೆಂದರ್ಥ ಎಂದರು.
ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ವಾಜಪೇಯಿ ಅವರು ಅಜಾತ ಶತೃವಾಗಿದ್ದು, ಅಂತಹ ನಾಯಕರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವಾಜಪೇಯಿ ಅಧಿಕಾರಾವದಧಿಯಲ್ಲಿ ವಾಲ್ಮೀಕಿ, ಅಂಬೇಡ್ಕರ್ ಹೆಸರಿನಲ್ಲಿ ಲಕ್ಷಾಂತರ ಬಡವರಿಗೆ ಸೂರು ಕಲ್ಪಿಸಿದರು. ದಾವಣಗೆರೆಯಲ್ಲೂ ನಾಲ್ಕೈದು ಸಾವಿರ ಜನರಿಗೆ ಸೂರಿನ ಭಾಗ್ಯ ಸಿಕ್ಕಿತು ಎಂದರು.
ವೇದಿಕೆ ಜಿಲ್ಲಾಧ್ಯಕ್ಷ ಎಂ.ಪಿ.ಕೃಷ್ಣಮೂರ್ತಿ ಪವಾರ್ ಅಧ್ಯಕ್ಷತೆವಹಿಸಿದ್ದರು. ವಕೀಲ ಜಿ.ಕೆ.ಸುರೇಶ ಉಪನ್ಯಾಸ ನೀಡಿದರು. ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ಟಿ.ಜಿ.ರವಿಕುಮಾರ, ಎಕೆ ಫೌಂಡೇಷನ್ ಸಂಸ್ಥಾಪಕ ಕೆ.ಬಿ.ಕೊಟ್ರೇಶ, ಉಪ ಮೇಯರ್ ಯಶೋಧ ಯೋಗೇಶ, ಮಾಜಿ ಮೇಯರ್ ಎಸ್.ಟಿ.ವೀರೇಶ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ರಾಜ್ಯ ಸ್ಲಂ ಮೋರ್ಚಾ ಮಾಜಿ ಅಧ್ಯಕ್ಷ ಜಯಪ್ರಕಾಶ ಅಂಬರಕರ್, ಆರ್.ಪ್ರತಾಪ್, ಸರೋಜಮ್ಮ ದೀಕ್ಷಿತ್ ಇದ್ದರು.
ಚುನಾವಣೆ ಅಂತಾ ಈಗ ನಾವು ನೆನಪಾದೆವಾ: ಶ್ರೀರಾಮ ಜ್ಯೋತಿ ರಥಯಾತ್ರೆಯಲ್ಲಿ ದಾವಣಗೆರೆಯ ಕೆಲವರು ಹುತಾತ್ಮರಾದರು. ಮತ್ತಷ್ಟು ಜನರ ಗುಂಡೇಟು, ಆ್ಯಸಿಡ್ ದಾಳಿ, ತಲವಾರ್‌ನಿಂದ ಹಲ್ಲೆ ಹೀಗೆ ನಾನಾ ರೀತಿ ಗಂಭೀರಗಾಯಗೊಂಡಿದ್ದರು.
ಘಟನೆ ನಡೆದು 3 ದಶಕ ಕಳೆದಿದ್ದರೂ ಈವರೆಗೆ ನಮ್ಮನ್ನು ಗುರುತಿಸಿ, ಯಾರೊಬ್ಬರಿಗೂ ಕರೆಯಲಿಲ್ಲ. ಈಗ ಲೋಕಸಭೆ ಚುನಾವಣೆ ಬಂದಿದೆಯೆಂಬ ಆಹ್ವಾನ ನೀಡಿ ಸನ್ಮಾನಿಸುತ್ತಾರೆ ಎಂದು ಕರ ಸೇವಕ, ಹಿರಿಯ ಮುಖಂಡ ಮಟ್ಟಿಕಲ್ಲು ವೀರಭದ್ರ ಸ್ವಾಮಿ ಆಕ್ರೋಶ ಹೊರ ಹಾಕಿದರು.
ಇದುವರೆಗೂ ಯಾವೊಬ್ಬ ರಾಜಕಾರಣಿಗಳಾಗಲೀ, ಮುಖಂಡರು, ಪದಾಧಿಕಾರಿಗಳಾಗಲೀ ನಮ್ಮಂತಹ ಕರ ಸೇವಕರನ್ನು ಕರೆದು, ಮಾತನಾಡಿಸಿಲ್ಲ. ಹುತಾತ್ಮರ ಕುಟುಂಬಗಳಿಗೆ ಕೈಲಾದ ನೆರವು ನೀಡುವ ಆಲೋಚನೆಯನ್ನೂ ಮಾಡಿಲ್ಲ. ಕರ ಸೇವಕರಿಗೆ ಕನಿಷ್ಟ ಒಂದು ಸೂರಿನ ವ್ಯವಸ್ಥೆಯನ್ನೂ ಮಾಡಿಲ್ಲ ಎಂಬುದಾಗಿ ಸಮಾರಂಭದಲ್ಲೇ ಗಣ್ಯರ ಭಾಷಣದ ವೇಳೆ ಮಟ್ಟಿಕಲ್ಲು ವೀರಭದ್ರ ಸ್ವಾಮಿ ಹೇಳಿದ ಮಾತುಗಳಿಂದಾಗಿ ಸಮಾರಂಭದಲ್ಲಿ ಕೆಲ ಹೊತ್ತು ಗೊಂದಲ ಸೃಷ್ಟಿಸಿತ್ತು. ನಂತರ ವೀರಭದ್ರಸ್ವಾಮಿ ಮನವೊಲಿಸಿ, ಸಮಾಧಾನಪಡಿಸಿದರು.