ನಿರಂತರ ಕಲಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ: ಕೆ.ಪಿ.ಬಾಬು

KannadaprabhaNewsNetwork | Published : Jan 14, 2024 1:30 AM

ಸಾರಾಂಶ

ಮಂಡ್ಯ ತಾಲೂಕು ಬೇಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ಕೌಶಲ್ಯ ಪ್ರೇರಣಾ ಕಾರ್ಯಾಗಾರ, ಪರೀಕ್ಷಾ ಸಮಯದಲ್ಲಿ ಒತ್ತಡಕ್ಕೆ ಒಳಗಾಗದಿರುವಂತೆ ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಸಲಹೆ. ಪಠ್ಯದ ಬಗ್ಗೆ ಏನೇ ಸಮಸ್ಯೆ, ಗೊಂದಲಗಳಿದ್ದರೂ ಈಗಲೇ ಶಿಕ್ಷಕರಿಂದ ಪರಿಹರಿಸಿಕೊಳ್ಳಬೇಕು. ಕಠಿಣ ವಿಷಯಗಳ ಕಡೆ ಹೆಚ್ಚು ಆಸಕ್ತಿ ಕೊಟ್ಟು ಓದಿ ಮನನ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯನಿರಂತರ ಕಲಿಕೆಯಲ್ಲಿ ತೊಡಗುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ಹೆಚ್ಚು ಜಾಗೃತರಾಗಬೇಕು. ಈ ಸಮಯದಲ್ಲಿ ಯಾರೂ ಮೈಮರೆಯಬಾರದು ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.

ತಾಲೂಕಿನ ಬೇಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಶೈಕ್ಷಣಿಕ ಕೌಶಲ್ಯ ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ತಿರುವು ನೀಡುವ ಘಟ್ಟ. ಈ ಹಂತದಲ್ಲಿ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಪರೀಕ್ಷೆಗೆ ೭೦ ದಿನಗಳು ಮಾತ್ರ ಉಳಿದಿವೆ. ಸಮಯವನ್ನು ವ್ಯರ್ಥ ಮಾಡದೆ ಈಗಿನಿಂದಲೇ ಕಲಿಕೆಯಲ್ಲಿ ನಿರತರಾಗುವಂತೆ ಕಿವಿಮಾತು ಹೇಳಿದರು.

ಪಠ್ಯದ ಬಗ್ಗೆ ಏನೇ ಸಮಸ್ಯೆ, ಗೊಂದಲಗಳಿದ್ದರೂ ಈಗಲೇ ಶಿಕ್ಷಕರಿಂದ ಪರಿಹರಿಸಿಕೊಳ್ಳಬೇಕು. ಕಠಿಣ ವಿಷಯಗಳ ಕಡೆ ಹೆಚ್ಚು ಆಸಕ್ತಿ ಕೊಟ್ಟು ಓದಿ ಮನನ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳ ಗುಂಪು ಚರ್ಚೆಯಿಂದಲೂ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ನೀವೇ ನಿತ್ಯದ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಕಲಿಕೆಯಲ್ಲಿ ತೊಡಗಿದಾಗ ಪರೀಕ್ಷೆ ಎದುರಿಸುವುದು ಸುಲಭವಾಗಲಿದೆ ಎಂದು ನುಡಿದರು.

ಪರೀಕ್ಷೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಬಾರದು. ಮೊಬೈಲ್, ಟೀವಿಯಿಂದ ದೂರವಿರಬೇಕು. ಬೆಳಗಿನ ಜಾವ ಬೇಗ ಎದ್ದು ಓದುವುದರಿಂದ ವಿಷಯಗಳು ಮನನವಾಗುತ್ತವೆ. ನೀವು ಎಷ್ಟು ಗಂಟೆ ಓದುವಿರಿ ಎನ್ನುವುದು ಮುಖ್ಯವಲ್ಲ. ಓದಿದಷ್ಟು ಸಮಯ ಎಷ್ಟು ವಿಷಯ ಅರಿತುಕೊಂಡಿರಿ ಎನ್ನುವುದು ಮುಖ್ಯವಾಗುತ್ತದೆ. ಮನಸ್ಸನ್ನು ಸದಾ ಉಲ್ಲಾಸದಿಂದ ಇರಿಸಿಕೊಂಡಾಗ ನಿರಾಳವಾಗಿ ಪರೀಕ್ಷೆ ಎದುರಿಸಬಹುದು ಎಂದು ಹೇಳಿದರು.

ಅಂದಿನ ವಿಷಯಗಳನ್ನು ಅಂದೇ ಅಭ್ಯಾಸ ಮಾಡಿಕೊಂಡರೆ ಓದು ಸುಲಭವಾಗುತ್ತದೆ. ಮೊದಲೆಲ್ಲಾ ಸೋಮಾರಿತನ ಮಾಡಿಕೊಂಡು ಪರೀಕ್ಷಾ ಸಮಯದಲ್ಲಿ ಓದಲು ಕುಳಿತರೆ ಒತ್ತಡಕ್ಕೆ ಸಿಲುಕುವಿರಿ. ಭಯ ಹೆಚ್ಚಾಗುತ್ತದೆ. ಗೊಂದಲಕ್ಕೆ ಸಿಲುಕಿ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಆ ಸಮಯದಲ್ಲೇ ಏನೇ ಓದಿದರೂ ಅರ್ಥವಾಗುವುದಿಲ್ಲ. ಅದಕ್ಕಾಗಿ ಈಗಿನಿಂದಲೇ ಕಲಿಕೆಯತ್ತ ಗಮನಹರಿಸುವಂತೆ ತಿಳಿಸಿದರು.

ಆರೋಗ್ಯಪೂರ್ಣ ಆಹಾರವನ್ನು ಸೇವಿಸುವುದು. ಹಣ್ಣು ಮತ್ತು ತರಕಾರಿ, ಸೊಪ್ಪನ್ನು ಹೆಚ್ಚು ಸೇವನೆ ಮಾಡುವುದರಿಂದ ಬುದ್ಧಿ ಚುರುಕಾಗುತ್ತದೆ. ಧ್ಯಾನ, ವ್ಯಾಯಾಮದಿಂದ ಏಕಾಗ್ರತೆ ಹೆಚ್ಚುತ್ತದೆ. ನಿದ್ರೆಗೆಡದೆ ಸಮತೋಲನ ಆಹಾರವನ್ನು ಸೇವಿಸುವುದರೊಂದಿಗೆ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವಂತೆಯೂ ಸಲಹೆ ನೀಡಿದರು.

ಮುಖ್ಯ ಶಿಕ್ಷಕ ಎಂ.ಎಚ್.ಪುಟ್ಟಸ್ವಾಮಿ, ಶಿಕ್ಷಕ-ಶಿಕ್ಷಕಿಯರು ಹಾಜರಿದ್ದರು.

Share this article