ಕನ್ನಡಪ್ರಭ ವಾರ್ತೆ ಮೈಸೂರು
ಮಹಿಳೆಯರು ಪೊಲೀಸರು ಸಮವಸ್ತ್ರ ಧರಿಸುವಾಗ ಸಾಕಷ್ಟು ಸವಾಲು ಎದುರಿಸಲು, ತ್ಯಾಗಗಳಿಗೂ ಸಿದ್ಧವಾಗಿರಬೇಕು ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.ಜ್ಯೋತಿನಗರದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್ ತರಬೇತಿ ಶಾಲೆಯ 10ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರಿಗೆ ಇರುವ ತಾಳ್ಮೆ, ಆತ್ಮಸ್ಥೈರ್ಯ, ಪ್ರೇರಣಾಶಕ್ತಿ ಯಾರಿಗೂ ಇಲ್ಲ. ನೀವು ಎಲ್ಲವನ್ನು ಮಾಡಬಹುದು. ಠಾಣೆಯ ಪ್ರತಿಯೊಂದು ವಿಭಾಗದಲ್ಲಿ ತೊಡಗಿಸಿಕೊಳ್ಳಿ. ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಅವರು ಕಿವಿಮಾತು ಹೇಳಿದರು.10 ತಿಂಗಳ ಹಿಂದೆ ನೀವು ಏಕಾಂಗಿಯಾಗಿ ಬಂದು ಈಗ ಪೊಲೀಸ್ ಕುಟುಂಬ ಸೇರಿಕೊಂಡಿದ್ದೀರ. ಪೊಲೀಸ್ ಕಾನ್ಸ್ ಸ್ಟೇಬಲ್ ಗಳೇ ಇಲಾಖೆಗೆ ಬೆನ್ನೆಲುಬು. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಹೆಮ್ಮೆ, ಘನತೆಯ ವಿಚಾರ. ಇಲ್ಲಿ ಪ್ರತಿದಿನ ಕಲಿಕೆ ಇರುತ್ತದೆ. ಈಗ ಮೊದಲಿನಂತೆ ಸಾಮಾನ್ಯ ಪ್ರಕರಣಗಳಿಲ್ಲ. ಸೈಬರ್ ಪ್ರಕರಣಗಳು ಹೆಚ್ಚಾಗಿದ್ದು, ಅದರ ಬಗ್ಗೆಯೂ ಅರಿತುಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಪೊಲೀಸ್ ಇಲಾಖೆಯಿಂದ ಈಗ ಜನಸ್ನೇಹಿ ಪೊಲೀಸ್, ಆಸರೆ ಎಂಬ ಅನೇಕ ರೀತಿಯಲ್ಲಿ ಜನರೊಟ್ಟಿಗೆ ಸೇರಿ ಕಾರ್ಯ ನಿರ್ವಹಿಸುವ ಯೋಜನೆಗಳು ಆರಂಭವಾಗಿವೆ. ಉತ್ತಮವಾಗಿ ಕೆಲಸ ಮಾಡಿ ಇಲಾಖೆಗೆ ಹೆಮ್ಮೆ ತನ್ನಿ ಎಂದು ಅವರು ಶುಭ ಹಾರೈಸಿದರು.
ಒಟ್ಟು 40 ಪ್ರಶಿಕ್ಷಣಾರ್ಥಿಗಳು ತರಬೇತಿ ಪೂರೈಸಿದ್ದು, ಬಿಇ, ಎಂ.ಕಾಂ, ಎಂಎಸ್ಸಿ, ಬಿಎ, ಬಿ.ಇಡಿ, ಡಿಪ್ಲೋಮಾ ಪದವಿ ಪೂರೈಸಿದ ತಲಾ ಒಬ್ಬರು, ಎಂಎ, ಬಿ.ಇಡಿ ಮಾಡಿದ ಇಬ್ಬರು, ಎಂಎ ಮಾಡಿದ ಮೂವರು, ಬಿಎಸ್ಸಿ ಮಾಡಿದ ನಾಲ್ವರು, ಬಿಕಾಂ ಪೂರೈಸಿದ 12, ಬಿಎ ಮಾಡಿದ 11, ಪಿಯುಸಿ ಪದವಿ ಪೂರೈಸಿದ ಮೂವರು ಕಾನ್ ಸ್ಟೇಬಲ್ ತರಬೇತಿ ಪೂರೈಸಿದರು.
ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಪೊಲೀಸ್ ತರಬೇತಿ ಶಾಲೆಯ ಪ್ರಭಾರ ಪ್ರಾಂಶುಪಾಲ ಸಿ. ಮಲ್ಲಿಕ್ ಮೊದಲಾದವರು ಇದ್ದರು.----
ಬಾಕ್ಸ್...ಭುವನೇಶ್ವರಿ ಅತ್ಯುತ್ತಮ್ಮ ಪ್ರಶಿಕ್ಷಣಾರ್ಥಿ
ಪೊಲೀಸ್ ತರಬೇತಿ ಶಾಲೆಯ 10ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್ ಸ್ಟೆಬಲ್ ಗಳ ನಿರ್ಗಮನ ಪಥಸಂಚಲನದಲ್ಲಿ ಬೆಳಗಾವಿ ನಗರದ ಭುವನೇಶ್ವರಿ ಬಸಪ್ಪ ಪಿಡಶೆಟ್ಟಿ ಅವರು ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದರು.ಒಳಾಂಗಣ ವಿಭಾಗದಲ್ಲಿ ಬೆಂಗಳೂರು ನಗರದ ಮುತ್ತುರವ್ವಾ ಬಾಳಗೌಡ ಪಾಟೀಲ್ ಮತ್ತು ರುಕ್ಮಿಣಿ ಕೃಷ್ಣಪ್ಪ ಪಮ್ಮಾರ (ಪ್ರಥಮ), ಮಂಡ್ಯ ಜಿಲ್ಲೆಯ ಎಂ.ಎಸ್. ಅನುಷಾ (ದ್ವಿತೀಯ). ಹೊರಾಂಗಣ ವಿಭಾಗದಲ್ಲಿ ಭುವನೇಶ್ವರಿ ಬಸಪ್ಪ ಪಿಡಶೆಟ್ಟಿ (ಪ್ರಥಮ) ಮತ್ತು ಎಂ.ಎಸ್. ಅನುಷಾ (ದ್ವಿತೀಯ).
ಎಸ್‌ಎಲ್‌ಆರ್ ಫೈರಿಂಗ್ ವಿಭಾಗದಲ್ಲಿ ಶಿವಮೊಗ್ಗ ರೈಲ್ವೇಸ್ ನ ಲಕ್ಷ್ಮೀ ನಂಜಪ್ಪಳವರ್ (ಪ್ರಥಮ), ಎಂ.ಎಸ್. ಅನುಷಾ (ದ್ವಿತೀಯ). 9 ಎಂ.ಎಂ ಪಿಸ್ತೂಲ್ ಫೈರಿಂಗ್ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕವಿತಾ ಸುರೇಶ್ ಬರಗಾಂವಿ (ಪ್ರಥಮ), ಬೆಂಗಳೂರು ನಗರ ಪೂರ್ವ ವಿಭಾಗದ ಎ.ಎಸ್. ಸವಿತಾ (ದ್ವಿತೀಯ) ಪ್ರಶಸ್ತಿ ಪಡೆದರು.