ಶನಿವಾರಸಂತೆ: ಪಟ್ಟಣದ ದೇವಾಲಯಗಳಲ್ಲಿ ಸರಣಿ ಕಳ್ಳತನ

KannadaprabhaNewsNetwork |  
Published : Nov 05, 2024, 12:43 AM IST
ಪೋಟೋ:- ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ವಿಜಯ ವಿನಾಯಕ ದೇವಾಲಯದಲ್ಲಿ ಹುಂಡಿ ಕಳ್ಳತನ ಹಿನ್ನೆಲೆ ಶನಿವಾರಸಂತೆ ಪೊಲೀಸರಿಂದ ಪರಿಶೀಲನೆ. | Kannada Prabha

ಸಾರಾಂಶ

ಪಟ್ಟಣದ ಎರಡು ದೇವಾಲಯಗಳಿಗೆ ನುಗ್ಗಿದ ಕಳ್ಳರು ದೇವಾಲಯದೊಳಗಿದ್ದ ಹುಂಡಿಯನ್ನು ಕದ್ದೊಯ್ದು ಪರಾರಿಯಾಗಿದ್ದಾರೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಪಟ್ಟಣದ ಎರಡು ದೇವಾಲಯಗಳಿಗೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು ದೇವಾಲಯದೊಳಗಿದ್ದ ಹುಂಡಿಯನ್ನು ಕದ್ದೊಯ್ದು ಪರಾರಿಯಾಗಿದ್ದಾರೆ.

ಭಾನುವಾರ ತಡ ರಾತ್ರಿ ವೇಳೆಯಲ್ಲಿ ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ವಿಜಯ ವಿನಾಯಕ ದೇವಾಲಯದ ಬಾಗಿಲು ಮುರಿದ ಕಳ್ಳರು ದೇವಾಲಯದ ಒಳಗೆ ಇದ್ದ ಹುಂಡಿಯನ್ನು ಹೊತ್ತು ಪರಾರಿಯಾಗಿದ್ದಾರೆ. ಸ್ಕೂಟಿಯಲ್ಲಿ ಮಾಸ್ಕ್ ಧರಿಸಿ ಬಂದ ಕಳ್ಳರು ದೇವಾಲಯದ ಬಾಗಿಲು ಮುರಿದ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳ್ಳರು ದೇವಾಲಯದಿಂದ ಕದ್ದೊಯ್ದ ಹುಂಡಿಯನ್ನು ದುಂಡಳ್ಳಿ ಶಾಲೆ ಹತ್ತಿರ ಎಸೆದು ಹೋಗಿರುವುದು ಪತ್ತೆಯಾಗಿದೆ. ಸೋಮವಾರ ಬೆಳಗ್ಗೆ ದೇವಾಲಯ ಕಳ್ಳತನ ಕುರಿತು ಮಾಹಿತಿ ತಿಳಿದ ಶನಿವಾರಸಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಈ ಹಿಂದೆಯೂ ಇದೆ ದೇವಾಲಯಕ್ಕೆ ನುಗ್ಗಿದ ಕಳ್ಳರು ಹುಂಡಿಯನ್ನು ಒಡೆದು ಹುಂಡಿಯಲ್ಲಿದ್ದ ಹಣ, ನಾಣ್ಯವನ್ನು ದೋಚಿದ್ದರು. ಈ ಕುರಿತು ದೇವಾಲಯದ ಸಮಿತಿಯವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಕಳ್ಳತನ ಕುರಿತು ಸರಿಯಾಗಿ ತನಿಖೆ ನಡೆಸಿ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಕಳ್ಳತನ ಹೆಚ್ಚಾಗಲು ಕಾರಣವಾಗಿದೆ ಎಂದು ದೇವಾಲಯ ಸಮಿತಿಯವರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ.

ಭಾನುವಾರ ರಾತ್ರಿ ಮತ್ತೊಂದು ದೇವಾಲಯದಲ್ಲಿ ಕಳ್ಳತನ ಪ್ರಕರಣ ನಡೆದಿದ್ದು ಪಟ್ಟಣದ ಶ್ರೀ ರಾಮ ಮಂದಿರ ದೇವಾಲಯದೊಳಗೆ ನುಗ್ಗಿದ ಕಳ್ಳರು ಹುಂಡಿಯನ್ನು ಒಡೆದು ಹಣವನ್ನು ದೋಚಿದ್ದಾರೆ. ನಂತರ ಕಳ್ಳರು ಹುಂಡಿಯನ್ನು ರಸ್ತೆ ಬದಿಗೆ ಎಸೆದು ಪರಾರಿಯಾಗಿದ್ದಾರೆ. ಭಾನುವಾರ ರಾತ್ರಿ ಪಟ್ಟಣದ ದೇವಾಲಯಗಳಲ್ಲಿ ಸರಣಿ ಕಳ್ಳತನ ಪ್ರಕರಣದ ಕುರಿತು ಮಾಹಿತಿ ತಿಳಿದ ಶನಿವಾರಸಂತೆ ಪೊಲೀಸರು ಸೋಮವಾರ ಬೆಳಗ್ಗೆ ಸ್ಥಳಕ್ಕೆ ಬಂದು ಎರಡು ದೇವಾಲಯಗಳಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ