ಕನ್ನಡಪ್ರಭ ವಾರ್ತೆ ಮಂಡ್ಯ
೨೦೨೩ರ ಜುಲೈ ೨೭ರಂದು ಕ್ರೆಟಾ ಕಾರೊಂದು ಮಾಚಹಳ್ಳಿಯ ವಿಶ್ವೇಶ್ವರಯ್ಯ ನಾಲೆಗೆ ಉರುಳಿತ್ತು. ಕಾರು ಪಲ್ಟಿಯಾಗಿ ಕಾರು ಚಾಲಕ ನಾಪತ್ತೆಯಾಗಿದ್ದ. ಈಗ ಮತ್ತೆ ಅಲ್ಲೇ ಮತ್ತೊಂದು ದುರ್ಘಟನೆ ನಡೆದಿದೆ. ೨೦೨೩ರ ಜೂನ್ ೪ರಂದು ಕಾರೊಂದು ನಾಲೆಗೆ ಉರುಳಿತ್ತು. ನಾಲೆಯಲ್ಲಿ ನೀರಿನ ಹರಿವು ಹೆಚ್ಚಿಲ್ಲದಿದ್ದರಿಂದ ಕಾರಿನಲ್ಲಿದ್ದ ನಾಲ್ವರನ್ನು ಸ್ಥಳೀಯ ಗ್ರಾಮಸ್ಥರು ರಕ್ಷಿಸಿ ಮಾನವೀಯತೆ ಮೆರೆದಿದ್ದರು. ಕಾರಿನಲ್ಲಿ ದಂಪತಿ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು.
ಎರಡು ವರ್ಷಗಳಿಂದ ಸರಣಿ ಅವಘಡಗಳು:ಮಂಡ್ಯ ಜಿಲ್ಲೆಯ ವಿಸಿ ನಾಲೆಯ ಮಾರ್ಗದಲ್ಲಿ ಹಲವಾರು ಕಡೆ ಕಾರುಗಳು, ವಾಹನಗಳು ನಾಲೆಗೆ ಉರುಳಿ ಅನೇಕರು ಜೀವ ಕಳೆದುಕೊಂಡಿರುವ ಘಟನೆಗಳು ನಡೆದಿವೆ. ವಿಸಿ ನಾಲೆಯ ಹಲವು ಕಡೆ ತಡೆಗೋಡೆ ಇಲ್ಲದ ಕಾರಣ ಇಂತಹ ಘಟನೆಗಳು ಪದೇ ಪದೇ ಜರುಗುತ್ತಿದ್ದು, ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
೨೦೨೩ರ ನವೆಂಬರ್ ೭ರಂದು ಪಾಂಡವಪುರ ತಾಲೂಕಿನ ಬನಘಟ್ಟ ಬಳಿ ಕಾರು ವಿಸಿ ನಾಲೆಗೆ ಬಿದ್ದು, ಐವರು ಧಾರುಣವಾಗಿ ಸಾವನ್ನಪ್ಪಿದ್ದರು. ಕಾರು ಮೈಸೂರಿನಿಂದ ಭದ್ರಾವತಿಗೆ ತೆರಳುವಾಗ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿತ್ತು. ೨೦೨೪ರ ಮಾ. ೧೨ರಂದು ಮಂಡ್ಯದ ಅವ್ವೇರಹಳ್ಳಿ ಗ್ರಾಮದ ಬಳಿ ಸ್ವಿಫ್ಟ್ ಕಾರೊಂದು ನಾಲೆಯೊಳಗೆ ಬಿದ್ದಿತ್ತು. ಕಾರಿನಲ್ಲಿದ್ದ ಇಬ್ಬರ ಪೈಕಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.