ಅಧಿವೇಶನದಲ್ಲಿ ಉ.ಕ ಭಾಗ ಗಂಭೀರ ಚರ್ಚೆ

KannadaprabhaNewsNetwork |  
Published : Dec 12, 2025, 02:00 AM IST
ಸದನ ಕಲಾಪ | Kannada Prabha

ಸಾರಾಂಶ

 ಕಾಂಗ್ರೆಸ್‌ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನೀಡಿದ್ದ ಭರಪೂರ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ.  ಉತ್ತರ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಮುಂದುವರೆದಿದೆ ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ್‌ ಬೆಲ್ಲದ್‌ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು.

 ಸುವರ್ಣ ವಿಧಾನಸಭೆ :  ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನೀಡಿದ್ದ ಭರಪೂರ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಉತ್ತರ ಕರ್ನಾಟಕ ಭಾಗಕ್ಕೆ ಮಲತಾಯಿ ಧೋರಣೆ ಮುಂದುವರೆದಿದೆ ಎಂದು ವಿರೋಧ ಪಕ್ಷದ ಉಪ ನಾಯಕ ಅರವಿಂದ್‌ ಬೆಲ್ಲದ್‌ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಮಾತನಾಡಿ, ಕಾಂಗ್ರೆಸ್‌ ಪಕ್ಷ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಕೃಷ್ಣಾ ಆಯೋಜನೆಗೆ ವರ್ಷಕ್ಕೆ 5 ಸಾವಿರ ಕೋಟಿ ರು. ಅನುದಾನ ನೀಡುವುದಾಗಿ ಹೇಳಿತ್ತು. ನೀರಾವರಿ ಯೋಜನೆಗಳಿಗೆ 1.50 ಲಕ್ಷ ಕೋಟಿ ರು. ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದು, ಕೇವಲ 36 ಸಾವಿರ ಕೋಟಿ ರು. ಖರ್ಚು ಮಾಡಿದೆ. ನಮ್ಮ ಬಿಜೆಪಿ ಸರ್ಕಾರ 2019-2023ರ ಅವಧಿಯಲ್ಲಿ ನೀರಾವರಿ ಯೋಜನೆಗಳಿಗೆ 79,662 ಕೋಟಿ ರು. ವೆಚ್ಚ ಮಾಡಿದೆ. ಇದೀಗ ಈ ಸರ್ಕಾರ ಉಳಿದ ಎರಡೂವರೆ ವರ್ಷದಲ್ಲಿ 1.17 ಲಕ್ಷ ಕೋಟಿ ರು. ಖರ್ಚು ಮಾಡಬೇಕು. ವಾಸ್ತವದಲ್ಲಿ ಇಷ್ಟು ಖರ್ಚು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. 

ಕಾಣದ ಖುರ್ಚಿಗೆ ಹಂಬಲಿಸಿದೇ ಮನ...

ಕಿಚಾಯಿಸಿದ ಸುನೀಲ್‌, ನಕ್ಕ ಡಿಸಿಎಂ

ಈ ವೇಳೆ ಬೆಲ್ಲದ್‌ ಅವರು ಮೇಕೆದಾಟು ಯೋಜನೆಯ ವಿಚಾರ ಪ್ರಸ್ತಾಪಿಸಿ, ಈ ಯೋಜನೆಗಾಗಿ ಮೇಕೆದಾಟು ಯೋಜನೆ ಪಿತಾಮಹಾ ಡಿಸಿಎಂ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಸಹ ಮಾಡಿದ್ದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಕರೆಸಿದ್ದರು. ಯೋಜನೆಗೆ ಅನುಮತಿ ನೀಡದಂತೆ ತಮಿಳುನಾಡು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ. ಹೀಗಾಗಿ ಕೂಡಲೇ ಯೋಜನೆ ಕೆಲಸ ಶುರು ಮಾಡಬೇಕು ಎಂದು ಡಿ.ಕೆ.ಶಿವಕುಮಾರ್‌ ಅವರ ಕಾಲೆಳೆದರು.

ಒಪ್ಪಿಗೆ ಸಿಕ್ಕರೆ ನಿಮ್ಮೆಲ್ಲರನ್ನೂ ಕರೆದೊಯ್ದು ಭೂಮಿ ಪೂಜೆ ಮಾಡುತ್ತೇನೆ

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಬೆಲ್ಲದ್‌ ಅವರೇ ನಾನು ನಿಮ್ಮ ತಂದೆ ಶಾಸಕರಾಗಿದ್ದಾಗ ಕೆಲಸ ಮಾಡಿದ್ದೇನೆ. ನೀವು ಮುಖ್ಯಮಂತ್ರಿ, ವಿಪಕ್ಷ ನಾಯಕನಾಗಲು ಪ್ರಯತ್ನಿಸಿದವರು. ಮೇಕೆದಾಟು ಯೋಜನೆ ಸಂಬಂಧ ಸುಪ್ರೀಂ ಕೋರ್ಟ್ ಆರು ತಿಂಗಳು ಸಮಯ ನೀಡಿದೆ. ನಾನು ಸಿಡಬ್ಲ್ಯೂಸಿಗೆ ಅರ್ಜಿ ಹಾಕುತ್ತೇನೆ. ಪರಿಷ್ಕೃತ ಡಿಪಿಆರ್‌ ಸಲ್ಲಿಸುತ್ತೇನೆ. ಒಪ್ಪಿಗೆ ಸಿಕ್ಕರೆ ನಿಮ್ಮೆಲ್ಲರನ್ನೂ ಕರೆದೊಯ್ದು ಭೂಮಿ ಪೂಜೆ ಮಾಡುತ್ತೇನೆ ಎಂದು ಕೈ ಮುಗಿದು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್‌, ಶಿವಕುಮಾರ್‌ ಅವರಿಗೆ ಕೈ ಮುಗಿದು ಮಾತನಾಡುವ ನಯ, ವಿನಯ ಹೇಗೆ ಬಂತು? ನಿಮ್ಮ ನಡವಳಿಕೆ ನೋಡಿದರೆ ನನಗೆ ಸಿ.ಅಶತ್ಥ್‌ ಅವರ ಹಾಡು ನೆನಪಿಗೆ ಬರುತ್ತಿದೆ. ‘ಕಾಣದ ಖುರ್ಚಿಗೆ ಹಂಬಲಿಸಿದೆ ಮನ, ಕಾಣಬಲ್ಲೆನೆ ಒಂದು ದಿನ, ಏರಬಲ್ಲನೇ ಒಂದು ದಿನ...’ ಎಂದು ಶಿವಕುಮಾರ್ ಅವರನ್ನು ಕಿಚಾಯಿಸಿದರು. ಸಿಎಂ ಖುರ್ಚಿಗಾಗಿ ಈ ನಯ, ವಿನಯಾ ಶುರುವಾಗಿದೆಯಾ ಎಂದು ಕಾಲೆಳೆದರು. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಮೇಕೇದಾಟು, ಕಾವೇರಿ, ಮಹಾದಾಯಿ, ಕೃಷ್ಣಾ ಎಲ್ಲವೂ ಬೇಕು. ಎಲ್ಲರೂ ಸೇರಿ ಮಾಡೋಣ. ‘ಜೊತೆಗೂಡಿ ಮಾಡಿದರೆ ಆರಂಭ, ಜೊತೆಗೂಡಿ ಮಾಡಿದರೆ ಪ್ರಗತಿ, ಜೊತೆಗೂಡಿ ಮಾಡಿದಾಗ ಯಶಸ್ವಿ’ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ