ಹಳಿಯಾಳ: ಸರ್ಕಾರದ ಅಭಿವೃದ್ಧಿಪರ ಯೋಜನೆಗಳನ್ನಾಗಲಿ ಅಥವಾ ಕಾಮಗಾರಿಗಳ ಅನುಷ್ಠಾನದ ವಿಷಯದಲ್ಲಿ ಸಮಸ್ಯೆಗಳು ಎದುರಾದಲ್ಲಿ ಅಧಿಕಾರಿಗಳು ಪರಸ್ಪರ ಚರ್ಚಿಸಿ ಸಮನ್ವಯತೆಯಿಂದ ಸೇವೆ ಸಲ್ಲಿಸಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ಸೂಚಿಸಿದರು.ಬುಧವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.ಅಭಿವೃದ್ಧಿ ಕಾಮಗಾರಿಗಳಾಗಲಿ ಅಥವಾ ಯಾವುದೇ ಯೋಜನೆಗಳಾಗಲಿ ಅವುಗಳ ಆಡಳಿತಾತ್ಮಕ ಅನುಮೋದನೆ ಸಮಸ್ಯೆ ಎದುರಾದರೆ ಆಯಾ ಇಲಾಖೆಗಳು ಅವುಗಳ ಮಾಹಿತಿಯನ್ನು ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆಯವರು ತಮ್ಮ ಗಮನಕ್ಕೆ ತರಲು ಹೇಳಿದ್ದಾರೆ. ಅದಕ್ಕಾಗಿ ಆಯಾ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳು ಯಾರ ಪರವಾನಗಿ ಪಡೆಯಬೇಕೆಂಬುದರ ಬಗ್ಗೆ ಸಮಗ್ರ ಮಾಹಿತಿಯನ್ನು ಬರೆದು ಶಾಸಕರ ಕಚೇರಿಗೆ ಸಲ್ಲಿಸಬೇಕೆಂದರು.
ಪಶು ಸಂಗೋಪನಾ ಇಲಾಖೆಯ ತಾಲೂಕು ಆಡಳಿತಾಧಿಕಾರಿ ಡಾ. ಕೆ. ನದಾಫ್ ಮಾತನಾಡಿ, ದುಸಗಿಯಲ್ಲಿರುವ ಜಿಲ್ಲಾ ಗೋಶಾಲೆಗಳಿಗೆ ಇಡೀ ಜಿಲ್ಲೆಯಿಂದ ಜಾನುವಾರುಗಳನ್ನು ತಂದು ಬಿಡುತ್ತಿರುವುದರಿಂದ ಗೋಶಾಲೆಗಳಲ್ಲಿ ಜಾನುವಾರುಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಈ ಜಾನುವಾರುಗಳನ್ನು ಸುರಕ್ಷಿತವಾಗಿ ಇಡಲು ಇಲಾಖೆಯು ಕ್ರಮವನ್ನು ಕೈಗೊಂಡಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಎಇ ಸುಧಾಕರ ಕಟ್ಟಿಮನಿ ಅವರು, ಖೆಲೋ ಇಂಡಿಯಾ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಒಳಾಂಗಣ ಕ್ರೀಡಾಂಗಣದ ಹಾಗೂ ಸಾಂಸ್ಕೃತಿಕ ಭವನದ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.ತಾಲೂಕಿನೆಲ್ಲೆಡೆ ಜಲಜೀವನ ಮಿಷನ್ ಯೋಜನೆಯಡಿಯಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಯಿಂದಾಗಿ ಜಿಲ್ಲಾ ಮುಖ್ಯ ರಸ್ತೆಗಳು ಜಖಂಗೊಂಡಿದ್ದು, ಆದಷ್ಟು ಬೇಗ ಈ ರಸ್ತೆಗಳ ದುರಸ್ತಿ ಕಾರ್ಯವನ್ನು ಇಲಾಖೆಗಳು ಕೈಗೊಳ್ಳಬೇಕೆಂದರು.
ಕೃಷಿ, ತೋಟಗಾರಿಕೆ, ಕಾರ್ಮಿಕ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಜಿಪಂ, ಚಿಕ್ಕನೀರಾವರಿ ಹಾಗೂ ಇತರ ಇಲಾಖೆಗಳು ಪ್ರಗತಿ ವರದಿಯನ್ನು ಮಂಡಿಸಿದವು. ಸಭೆಯ ಅಧ್ಯಕ್ಷತೆಯನ್ನು ತಾಪಂ ಆಡಳಿತಾಧಿಕಾರಿ ಬಿ.ಎಸ್. ಪಾಟೀಲ ವಹಿಸಿದ್ದರು.