ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ಸರ್ವರ್‌ ಕಿರಿಕಿರಿ!

KannadaprabhaNewsNetwork |  
Published : Jul 23, 2026, 02:00 AM IST
ಕುಂದಗೋಳ ತಾಲೂಕಿನ ಮಜ್ಜಿಗುಡ್ಡದಲ್ಲಿ ಗೃಹಜ್ಯೋತಿ ಪರಿಷ್ಕರಣೆಗೆ ಗ್ರಾಹಕರು ಸರತಿಯಲ್ಲಿ ಇಟ್ಟಿರುವ ದಾಖಲೆಗಳು. | Kannada Prabha

ಸಾರಾಂಶ

ಹೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ಬರೋಬ್ಬರಿ 2500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.

ನಾಗರಾಜ ಮಾರೇರ

ಹುಬ್ಬಳ್ಳಿ:

ರಾಜ್ಯದ ಅರ್ಹ ಫಲಾನುಭವಿಗಳಿಗೆ ಮಾತ್ರ ಗ್ಯಾರಂಟಿ ಯೋಜನೆ ಲಭಿಸಬೇಕೆಂದು ಸರ್ಕಾರ ಪರಿಷ್ಕರಣೆಗೆ ಮುಂದಾದ ಬೆನ್ನಲ್ಲೆ ಗೃಹಜ್ಯೋತಿ ಪರಿಷ್ಕರಣೆಯಲ್ಲಿ ತೊಡಗಿರುವ ಸಿಬ್ಬಂದಿ ತಾಂತ್ರಿಕ ತೊಂದರೆಯಿಂದ ನಿಗದಿತ ಗುರಿ ತಲುಪಲು ಆಗುತ್ತಿಲ್ಲ. ಅತ್ತ ಜನತೆ ಸರತಿ ಸಾಲಿನಲ್ಲಿ ಆಧಾರ್‌ ಕಾರ್ಡ್‌ ಸೇರಿ ಅಗತ್ಯ ದಾಖಲೆ ಇಟ್ಟು ಇಡೀ ದಿನ ಕಾಯುತ್ತಿದ್ದಾರೆ.

ಹೆಸ್ಕಾಂ ವ್ಯಾಪ್ತಿಯ ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ 54.68 ಲಕ್ಷಕ್ಕೂ ಅಧಿಕ ಗ್ರಾಹಕರಿದ್ದು, ಗೃಹಜ್ಯೋತಿ ಪರಿಷ್ಕರಣೆಗೆ ಬರೋಬ್ಬರಿ 2500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. 2 ತಿಂಗಳಲ್ಲಿ ಈ ಸಿಬ್ಬಂದಿ ಎಲ್ಲ ಗ್ರಾಹಕರ ಮನೆ ತಲುಪಬೇಕಿದೆ.

ದಿನಕ್ಕೆ 100 ಗುರಿ:

ಹೆಸ್ಕಾಂ ಸಿಬ್ಬಂದಿ ಕನಿಷ್ಠ ದಿನದೊಂದಕ್ಕೆ 100 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕೆಂದು ಮೇಲಧಿಕಾರಿಗಳ ನಿರ್ದೇಶನವಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ದಿನಕ್ಕೆ 20 ಅರ್ಜಿ ತುಂಬಲು ಆಗುತ್ತಿಲ್ಲ. ಒಂದೊಂದು ಬಾರಿ 30 ನಿಮಿಷ, ಒಂದು ಗಂಟೆ ವರೆಗೂ ರಾಜ್ಯಾದ್ಯಂತ ಸರ್ವರ್‌ ಸ್ಥಗಿತವಾಗುತ್ತದೆ. ಗ್ರಾಹಕರ ಆಧಾರ್‌ ಕಾರ್ಡ್‌ ಲಿಂಕ್‌ ಇರುವ ಮೊಬೈಲ್‌ ಸಂಖ್ಯೆಗೆ ಎರಡು ಬಾರಿ ಒಟಿಪಿ ಬರುತ್ತದೆ. ಕೆಲ ಸಂದರ್ಭದಲ್ಲಿ ಒಂದು ಬಾರಿ ಒಟಿಪಿ ಬಂದ್‌ ಬಳಿಕ ಸರ್ವರ್‌ ಸ್ಥಗಿತವಾಗುತ್ತದೆ.

ಗ್ರಾಹಕರೇ ಸಿಗುತ್ತಿಲ್ಲ:

ಮನೆ-ಮನೆಗೆ ಹೋಗಿ ಪರಿಷ್ಕರಣೆ ಅರ್ಜಿ ನೀಡಿ, ಮರಳಿ ಪಡೆಯಲು ಸಿಬ್ಬಂದಿ ಹೋದರೆ ಗ್ರಾಹಕರು ಸಿಗುತ್ತಲೇ ಇಲ್ಲ. ಕೆಲ ಸಂದರ್ಭದಲ್ಲಿ ಅರ್ಧ ಗಂಟೆ ವರೆಗೂ ಒಂದೇ ಮನೆಯಲ್ಲಿ ನಿಲ್ಲಬೇಕಾದ ಸ್ಥಿತಿಯೂ ಇದೆ. ಕೆಲವರು ಅಗತ್ಯ ದಾಖಲೆ ತಡಕಾಡಿ ತರುವ ವರೆಗೂ ಸ್ಥಳ ಬಿಟ್ಟು ಕದಲುವಂತಿಲ್ಲ. ಒಂದೆಡೆ ಸರ್ವರ್‌ ಸಮಸ್ಯೆ ಮತ್ತೊಂದೆಡೆ ಗ್ರಾಹಕರ ಸ್ಪಂದನೆ ಇಲ್ಲದೆ ಒತ್ತಡಕ್ಕೆ ಸಿಲುಕಿದ್ದೇವೆ ಎನ್ನುತ್ತಾರೆ ಸಿಬ್ಬಂದಿ.

ಗ್ರಾಮೀಣದಲ್ಲಿ ಜನಜಾತ್ರೆ:

2023ಕ್ಕೂ ಮೊದಲು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆ ಮೂಲಕ ಉಚಿತ ವಿದ್ಯುತ್‌ ಪಡೆದಿದ್ದ ಗ್ರಾಹಕರು 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹಜ್ಯೋತಿ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಇದೀಗ ಪರಿಷ್ಕರಣೆ ಆರಂಭವಾಗಿದ್ದು ಕೆಲಸ-ಕಾರ್ಯ ಬಿಟ್ಟು ಹೆಸ್ಕಾಂ ಸಿಬ್ಬಂದಿ ಗ್ರಾಮಕ್ಕೆ ಬರುವುದನ್ನೇ ಕಾಯುತ್ತಿದ್ದಾರೆ.

ಮಳೆ ಹಾಗೂ ಒಂದೆಡೆ ಜನರು ಸೇರಿದರೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಗ್ರಾಮದ ಒಂದು ಸ್ಥಳ ನಿಗದಿಪಡಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಗ್ರಾಮಕ್ಕೆ ಬರುವ ಮೊದಲೇ ಆಧಾರ್‌ ಕಾರ್ಡ್‌, ಬ್ಯಾಗ್‌, ಚಪ್ಪಲಿ ಸೇರಿದಂತೆ ವಿವಿಧ ವಸ್ತುಗಳನ್ನು ಸರತಿಯಲ್ಲಿ ಇಡುತ್ತಿದ್ದಾರೆ.

ದಿನಕ್ಕೆ 100 ಅರ್ಜಿ ಭರ್ತಿ ಮಾಡಬೇಕೆಂದು ಮೇಲಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಸರ್ವರ್‌ ಸಮಸ್ಯೆ ಹಾಗೂ ಗ್ರಾಹಕರು ಮನೆಗೆ ಹೋದರೆ ಸಿಗದೆ ಇರುವುದರಿಂದ ದಿನಕ್ಕೆ 20 ಅರ್ಜಿಯನ್ನು ಸಹ ಭರ್ತಿ ಮಾಡಲು ಆಗುತ್ತಿಲ್ಲ. ಬೆಳಗ್ಗೆ ಆರಂಭದಲ್ಲಿ ಸರ್ವರ್‌ ಕೈಕೊಡುತ್ತಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಇನ್ನಾದರೂ ತಾಂತ್ರಿಕ ಸಿಬ್ಬಂದಿ ಸರ್ವರ್‌ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.

ಹೆಸ್ಕಾಂ ಸಿಬ್ಬಂದಿಹೆಸ್ಕಾಂ ಸಿಬ್ಬಂದಿ ಬೆಳಗ್ಗೆ ಗೃಹಜ್ಯೋತಿ ಯೋಜನೆ ಪರಿಷ್ಕರಣೆಗೆ ಬಂದಾಗ ಕೆಲಸ ಹೋಗುವುದನ್ನು ಬಿಟ್ಟು ನಿಂತುಕೊಂಡೆ. ಆದರೆ, ಸರ್ವರ್‌ ಇಲ್ಲವೆಂದು 15 ನಿಮಿಷ ಕಾಯಬೇಕಾಯಿತು. ಮತ್ತೆ ಅರ್ಧ ಗಂಟೆ ಆದರೂ ಸರ್ವರ್‌ ಬರಲೇ ಇಲ್ಲ. ಸಮಯ ಮೀರಿದ್ದರಿಂದ ಕೆಲಸಕ್ಕೆ ಹೋಗುವುದನ್ನೇ ಬಿಟ್ಟೆ.

ಪರಶುರಾಮ ಗದಗ, ಗ್ರಾಹಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಪೊಲೀಸ್‌ ಇಲಾಖೆ ಹದ್ದಿನಕಣ್ಣು
ಬರ ಎದುರಿಸಲು ಜಿಲ್ಲಾಡಳಿತ ಸದಾ ಸಿದ್ಧ: ಕೆ. ನಾಗೇಂದ್ರ ಪ್ರಸಾದ್