ಕವಿತಾಳ: ಸರ್ವರ್ ಸಮಸ್ಯೆಯಿಂದ ಪಡಿತರ ಚೀಟಿ ತಿದ್ದುಪಡಿ ಸಾಧ್ಯವಾಗದೆ ಸಾರ್ವಜನಿಕರು ಪರದಾಡುವಂತಾಗಿದ್ದು, ಗ್ರಾಮ್ ಒನ್ ಕೇಂದ್ರ ಮುಂದೆ ಇಡೀ ದಿನ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ. ಮೂರು ದಿನಗಳ ಹಿಂದೆ ಪಡಿತರ ಚೀಟಿಗೆ ಅವಕಾಶ ನೀಡಲಾಗಿದ್ದು, ಪಡಿತರ ಚೀಟಿಯಲ್ಲಿನ ಹೆಸರು, ವಿಳಾಸ, ವಯಸ್ಸು ಮತ್ತಿತರ ಮಾಹಿತಿ ತಿದ್ದುಪಡಿ, ಮೃತರ ಹೆಸರು ತೆಗೆದು ಹಾಕುವುದು ಹಾಗೂ ಹೊಸದಾಗಿ ಹೆಸರು ಸೇರ್ಪಡೆಗೆ ಅವಕಾಶವಿದೆ. ಪಡಿತರದಾರರು ತಿದ್ದುಪಡಿಗೆ ಮುಂದಾದರೂ ಸರ್ವರ್ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಕೆಲಸ ಬೊಗಸೆ ಕೈ ಬಿಟ್ಟು, ಹೊಲಗಳಿಗೆ ಹೋಗದೆ ಮಕ್ಕಳ ಜೊತೆ ಇಲ್ಲಿ ಬಂದು ಕುಳಿತಿದ್ದೇವೆ. ಮೂರು ದಿನಗಳಿಂದ ಅಲೆಯುತ್ತಿದ್ದರೂ ತಿದ್ದುಪಡಿ ಮಾಡಲು ಅವಕಾಶ ಸಿಗುತ್ತಿಲ್ಲ. ಅದೇನೋ ಸರ್ವರ್ ಸಮಸ್ಯೆಯಂತೆ ಅಧಿಕಾರಿಗಳು ಅದನ್ನು ಬಗೆಹರಿಸಿದರೆ ಚನ್ನಾಗಿರುತ್ತದೆ ಎಂದು ಫಲಾನುಭವಿಗಳಾದ ಯಲ್ಲಮ್ಮ, ಈರಮ್ಮ, ಅಮರೇಶ, ಬಬ್ರುವಾಹನ, ಯಂಕಪ್ಪ ಹೇಳಿದರು.