ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಕಂದಾಯ ಇಲಾಖೆಯ ನಾಡಕಚೇರಿ ವೆಬ್‌ಸೈಟ್ ಸರ್ವರ್ ಸಮಸ್ಯೆಯಿಂದ ಜಾತಿ, ಆದಾಯ ಪ್ರಮಾಣಪತ್ರಕ್ಕಾಗಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಪರದಾಡುವಂತಾಗಿದೆ. ಎರಡು ವಾರವಾದರೂ ಸರ್ವರ್ ಸಮಸ್ಯೆ ಬಗೆಹರಿದಿಲ್ಲ. ಒಂದೆಡೆ ಶಾಲಾ ಪ್ರವೇಶಕ್ಕೆ ಕೊನೆಯ ದಿನಾಂಕ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿದೆ.ಸರ್ಕಾರದ ಯಾವುದೇ ಯೋಜನೆ ಪಡೆಯಲು ಜಾತಿ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕೇಬೇಕು. ಆದರೆ, ಪ್ರಮಾಣ ಪತ್ರ ಪಡೆಯಲು ತಹಸೀಲ್ದಾರ್ ಕಚೇರಿಗೆ ತೆರಳಿದರೆ ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳು, ಪೋಷಕರಿಗೆ ದಾರಿ ತೋಚದಂತಾಗಿದೆ.
ಸಮಸ್ಯೆ ಏಕೆಅಧಿಕಾರಿಗಳ ಮಾಹಿತಿ ಪ್ರಕಾರ ನಾಡಕಚೇರಿಯ ವೆಬ್ ಸೈಟ್ ಅಪಡೇಟ್ ಮಾಡುವ ಕೆಲಸ ನಡೆಯುತ್ತಿದೆ. ವೆಬ್ ಸೈಟ್ ಅಪಡೇಟ್ ಮಾಡುತ್ತಿರುವುದೇ ಸಮಸ್ಯೆಗೆ ಕಾರಣವಾಗಿದೆ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಒಂದೊಂದು ಬಾರಿ ಸರ್ವರ್ ಬಂದು ಹೋಗುತ್ತದೆ. ಒಂದೆರೆಡು ದಿನದಲ್ಲಿ ಎಲ್ಲವೂ ಸರಿಯಾಗುತ್ತದೆ ಎಂಬುದು ಅಧಿಕಾರಿಗಳ ಹೇಳಿಕೆ. ಜಾತಿ ಮತ್ತು ಆದಾಯ, ಉತ್ತರ ಜೀವಿತ, ರಹವಾಸಿ, ನಿವಾಸಿ ಧೃಡೀಕರಣ ಸೇರಿದಂತೆ ಯಾವುದೇ ಅರ್ಜಿ ಸಲ್ಲಿಸಬೇಕೆಂದರೂ ಸರ್ವರ್ ಸಮಸ್ಯೆ ಎದುರಾಗಿದೆ.ತಹಸೀಲ್ದಾರ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಹೋದರೆ ಸರ್ವರ್ ಇಲ್ಲ. ಹೊರಗಡೆ ಅರ್ಜಿ ಹಾಕಿಸಿಕೊಂಡು ಬನ್ನಿ ಅಂತಾರೆ ಇನ್ನೂ ಹೊರಗಡೆ ನೆಟ್ ಸೆಂಟರ್‌ಗಳಿಗೆ ತೆರಳಿದರೆ ಅಲ್ಲೂ ಅದೇ ಸಮಸ್ಯೆ ಕಾಡುತ್ತಿದ್ದು, ಇದರಿಂದ ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗಿದೆ.
ಏನೆಲ್ಲ ಸೇವೆಗಳು ಬಂದ್ : ಸರ್ವರ್ ಸಮಸ್ಯೆಯಾಗುತ್ತಿರುವುದರಿಂದ ತಹಸೀಲ್ದಾರ್ ಕಚೇರಿಯಲ್ಲಿ ಸದ್ಯ ಜಾತಿ ಆದಾಯ ಪ್ರಮಾಣಪತ್ರ, ಒಬಿಸಿ ಪ್ರಮಾಣಪತ್ರ, ಕೃಷಿ ಸೇವೆಗಳಾದ ಬೋನೊಫೈಡ್, ವ್ಯವಸಾಯಗಾರರ ಪ್ರಮಾಣಪತ್ರ, ಸಣ್ಣ ಅತಿಸಣ್ಣ ಹಿಡುವಳಿದಾರರ ಪ್ರಮಾಣಪತ್ರ, ಸಾಮಾಜಿಕ ಭದ್ರತಾ ಸೇವೆಗಳು ಈ ಎಲ್ಲ ಸೇವೆಗಳು ನಾಡಕಚೇರಿ ವೆಬ್ ಸೈಟ್ ಮೂಲಕ ಬರುತ್ತವೆ. ಸರ್ವರ್ ಸಮಸ್ಯೆ ಎದುರಾಗಿರುವುದರಿಂದ ಈ ಸೇವೆಗಳಿಗೆ ಅರ್ಜಿ ಸಲ್ಲಿಸಲಾಗದೇ ಜನರು ಪರದಾಡುವಂತಾಗಿದೆ.ಸದ್ಯ ಶಾಲೆಗಳಿಗೆ ಪ್ರವೇಶ ಪಡೆಯಲು ಜಾತಿ ಆದಾಯ ಅತಿ ಮುಖ್ಯವಾಗಿ ಬೇಕಾಗಿದ್ದು, ಅದೇ ಸರ್ವರ್ ಇಲ್ಲದಿರುವದರಿಂದ ಪಾಲಕರಲ್ಲಿ ಆತಂಕ ಹೆಚ್ಚಿದೆ. ತಹಸೀಲ್ದಾರ ಕಚೇರಿಗೆ, ನೆಟ್ ಸೆಂಟರ್ ಗಳಿಗೆ ಜನರು ಅಲೆದಾಡುವಂತಾಗಿದೆ. ಸರ್ವರ್ ಅಪಡೇಟ್ ಮಾಡಲಾಗುತ್ತಿದೆ. ಎಲ್ಲ ಕಡೆಗಳಲ್ಲಿ ಸರ್ವರ್ ಸಮಸ್ಯೆಯಾಗಿದೆ. ಆಗಾಗ ಸರ್ವರ್ ಬರುತ್ತಿದೆ. ಆದರೆ ನಿರಂತರವಾಗಿ ಬರುತ್ತಿಲ್ಲ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಈ ಸಮಸ್ಯೆ ರಾಜ್ಯಾದ್ಯಂತ ಇದ್ದು, ಶೀಘ್ರ ಬಗೆಹರಿಯುತ್ತದೆ. ಸರ್ವರ್ ಬಂದ್ ಕೂಡಲೇ ಜಾತಿ ಆದಾಯ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲಾಗುವುದು.
-ಮಂಗಳಾ ಎಂ. ತಹಸೀಲ್ದಾರ್, ಗುಳೇದಗುಡ್ಡ