ಬಸವರಾಜ ಹಿರೇಮಠ
ಧಾರವಾಡ: ಸರ್ಕಾರ ಮುನ್ಸೂಚನೆ ಇಲ್ಲದೇ, ಮೂರು ದಿನಗಳ ಕಾಲ ನೋಂದಣಿ ಮಾಡುವ ಸರ್ವರ್ (ಸಾಫ್ಟ್‌ವೇರ್) ಬಂದ್ ಮಾಡಿ ಏಕಾಏಕಿ ಆಸ್ತಿ ನೋಂದಣಿ ಶುಲ್ಕ ಶೇ. 1ರಷ್ಟು ಏರಿಸಿದೆ. ಸರ್ಕಾರದ ಈ ನೀತಿ ಬಹಳಷ್ಟು ಜನರ ಕಂಗೆಣ್ಣಿಗೆ ಗುರಿಯಾಗಿದೆ.ನಾಗರಿಕರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆ ಒದಗಿಸುವ ಹೆಸರಿನಲ್ಲಿ ರಾಜ್ಯ ಸರ್ಕಾರ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ಆಗಸ್ಟ್ 31ರಿಂದ ವಿಧಿಸುತ್ತಿರುವ ನೋಂದಣಿ ಶುಲ್ಕ ಏರಿಕೆ ಮಾಡಿದೆ. ಶುಲ್ಕ ಏರಿಕೆಗೆ ಹಲವು ದಿನಗಳ ಮುಂಚೆಯೇ ಮಾಡಿಸಿದ್ದ ನೋಂದಣಿ ದಾಸ್ತಾವೇಜಿಗೂ ದರ ಏರಿಕೆ ಬರೆ ಬಿದ್ದಿದೆ.
ಈಗಾಗಲೇ ಸ್ಥಿರಾಸ್ತಿ ಬೆಲೆ ಗಗನಕ್ಕೆ ಏರಿದ್ದು, ಜನಸಾಮಾನ್ಯರು ಒಂದಡಿ ಜಾಗ ಖರಿದೀಸಲು ಹಿಂದೆ-ಮುಂದೆ ನೋಡುವ ಸ್ಥಿತಿ ಉಂಟಾಗಿದೆ. ಅಕ್ರಮ-ಸಕ್ರಮ ವ್ಯವಸ್ಥೆ ಸಹ ಬಂದ್ ಆಗಿದ್ದು, ಅಧಿಕೃತ ನಿವೇಶನಗಳ ಖರೀದಿಗೆ ಲಕ್ಷಗಟ್ಟಲೇ, ಹೊಲಗಳ ಖರೀದಿಗೆ ಕೋಟಿಗಟ್ಟಲೇ ಬೆಲೆ ಏರಿಕೆಯಾಗಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ರಾಜ್ಯ ಸರ್ಕಾರ, ಸ್ಥಿರಾಸ್ತಿ ಮೇಲಿನ ಮೌಲ್ಯ, ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕ ಹೀಗೆ ಆಗಾಗ ದುಪ್ಟಟ್ಟು ಶುಲ್ಕ ವಸೂಲಿ ಮಾಡುತ್ತಿರುವುದು ಜನಸಾಮಾನ್ಯರಿಗಂತೂ ಸಹಿಸದಂತಾಗಿದೆ.ಪ್ರಸ್ತುತ ಒಂದು ಲಕ್ಷ ಮೌಲ್ಯದ ಆಸ್ತಿಗೆ ಶೇ. 5.6ರಷ್ಟು ಮುದ್ರಾಂಕ ಶುಲ್ಕ, ಶೇ. 1ರಷ್ಟು ನೋಂದಣಿ ಶುಲ್ಕ ಸೇರಿ ಶೇ. 6.6ರಷ್ಟು ವಸೂತಿ ಮಾಡುತ್ತಿದ್ದ ನೋಂದಣಿ ಇಲಾಖೆಯು, ಇದೀಗ ನೋಂದಣಿ ಶುಲ್ಕವನ್ನು ಶೇ. 2ಕ್ಕೆ ಏರಿಸಿದೆ. ಜಾಗ- ಹೊಲ ಅಥವಾ ಇನ್ನಾವುದೇ ಆಸ್ತಿ ಖರೀದಿಸಬೇಕು ಎನ್ನುವ ಸಾಮಾನ್ಯರು ಜನರು ಸೇರಿದಂತೆ ಕಟ್ಟಡ ನಿರ್ಮಾಣಗಾರರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಶುಲ್ಕ ಏರಿಕೆಯಿಂದ ಕಳೆದ ಎರಡ್ಮೂರು ದಿನಗಳಲ್ಲಿಯೇ ಸಾಕಷ್ಟು ವ್ಯವಹಾರಗಳು ತಟಸ್ಥವಾಗಿ ಉಳಿದಿವೆ ಎಂದು ಧಾರವಾಡದ ದಸ್ತುಬರಹಗಾರರು ಮಾಹಿತಿ ನೀಡಿದರು.
ಸಾಫ್ಟ್‌ವೇರ್ ಬಂದ್?: ಆ. 28ರಂದು ನನ್ನೆಲ್ಲ ದಾಖಲೆಗಳು ಸಿದ್ಧವಾಗಿದ್ದು, ಆ. 28ರಿಂದ 30ರ ವರೆಗೆ ಸರ್ವಸ್ ಸಮಸ್ಯೆಯಿಂದ ಮುದ್ರಾಂಕ ಹಾಗೂ ನೋಂದಣಿ ಶುಲ್ಕ ತುಂಬಲಾಗಲಿಲ್ಲ. ಈಗ ಆ. 31ರಿಂದ ಶೇ. 1ರಷ್ಟು ನೋಂದಣಿ ಶುಲ್ಕ ಏರಿಸಿದೆ. ಈ ಮೊದಲು ₹3 ಲಕ್ಷ ನೋಂದಣಿ ಶುಲ್ಕ ತುಂಬಬೇಕಾದ ನಾನು ₹6 ಲಕ್ಷ ತುಂಬುವ ಸ್ಥಿತಿ ಬಂದಿದೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ಸಾಫ್ಟ್‌ವೇರ್ ಬಂದ್ ಇಡಲಾಗಿದೆ ಎಂದು ಜಯನಗರ ಬಡಾವಣೆಯ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.ಸರ್ಕಾರದಿಂದಲೇ ಮೋಸ: ನಾಲ್ಕು ಗುಂಟೆ ಜಾಗ ಖರೀದಿಸಿ ಬಹಳಷ್ಟು ದಿನಗಳಾಗಿತ್ತು. ಈಗಲಾದರೂ ಖರೀದಿಗೆ ಸಮಯ ಬಂತಲ್ಲ ಎಂದು ವಾರದಿಂದ ಪ್ರಯತ್ನ ಮಾಡಿ ದಾಖಲೆಗಳನ್ನು ಸಂಗ್ರಹಿಸಿ, ಎರಡು ದಿನಗಳಿಂದ ಮುದ್ರಾಂಕ ಶುಲ್ಕ ತುಂಬಲು ಪ್ರಯತ್ನಿಸುತ್ತಿದ್ದೇನೆ. ಸರ್ವಸ್ ಸಮಸ್ಯೆ ಎಂದು ಹೇಳಿ ಈಗ ಸೆ. 1ರಂದು ಸಮಯ ನಿಗದಿ ಮಾಡಿದ್ದಾರೆ. ಜತೆಗೆ ಶೇ. 1ರಷ್ಟು ಹೆಚ್ಚುವರಿ ಶುಲ್ಕ ತುಂಬಬೇಕು ಎಂದು ಹೇಳುತ್ತಿದ್ದಾರೆ. ಸರ್ಕಾರದ ನಡೆಯ ಸರಿನಾ? ಉದ್ದೇಶ ಪೂರ್ವಕವಾಗಿಯೇ ಎರಡು ದಿನಗಳ ಕಾಲ ಸರ್ವರ್ ಸಮಸ್ಯೆ ಮಾಡಿ ಈಗ ಶುಲ್ಕ ಏರಿಕೆ ಮಾಡಿದ್ದು ಮೋಸ ಅಲ್ಲವೇ? ಎಂದು ಮಾಜಿ ಸೈನಿಕರೊಬ್ಬರು ಸರ್ಕಾರ ನೀತಿ ಖಂಡಿಸಿದರು.
ಗ್ಯಾರಂಟಿಗೆ ಹೊಂದಾಣಿಕೆಯೇ?: ಈಗಾಗಲೇ ರಾಜ್ಯ ಸರ್ಕಾರದ ಈ ನಿರ್ಧಾರವನ್ನು ವಿಧಾನಸಭೆ ಉಪ ನಾಯಕ ಅರವಿಂದ ಬೆಲ್ಲದ, ಮುಖಂಡ ಅಶೋಕ ಕಾಟವೆ ಸೇರಿದಂತೆ ಹಲವರು ವಿರೋಧಿಸಿ, ಯಥಾಸ್ಥಿತಿ ಕಾಪಾಡಿಕೊಳ್ಳಲು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಒಟ್ಟಾರೆ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವ ಸಲುವಾಗಿ ರಾಜ್ಯ ಸರ್ಕಾರ ಏನೆಲ್ಲ ಕಸರತ್ತು ಮಾಡುತ್ತಿದೆ ಎಂಬುದಕ್ಕೆ ನೋಂದಣಿ ಶುಲ್ಕ ಏರಿಕೆ ಸಹ ಸಾಕ್ಷಿ.ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ: ನೋಂದಣಿ ಶುಲ್ಕ ಏರಿಕೆಯ ತೀರ್ಮಾನಕ್ಕೆ ಎಲ್ಲೆಡೆ ತೀವ್ರ ವಿರೋಧ ಆಗುತ್ತಿದ್ದರೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತರು ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ ಇದೆ. ಆದ್ದರಿಂದ ಈಗಾಗಲೇ ದಸ್ತಾವೇಜುಗಳ ನೋಂದಣಿಗೆ ಸಲ್ಲಿಸಲಾಗಿರುವ ಹಾಗೂ ಪರಿಶೀಲನೆಯಲ್ಲಿರುವ ದಸ್ತಾವೇಜುಗಳಿಗೆ ನೋಂದಣಿ ಶುಲ್ಕವನ್ನು ಮರು ಲೆಕ್ಕ ಹಾಕಲಾಗುವುದು ಮತ್ತು ಪರಿಷ್ಕೃತ ಶೇ. 2ರಂತೆ ನೋಂದಣಿ ಶುಲ್ಕ ಪಾವತಿಸಲೇಬೇಕು ಎಂದು ಕಡ್ಡಿ ಮುರಿದಂತೆ ನೋಂದಣಿ ಇಲಾಖೆ ಆಯುಕ್ತ ಮುಲ್ಲೈ ಮುಗಿಲನ್ ಸ್ಪಷ್ಟ ಸೂಚನೆ ನೀಡಿದ್ದಾರೆ.