ಧಾರವಾಡ: ಕಳೆದ ಐದು ದಿನಗಳ ಹಿಂದಷ್ಟೇ ಮನೆ ಮನೆಗಳಲ್ಲಿ ಸ್ಥಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಅದ್ಧೂರಿಯಿಂದ ಭಕ್ತರು ಭಾನುವಾರ ಸಂಜೆಯಿಂದ ರಾತ್ರಿ ವರೆಗೂ ವಿಸರ್ಜನೆ ಮಾಡಿದರು.
ಐದು ದಿನಗಳ ಕಾಲ ನಿತ್ಯವೂ ವಿಶಿಷ್ಟ ಪೂಜೆಯೊಂದಿಗೆ ಇದ್ದ ಗಣಪನಿಗೆ ಭಾನುವಾರ ಭಯ ಭಕ್ತಿಭಾವದ ವಿಶೇಷ ಪೂಜೆಯೊಂದಿಗೆ, ಪಟಾಕಿ ಸಿಡಿಸುವ ಮೂಲಕ ವಿದಾಯ ಹೇಳಲಾಯಿತು.ಬೆಳಗ್ಗೆಯಿಂದ ನಡೆದ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಹಾಗೂ ಪೂಜೆ ನಡೆದಿದ್ದು, ಕೊನೆಯದಾಗಿ ಐದನೇ ದಿನದ ಗಣಪತಿಗಳ ದರ್ಶನ ಪಡೆದ ಜನರು ಗಣೇಶ ಮೂರ್ತಿಗಳಿಗೆ ಅಂತಿಮ ಪೂಜೆ, ಆರತಿ ಮತ್ತು ವಿವಿಧ ಸಿಹಿ ತಿನಿಸುಗಳನ್ನು ನೈವೈದ್ಯ ಅರ್ಪಿಸಲಾಯಿತು.
ಕೆಲವು ಕಡೆಗಳ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸಹ 5ನೇ ದಿನ ಸಮೀಪದ ಜಲಮೂಲಗಳಿಗೆ ಕಳುಹಿಸಲಾಯಿತು. ಮೆರವಣಿಗೆಯಲ್ಲಿ ಸೌಂಡ್ ಸಿಸ್ಟಮ್, ಕರಡಿ ಮಜಲು, ಕುಂಭ, ಝಾಂಜ್ ಮೇಳ, ಭಜನಾಮೇಳ ಸೇರಿದಂತೆ ನಾನಾ ಸಾಂಸ್ಕೃತಿಕ ಕಲಾ ವೈಭವಗಳು ಕಣ್ತುಂಬಿಕೊಳ್ಳುವಂತಿತ್ತು. ಧಾರವಾಡದ ಕಮಲಾಪುರ, ಮಾಳಾಪುರ, ಎತ್ತಿನಗುಡ್ಡ, ಕಲ್ಯಾಣ ನಗರ, ಎಂ.ಆರ್. ನಗರ, ಕುಮಾರೇಶ್ವರ ನಗರ, ಸಾಧನಕೇರಿ, ಕೆಲಗೇರಿ, ನವಲೂರು, ಮದಿಹಾಳದ ತೋಟಗೇರ ಓಣಿ, ಮರಾಠಾ ಕಾಲನಿ, ಸಪ್ತಾಪುರದ ಸಾರ್ವಜನಿಕ ಗಣಪತಿ ಮೂರ್ತಿಗಳ ಭವ್ಯ ಮೆರವಣಿಗೆ ನಗರದ ಬೀದಿ ಬೀದಿಗಳಲ್ಲಿ ನಡೆಯಿತು.ಕೆಲಗೇರಿ ಕೆರೆ, ನವಲೂರು ಕೆರೆ, ಕರ್ನಾಟಕ ವಿವಿ ಭಾವಿ, ಭಾವಿಕಟ್ಟಿ ಪ್ಲಾಟ್, ಎತ್ತಿನಗುಡ್ಡ ಕೆರೆಗಳಲ್ಲಿ ಗಣೇಶ ವಿಸರ್ಜನೆ ನಡೆಯಿತು. ಒಂದು ವಿಶೇಷ ಏನೆಂದರೆ, ಈ ಹಿಂದೆ ರಾತ್ರಿ 9ರ ನಂತರ ಶುರುವಾಗಿ ತಡರಾತ್ರಿ ವರೆಗೂ ಗಣೇಶ ವಿಸರ್ಜನೆಯಾಗುತ್ತು. ಅಲ್ಲದೇ, ಬಹಳಷ್ಟು ಮನೆ ಗಣಪತಿ ಸ್ಥಾಪಿಸಿದವರು ಮನೆ ಹಿತ್ತಲು, ಆವರಣದಲ್ಲಿ ವಿಸರ್ಜಿಸಿದರು. ಈ ವರ್ಷ ಪರಿಸರ ಸ್ನೇಹಿ ಗಣೇಶ ಮೂರ್ತಿಯೊಂದಿಗೆ ದೊಡ್ಡ ಮಟ್ಟದ ಡಿಜೆ ಸದ್ದಿಲ್ಲದೇ ಸಾಂಪ್ರದಾಯಿಕ ಸದ್ದಿನೊಂದಿಗೆ ಇನ್ನೂ ಬೆಳಕಿರುವಾಗಲೇ ಗಣೇಶ ವಿಸರ್ಜನೆಯು ಪೊಲೀಸರಿಗೆ ಬಂದೋಬಸ್ತಗೆ ಹಗುರವಾಯಿತು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಧಾರವಾಡ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಹಾಗೂ ಸೇನಾ ತುಕಡಿಗಳ ಸರ್ಫಗಾವಲಿನಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಿತು. ಮೆರವಣಿಗೆ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು.