ಕನ್ನಡಪ್ರಭ ವಾರ್ತೆ ಮೈಸೂರು
ಚಾಮುಂಡೇಶ್ವರಿ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂ ಶ್ರದ್ಧಾಕೇಂದ್ರ ಟಾರ್ಗೆಟ್ ಮಾಡುವ ಮನಸ್ಥಿತಿ ತೆಗೆದು ಹಾಕಲಿ. ಹಿಂದೂಗಳ ಭಾವನಗೆ ಧಕ್ಕೆ ತರದಂತೆ ಒಳ್ಳೆಯ ಬುದ್ಧಿ ಕೊಡಲಿ ಎಂದು ದೇವಿಯ ಬಳಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.ಚಾಮುಂಡಿಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ದೇವಾಲಯ ಹಿಂದೂಗಳ ದೇವಾಲಯ ಅಲ್ಲ ಎಂದಿದ್ದಾರೆ. ಹಿಂದೂಗಳದ್ದಲ್ಲ ಎಂದರೆ ಮತ್ಯಾರದ್ದು? ನಿಮಗೆ ಧೈರ್ಯ, ಗಂಡಸ್ತನ ಇದ್ದರೆ ಮಸೀದಿ ಮುಂದೆ ನಿಂತು ಇದು ಮುಸ್ಲಿಮರದ್ದಲ್ಲ ಎಂದು ಹೇಳ್ತೀರಾ ಎಂದು ಪ್ರಶ್ನಿಸಿದರು.
ಪದೇ ಪದೇ ಹಿಂದೂ ದೇವಾಲಯಗಳ ಟಾರ್ಗೆಟ್ ಯಾಕೆ? ಚುನಾವಣೆ ಬಂದಾಗ ಮತ ರಾಜಕೀಯ ಮಾಡಿ. ಚುನಾವಣೆ ವೇಳೆ ಮುಸಲ್ಮಾನರ ಮೂಗಿಗೆ ತುಪ್ಪ ಸುರಿಯಿರಿ. ಆದರೆ, ಈಗ ಯಾಕೆ ಮತ ಓಲೈಕೆ ರಾಜಕಾರಣ ಎಂದು ಅವರು ಕಿಡಿಕಾರಿದರು.ಸೆ.1ರಂದು ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಎಲ್ಲ ಹಿಂದೂಗಳು ಬರಬೇಕು. ಚಾಮುಂಡಿಬೆಟ್ಟದ ಬಗ್ಗೆ ಪದೇ ಪದೇ ಮಾತನಾಡಿದರೆ ಚಾಮುಂಡೇಶ್ವರಿ ಚಲೋ ಕೂಡ ಮಾಡ್ತೀವಿ. ಟೂಲ್ ಕಿಟ್ ಆಗಿ ಚಾಮುಂಡೇಶ್ವರಿ ದೇವಾಲಯ ಬಳಸಿದರೆ ಹಿಂದೂಗಳು ಸಹಿಸಲ್ಲ. ಚಾಮುಂಡೇಶ್ವರಿ ತಾಯಿಯಿಂದಾನೇ ಕಾಂಗ್ರೆಸ್ ಅವನತಿ ಪ್ರಾರಂಭವಾಗುತ್ತದೆ ಎಂದು ಎಚ್ಚರಿಸಿದರು.
ಬಾನು ಮುಷ್ತಾಕ್ ಅವರು ಭುವನೇಶ್ವರಿ ಒಪ್ಪದಿದ್ದ ಮೇಲೆ ಚಾಮುಂಡೇಶ್ವರಿ ಹೇಗೆ ಒಪ್ಪುತ್ತೀರಾ ಎಂದು ಪ್ರಶ್ನಿಸಿದರು. ಬಾನು ಮುಷ್ತಾಕ್ ಕನ್ನಡ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಈ ಕುರಿತು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.‘ಧರ್ಮಸ್ಥಳ ಚಲೋ’ ಪಕ್ಷಾತೀತ; ಬಿವೈವಿ:ಸೋಮವಾರ ನಡೆಯಲಿರುವ ‘ಧರ್ಮಸ್ಥಳ ಚಲೋ’ ಪಕ್ಷಾತೀತವಾಗಿ ನಡೆಯಲಿದೆ. ಬಿಜೆಪಿ ಈ ವಿಷಯದಲ್ಲಿ ರಾಜಕೀಯ ಮಾಡುವುದಕ್ಕೆ ಮುಂದಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ಮಂಗಳೂರಿನ ಸಂಘನಿಕೇತನ ಗಣೇಶೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುವುದಾದರೆ ಎಸ್‌ಐಟಿ ರಚನೆ ಆದ ಕೂಡಲೇ ಬೀದಿಗೆ ಇಳಿಯಬೇಕಾಗಿತ್ತು. ಆದರೆ, ಎಸ್ಐಟಿ ವಿಷಯದಲ್ಲಿ ಬಿಜೆಪಿಗೆ ಭಿನ್ನಾಭಿಪ್ರಾಯ ಇಲ್ಲ. ಅಪಪ್ರಚಾರಗಳ ಹಿಂದೆ ದುಷ್ಟಶಕ್ತಿಗಳು ಅಡಗಿವೆ ಎಂಬ ಸಂದೇಹ ಇರುವುದರಿಂದ ಎನ್‌ಐಎ ಅಥವಾ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತಿದ್ದೇವೆ ಎಂದರು.ಪರದೆಯ ಹಿಂದೆ ಕೆಲಸ ಮಾಡಿದವರು ಯಾರು ಎಂಬುದು ಬಹಿರಂಗ ಆಗಬೇಕು. ಧರ್ಮಸ್ಥಳ ಪ್ರಕರಣದಲ್ಲಿ ವಿದೇಶದಿಂದ ಹಣಕಾಸಿನ ನೆರವು ಆಗಿದೆ. ಆದ್ದರಿಂದ ಸತ್ಯಾಂಶ ಹೊರಬರಬೇಕಾದರೆ ಎನ್‌ಐಎ ಅಥವಾ ಸಿಬಿಐ ತನಿಖೆಗೆ ಪ್ರಕರಣವನ್ನು ಒಪ್ಪಿಸಲೇಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.ತುಂಗಭದ್ರಾ ನೀರಿಂದ ಮಂಜುನಾಥನ ಅಭಿಷೇಕ ಮಾಡುವೆ; ಜನಾರ್ದನರೆಡ್ಡಿ:ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದ ಘಟನೆಯಿಂದ ಭಕ್ತರಲ್ಲಿ ಅಶಾಂತಿ ಮೂಡಿದೆ. ಈ ಕಾರಣಕ್ಕೆ ತುಂಗಭದ್ರಾ ನದಿಯ ನೀರಿನಿಂದ ಧರ್ಮಸ್ಥಳ ಮಂಜುನಾಥನಿಗೆ ಅಭಿಷೇಕ ನೆರವೇರಿಸಲಾಗುವುದು ಎಂದು ಶಾಸಕ ಗಾಲಿ ಜಾನರ್ದನ ರೆಡ್ಡಿ ಹೇಳಿದರು.
ಗಂಗಾವತಿ ತಾಲೂಕಿನ ಆನೆಗೊಂದಿಯ ಚಿಂತಾಮಣಿ ಬಳಿ ತುಂಗಭದ್ರಾ ನದಿಯಲ್ಲಿ ಗಂಗೆ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ದೇಶದಲ್ಲಿರುವ ಹಿಂದೂ ಧಾರ್ಮಿಕ ಕೇಂದ್ರಗಳು ಸೇರಿದಂತೆ ದೇವಾಲಯಗಳಿಗೆ ಅಪಪ್ರಚಾರ ನಿರಂತರವಾಗಿ ನಡೆಯುತ್ತಿದೆ ಎಂದರು. ಬಳ್ಳಾರಿ ಮೂಲದ ಅನ್ಯಧರ್ಮದ ವ್ಯಕ್ತಿಯೊಬ್ಬ ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಪ್ರಚಾರ ನಡೆಸಲು ಮುಂದಾಗಿದ್ದಾನೆ. ಅವನಿಗೆ ಕೆಲವರು ಕೈ ಜೋಡಿಸಿದ್ದಾರೆ. ಇದಕ್ಕೆ ಮುಸುಕುಧಾರಿಗಳು ಬೆಂಬಲವಿದೆ. ದೆಹಲಿ ಮಟ್ಟದ ಐಎಎಸ್ ಅಧಿಕಾರಿಗಳು, ಶಶಿಕಾಂತ ಸೆಂಥಿಲ್ ಜತೆಗೆ ಹಲವರು ಭಾಗಿಯಾಗಿದ್ದಾರೆ. ಈ ಕುರಿತು ಎನ್‌ಐಎಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಮೈಸೂರು ದಸರಾ ಉದ್ಘಾಟನೆ ವಿಚಾರವಾಗಿ ಬಾನು ಮುಸ್ತಾಕ್ ಹೂ ಮುಡಿದು, ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರೆ ಅಭ್ಯಂತರ ಇಲ್ಲ ಎಂದರು.