ಮುಳಗುಂದ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಿಕೆಯಿಂದ ನಾಯಕತ್ವ ಗುಣ, ರಾಷ್ಟ್ರಪ್ರೇಮ ಹಾಗೂ ಸೇವಾ ಮನೋಭಾವನೆ ಬೆಳೆಯುತ್ತದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಪಾಟೀಲ ಹೇಳಿದರು.
ಸಮಾಜದಲ್ಲಿ ಬದಲಾವಣೆ ಕಾಣಬೇಕಾದರೆ. ಅದು ನಮ್ಮಿಂದ ಬದಲಾವಣೆಯಾಗಬೇಕೆಂಬ ಮನೋಭಾವನೆ ಬೆಳೆಸಿಕೊಳ್ಳಿ. ಈ ಯೋಜನೆಯಲ್ಲಿ ಭಾಗವಹಿಸಿದ ಸ್ವಯಂ ಸೇವಕರು ನೀವು ಆಯ್ಕೆ ಮಾಡಿದ ಗ್ರಾಮದ ಒಂದು ಕುಟುಂಬಕ್ಕೆ ಶಾಶ್ವತವಾಗಿ ಗುರುತಿಸುವಂತಹ ಕೆಲಸ ಮಾಡಿ. ಮನೆ ಭೇಟಿ ಕಾರ್ಯಕ್ರಮದಿಂದ ಅಲ್ಲಿನ ಸಮಸ್ಯೆ, ವಿದ್ಯಾಭ್ಯಾಸ, ಉದ್ಯೋಗಗಳ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಕಂಡು ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡುವ ಮೂಲಕ ಶಾಶ್ವತವಾಗಿ ಗುರುತಿಸುವಂತಹ ಕೆಲಸ ಮಾಡಿದಾಗ ನನಗಲ್ಲ, ನಿನಗೆ ಎಂಬ ಯೋಜನೆಯ ಧ್ಯೇಯವಾಕ್ಯದಂತೆ ನಿಮ್ಮ ಪಾತ್ರ ಅಲ್ಲಿ ಕಾಣಬಹುದು ಎಂದು ತಿಳಿಸಿದರು.
ಕಾರ್ಯಕ್ರಮಾಧಿಕಾರಿ ಎಂ.ಬಿ. ಕುರಬಗೌಳಿ ಪ್ರಾಸ್ತಾವಿಕವಾಗಿ ಮಾತನಾಡಿ, 1969 ಸೆ. 24ರಂದು ರಾಷ್ಟ್ರದಲ್ಲಿ ಎನ್.ಎಸ್.ಎಸ್ ಆರಂಭವಾಯಿತು. ಮಹಾತ್ಮ ಗಾಂಧೀಜಿಯವರು ದೇಶದಲ್ಲಿ ಗ್ರಾಮ ಸ್ವರಾಜ್ಯದ ಕನಸ್ಸನ್ನ ಕಂಡರು ಅದರ ಪ್ರತಿಫಲವೇ ರಾಷ್ಟ್ರೀಯ ಸೇವಾ ಯೋಜನೆಯಾಗಿ ರೂಪಗೊಂಡಿತು. ಇದರಲ್ಲಿ ಸಂಬಂಧ ಬೆಳೆಸಿಕೊಳ್ಳುವುದು, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು, ಹೊಂದಾಣಿಕೆ, ಸಹಬಾಳ್ವೆಯ ಜೀವನ ಸಹಿತ ಸ್ವಾವಲಂಬಿ ಹಾಗೂ ಸ್ವತಂತ್ರ ಬದುಕು ರೂಪಿಸುವ ಜೀವನಪಾಠ ಎನ್ನೆಸ್ಸೆಸ್ ಕಲಿಸುತ್ತದೆ. ಕರ್ತವ್ಯ ಅರ್ಥ ಮಾಡಿಕೊಂಡು ಮೌಲ್ಯಾಧಾರಿತ ಬದುಕನ್ನು ರೂಪಿಸಲು ಇದೊಂದು ವೇದಿಕೆ. ವೃತ್ತಿ ಗೌರವ, ವ್ಯಕ್ತಿ ಗೌರವ ಬೆಳೆಸಿಕೊಳ್ಳುವುದು, ಸಾಮುದಾಯಿಕ, ಪರಿಸರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅದನ್ನು ಪರಿಹರಿಸುವ ಪ್ರಯತ್ನಕ್ಕೆ ಮುಂದಾಗುವುದನ್ನು ತಿಳಿಸಿಕೊಡುತ್ತದೆ ಎಂದರು.ನಮ್ಮ ಮಹಾವಿದ್ಯಾಲಯದಲ್ಲಿ 1999-2000 ಸಾಲಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಪ್ರಾರಂಭಿಸಲಾಯಿತು. ಪ್ರತಿ ವರ್ಷ ವಿಶೇಷ ಶಿಬಿರ ಹಮ್ಮಿಕೊಂಡು ಅನೇಕ ರೀತಿಯ ಜನಹಿತಾ ಸೇವಾ ಚಟುವಟಿಕೆ ಮಾಡುತ್ತಾ ಬಂದಿದ್ದೇವೆ. ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ, ಶ್ರಮದಾನ, ಪ್ರಗತಿಪರ ಚಿಂತನೆ, ಪ್ರಾಕೃತಿಕ ವಿಕೋಪ ಮತ್ತು ಪ್ರಕೃತಿ ಸಂರಕ್ಷಣೆ, ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳು, ಮಕ್ಕಳು ಮತ್ತು ಮಹಿಳಾ ಸಂರಕ್ಷಣೆ, ರಾಷ್ಟ್ರೀಯ ಜಾಗೃತಿ ಮೂಡಿಸುವ ಉದ್ದೇಶ ಎನ್ನೆಸ್ಸೆಸ್ ಹೊಂದಿದೆ ಎಂದು ತಿಳಿಸಿದರು.
ಈ ವೇಳೆ ಡಾ. ಎಸ್.ಸಿ. ಚವಡಿ, ಪಪಂ ಸದಸ್ಯ ವಿಜಯ ನೀಲಗುಂದ ಮಾತನಾಡಿದರು.ಪಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಉಪಾಧ್ಯಕ್ಷೆ ಅನುಸೂಯಾ ಸೋಮಗಿರಿ, ಬಾ.ಮ.ಶಿ.ಶಿ.ಸ ಸದಸ್ಯ ಪಿ.ಎ.ವಂಟಕರ, ಪಪಂ ಸದಸ್ಯರಾದ ಮಹಾದೇವಪ್ಪ ಗಡಾದ, ಮಹಾಂತೇಶ ನೀಲಗುಂದ, ಹೊನ್ನಪ್ಪ ಹಳ್ಳಿ, ಅಶೋಕ ಹುಣಸಿಮರದ, ದಾವುದ್ ಜಮಾಲಸಾಬನವರ, ನೀಲವ್ವ ಅಸುಂಡಿ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಪ್ರಾ. ಎ.ಎಂ.ಅಂಗಡಿ, ಉಪನ್ಯಾಸಕರಾದ ಸಿ.ಎಚ್. ದೊಡ್ಡಮನಿ, ಆರ್.ಆರ್. ಪಟ್ಟಣ, ಸಿ.ಎಸ್. ಉಮಚಗಿ, ಎಸ್.ಆರ್. ಹಿರೇಗೌಡ್ರ ಸೇರಿದಂತೆ ಸ್ವಯಂ ಸೇವಕರು ಇದ್ದರು. ಉಪನ್ಯಾಸಕ ಎಂ.ಎನ್. ಅಳಲಗೇರಿ ನಿರೂಪಿಸಿದರು.