ಸೇವಾ ಶಿಬಿರದಿಂದ ವ್ಯಕ್ತಿತ್ವ ವಿಕಸನ ಸಾಧ್ಯ

KannadaprabhaNewsNetwork | Published : May 1, 2025 12:46 AM

ಸಾರಾಂಶ

ದೊಡ್ಡ ಪ್ರಮಾಣದ ಕೈಗಾರಿಕೆ ಸ್ಥಾಪನೆಯಿಂದ ನಾವೇಲ್ಲ ವಿನಾಶದ ಕಾಲಘಟ್ಟಕ್ಕೆ ಹೋಗುತ್ತಿದ್ದೇವೆ

ಹೂವಿನಹಡಗಲಿ: ಕಾಲೇಜು ಹಂತದಲ್ಲಿ ಜರುಗುವ ವಿಶೇಷ ಸೇವಾ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಕೊಟ್ಟೂರು ಇಂದು ಕಾಲೇಜಿನ ಉಪನ್ಯಾಸಕ ಎಂ. ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ಮಾಗಳ ಗ್ರಾಮದಲ್ಲಿ ಜಿಬಿಆರ್‌ ಕಾಲೇಜು ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಸೇವಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯ, ಅಕ್ಷರ, ಸ್ವಚ್ಛತೆ, ಪರಿಸರದ ಮಹತ್ವ ಕುರಿತು ಅರಿವು ಮೂಡಿಸುವಂತಹ ಈ ಕಾರ್ಯ ವಿದ್ಯಾರ್ಥಿ ಬದುಕಿನಲ್ಲಿ ಮಹತ್ವದಾಗಿದೆ ಎಂದರು.

ದೊಡ್ಡ ಪ್ರಮಾಣದ ಕೈಗಾರಿಕೆ ಸ್ಥಾಪನೆಯಿಂದ ನಾವೇಲ್ಲ ವಿನಾಶದ ಕಾಲಘಟ್ಟಕ್ಕೆ ಹೋಗುತ್ತಿದ್ದೇವೆ, ಪರಿಸರ ನಾಶ, ಪಕ್ಷಿ ಸಂಕುಲಗಳು ಕ್ಷೀಣಿಸುತ್ತಿವೆ, ಜನರಲ್ಲಿ ರೋಗ ರುಜಿನಗಳಿಂದ ಬಾಧೆ ಹೆಚ್ಚಾಗುತ್ತಿದೆ. ಆದರಿಂದ ನಾವೇಲ್ಲ ಜಾಗೃತರಾಗಬೇಕಿದೆ. ಸೇವಾ ಶಿಬಿರಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಗಾಂಧೀಜಿ ಕಂಡ ರಾಮ ರಾಜ್ಯದ ಕನಸನ್ನು ನನಸು ಮಾಡಬೇಕಿದೆ ಎಂದರು.

ಪಿಡಿಒ ಮಹ್ಮದ್‌ ಗೌಸ್‌ ಬಿಲ್ಲುಖಾನ್‌ ಇವರು ವಿದ್ಯಾರ್ಥಿ ಜೀವನದಲ್ಲಿ ಎನ್‌ಎಸ್‌ಎಸ್‌ನ ಪಾತ್ರ ಕುರಿತು ಮಾತನಾಡಿ, ಗ್ರಾಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿ ನರೇಗಾ ಯೋಜನೆಯ ಮೂಲಕ ದುಡಿಯುವ ಅಕುಶಲ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತಿದೆ. ಜತೆಗೆ ಗ್ರಾಮ ಸಂಪರ್ಕ ರಸ್ತೆ ನಿರ್ಮಾಣ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕಿ ಶ್ವೇತಾ ಮಾತನಾಡಿ, ಸ್ವಾಮಿ ವಿವೇಕಾನಂದರು ಅಲ್ಪ ಅವಧಿಯಲ್ಲೇ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಆದರ್ಶ ಅಳವಡಿಸಿಕೊಳ್ಳಬೇಕಿದೆ. ನಮ್ಮ ಜೀವನ ಶೈಲಿ ಬದಲಾವಣೆ ಮಾಡುವ ಶಕ್ತಿ ಎನ್‌ಎಸ್‌ಎಸ್‌ ಶಿಬಿರಕ್ಕೆ ಇದೆ. ವಿದ್ಯಾರ್ಥಿಗಳು ಸಮಯ ಪ್ರಜ್ಞೆಗೆ ಹೆಚ್ಚು ಮಹತ್ಯ ನೀಡಬೇಕೆಂದು ಹೇಳಿದರು.

ಉಪನ್ಯಾಸಕ ವಿರೂಪಾಕ್ಷಪ್ಪ ಬಡಿಗೇರ, ಕಂದಾಯ ನಿರೀಕ್ಷಕ ಎಂ. ಮನೋಹರ, ಪ್ರಗತಿ ಪರ ರೈತ ಜ್ಯೋತಿ ಕೊಟ್ರೇಶ, ಗ್ರಾಪಂ ಸದಸ್ಯರಾದ ಎಂ.ವಿದ್ಯಾ,ಟಿ. ಅಮೀರ್‌, ಡಿ.ರಮೇಶ, ಶಿಬಿರಾಧಿಕಾರಿ ಕೆ.ಮಾಬುಸಾಬ್‌, ಡಾ. ಶರಣಪ್ಪ ಜಕ್ಕಲಿ, ಆರ್‌.ಬಿ. ಪ್ರಿಯಾಂಕ ಸೇರಿದಂತೆ ಇತರರಿದ್ದರು.

Share this article