ಸೇವಾ ನ್ಯೂನತೆ: ಎಸ್‌ಬಿಐಗೆ ದಂಡ

KannadaprabhaNewsNetwork | Published : Jun 1, 2024 12:45 AM

ಸಾರಾಂಶ

ದೂರುದಾರನ ಖಾತೆ ಧಾರವಾಡದ ಮುಖ್ಯ ಶಾಖೆಯಲ್ಲಿದ್ದರೂ, ಅವರ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಗೃಹ ಸಾಲದ ಬಾಕಿ ₹44 ಸಾವಿರ ಅವರ ಖಾತೆಯಿಂದ ಸರ್ಕಾರದ ಖಾತೆಗೆ ಡಿಡಿ ಮೂಲಕ ಸಂದಾಯ ಮಾಡಲು ಬ್ಯಾಂಕಿಗೆ ನಿರ್ದೇಶನ ನೀಡಿತ್ತು. ಸ್ಟೇಟ್‌ ಬ್ಯಾಂಕ್‌ 2002-03ರಿಂದ 2022ರ ವರೆಗೆ ಗೃಹ ಸಾಲದ ಮರುಪಾವತಿಗೆ ಕ್ರಮಕೈಗೊಂಡಿರಲಿಲ್ಲ.

ಧಾರವಾಡ:

ಸೇವಾ ನ್ಯೂನತೆ ಎಸಗಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ ಜಿಲ್ಲಾ ಗ್ರಾಹಕ ಆಯೋಗ ದಂಡ ವಿಧಿಸಿ ಆದೇಶಿಸಿದೆ.

ಇಲ್ಲಿನ ಶಿವಗಿರಿಯ ನಿವಾಸಿ ಈ.ಸಿ. ವಿಜಯಕುಮಾರ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಕೋರ್ಟ್‌ನಲ್ಲಿ ಶಿರಸ್ತೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. 2001ಕ್ಕೆ ಸ್ವಯಂ ನಿವೃತ್ತಿ ಪಡೆದಿದ್ದರು. ಸೇವಾ ಅವಧಿಯಲ್ಲಿ ಸರ್ಕಾರದಿಂದ ಹೌಸಿಂಗ್‌ ಲೋನ್‌ ಪಡೆದಿದ್ದರು. ನಿವೃತ್ತಿ ಹೊಂದುವ ಕಾಲಕ್ಕೆ ಗೃಹ ಸಾಲದ ಬಾಕಿ ₹ 44 ಸಾವಿರ ಉಳಿದಿತ್ತು. ಇವರ ಪಿಂಚಣಿ ನಿಗದಿಪಡಿಸುವಾಗ ಅಕೌಂಟೆಂಟ್‌ ಜನರಲ್‌ ಕಚೇರಿ ಅವರು ₹44 ಸಾವಿರ ತಡೆ ಹಿಡಿದಿದ್ದರು. ಆ ಹಣವನ್ನು ಸರ್ಕಾರದ ಸಾಲದ ಖಾತೆಗೆ ತುಂಬುವಂತೆ ಜಿಲ್ಲಾ ಖಜಾನೆಗೆ ನಿರ್ದೇಶನ ನೀಡಿದ್ದರು.

ನಿವೃತ್ತಿಯಾದ ಬಳಿಕ ಧಾರವಾಡದಲ್ಲಿ ನೆಲೆಸಿದ್ದ ಕಾರಣ ಪಿಂಚಣಿ ದಾಖಲೆಗಳು ಜಿಲ್ಲಾ ಖಜಾನೆ ಕಚೇರಿ ಅವರು ಧಾರವಾಡ ಸ್ಟೇಟ್‌ ಬ್ಯಾಂಕಿನ ಮುಖ್ಯ ಶಾಖೆಗೆ ಮುಂದಿನ ಕ್ರಮಕ್ಕೆ2001-02ರಲ್ಲಿ ಕಳುಹಿಸಿದ್ದರು. ಆಗಿನಿಂದ ದೂರುದಾರನ ಖಾತೆ ಧಾರವಾಡದ ಮುಖ್ಯ ಶಾಖೆಯಲ್ಲಿದ್ದರೂ, ಅವರ ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಗೃಹ ಸಾಲದ ಬಾಕಿ ₹44 ಸಾವಿರ ಅವರ ಖಾತೆಯಿಂದ ಸರ್ಕಾರದ ಖಾತೆಗೆ ಡಿಡಿ ಮೂಲಕ ಸಂದಾಯ ಮಾಡಲು ಬ್ಯಾಂಕಿಗೆ ನಿರ್ದೇಶನ ನೀಡಿತ್ತು. ಸ್ಟೇಟ್‌ ಬ್ಯಾಂಕ್‌ 2002-03ರಿಂದ 2022ರ ವರೆಗೆ ಗೃಹ ಸಾಲದ ಮರುಪಾವತಿಗೆ ಕ್ರಮಕೈಗೊಂಡಿರಲಿಲ್ಲ. ಈ ಬಗ್ಗೆ ದೂರುದಾರರು ಹಲವಾರು ಬಾರಿ ಬ್ಯಾಂಕಿಗೆ ಹೋಗಿ ವಿನಂತಿಸಿದರೂ ಕ್ರಮ ಕೈಗೊಂಡಿರಲಿಲ್ಲ.

ದೂರುದಾರನ ಗೃಹ ಸಾಲದ ಬಾಕಿ ಇನ್ನೂ ಪಾವತಿ ಆಗದಿರುವ ಬಗ್ಗೆ ಬೆಂಗಳೂರಿನ ಎ.ಜಿ. ಕಚೇರಿ ಅವರು ಹೈ ಕೋರ್ಟಗೆ 2022ರಲ್ಲಿ ಪತ್ರ ಬರೆದಿದ್ದರು. ಅದನ್ನು ಆಧರಿಸಿ ಗೃಹ ಸಾಲದ ಬಾಕಿ ಮೊತ್ತ ತಕ್ಷಣ ಮರುಪಾವತಿಸುವಂತೆ ಹೈಕೋರ್ಟ್‌ನಿಂದ ದೂರುದಾರನಿಗೆ ಸೂಚನೆ ಬಂತು. ₹44 ಸಾವಿರ ಗೃಹ ಸಾಲದ ಬಾಕಿಯ ಮೇಲೆ ಬಡ್ಡಿ ವಗೈರೆ ಸೇರಿಸಿ ಒಟ್ಟು ₹1.61,469 ದೂರುದಾರ ಚಲನ ಮೂಲಕ ಸರ್ಕಾರಕ್ಕೆ ಪಾವತಿಸಿದ್ದರು.

₹44 ಸಾವಿರ ಬದಲಿಗೆ ₹1.61 ಲಕ್ಷ ತುಂಬುವಂತೆ ಆಗಿತ್ತು. ಈ ಹಿನ್ನೆಲೆಯಲ್ಲಿ ದೂರುದಾರ ವಿಜಯಕುಮಾರ ಅವರು, ಗ್ರಾಹಕ ಹಿತರಕ್ಷಣಾ ಆಯೋಗಕ್ಕೆ 2023ರ ಮಾ. 6ರಂದು ದೂರು ಸಲ್ಲಿಸಿದ್ದರು. ಈ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಅವರು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಸೇವಾ ನ್ಯೂನತೆ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಸರ್ಕಾರಕ್ಕೆ ಬಡ್ಡಿ ಸಮೇತ ಕಟ್ಟಿರುವ ₹1.61,469 ಹಾಗೂ ಅದರ ಮೇಲೆ ಆ ದಿನಾಂಕದಿಂದ ಶೇ. 8ರಷ್ಟು ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ನೀಡಬೇಕು. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ ಅವರಿಗೆ ₹1 ಲಕ್ಷ ಪರಿಹಾರ ಹಾಗೂ ₹10 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಬ್ಯಾಂಕಿಗೆ ಆದೇಶಿಸಿದೆ.

Share this article