ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರಕಾರಿ ಸೇವೆಯಲ್ಲಿ ವರ್ಗಾವಣೆ ಸಾಮಾನ್ಯ. ನನ್ನ ಎರಡು ವರ್ಷಗಳ ಅವಧಿಯಲ್ಲಿ ಶಿಕ್ಷಕ ಸಮೂಹ ಮತ್ತು ಬಿ ಆರ್ ಸಿ ವಿಭಾಗ ನನ್ನೊಂದಿಗೆ ಕೈ ಜೋಡಿಸಿ ಇಲಾಖೆ ಮತ್ತು ಸಮುದಾಯದ ಆಶಯಕ್ಕೆ ಅನುಗುಣವಾಗಿ ಸೇವೆ ಮಾಡಲು ಸಹಕರಿಸಿದ್ದೀರಿ ಮತ್ತು ಸೋದರಂತೆ ನನ್ನನ್ನು ಕಂಡಿದ್ದೀರಿ ಎಂದು ವರ್ಗಾವಣೆಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಹೇಳಿದರು.ಸೋಮವಾರ ಕರ್ತವ್ಯದಿಂದ ಬಿಡುಗಡೆ ಹೊಂದಿದ ಅವರನ್ನು ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಮತ್ತು ಕ್ಷೇತ್ರ ಸಮನ್ವಯ ಅಧಿಕಾರಿ ಹಾಗೂ ಸಿಆರ್ ಪಿ, ಬಿಆರ್ ಪಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಆಡಳಿತಾತ್ಮಕ ಮತ್ತು ಶೈಕ್ಷಣಿಕವಾಗಿ ನನ್ನ ಆಶಯಕ್ಕೆ ಎಲ್ಲರೂ ಸ್ಪಂದಿಸಿದ್ದೀರಿ, ಎರಡು ವರ್ಷಗಳ ಸೇವೆ ನನಗೆ ತೃಪ್ತಿ ತಂದಿದೆ ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್ ಮಾತನಾಡಿ, ಮಾಹಿತಿಗಳನ್ನು ಕೊಡುವಲ್ಲಿ ಜಿಲ್ಲೆಯಲ್ಲಿ ಅರಸೀಕೆರೆ ತಾಲೂಕು ಪ್ರಥಮ ಸ್ಥಾನದಲ್ಲಿರುತ್ತದೆ, ಇದಕ್ಕೆ ಮೋಹನ್ ಕುಮಾರ್ ಅವರ ಮಾರ್ಗದರ್ಶನ ಕಾರಣವಾಗಿದೆ. ನಮ್ಮ ಸಿ ಆರ್ ಪಿ, ಬಿ ಆರ್ ಪಿ ಹಾಗೂ ಕಚೇರಿ ಸಿಬ್ಬಂದಿ ಬಹಳ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯೋಗೇಶ್ ಮಾತನಾಡಿ, ತಾಪಂ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಒಳ್ಳೆಯ ಬಾಂಧವ್ಯ ಈ ತಾಲೂಕಿನಲ್ಲಿದೆ. ಬಿಸಿ ಊಟ ಯೋಜನೆ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಮೋಹನ್ ಕುಮಾರ್ ಅವರು ಸಹ ಅವಲೋಕಿಸುತ್ತಿದ್ದರು. ಸಹಕಾರ, ಮಾರ್ಗದರ್ಶನವನ್ನು ಅವರು ನೀಡಿದ್ದಾರೆ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸದಾನಂದ ಮೂರ್ತಿ ಮಾತನಾಡಿ,ಮೋಹನ್ ಕುಮಾರ್ ಅವರು ಉತ್ತಮವಾಗಿ ಸ್ಪಂದಿಸುತ್ತಿದ್ದರು. ಸಮಸ್ಯೆ ಹೊತ್ತು ಶಿಕ್ಷಕರು ಕಚೇರಿಯತ್ತ ಬರುವಂತೆ ಮಾಡುತ್ತಿರಲಿಲ್ಲ. ಬಹಳ ಸೌಮ್ಯ ಸ್ವಭಾವವುಳ್ಳವರಾಗಿದ್ದು, ಶಿಕ್ಷಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎಂದು ಹೇಳಿದರು.ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್, ಕಾರ್ಯದರ್ಶಿ ಧನಂಜಯ ಮೂರ್ತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ್, ಕಾರ್ಯದರ್ಶಿ ಪ್ರಸನ್ನ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯ ಸಂಘದ ನಿರ್ದೇಶಕ ಓಂಕಾರ ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್, ತಾಲೂಕು ಕಾರ್ಯದರ್ಶಿ ಜಯರಾಮ್ ಮತ್ತು ನಿರ್ದೇಶಕರು, ಸಿಆರ್ ಪಿ, ಬಿಆರ್ ಪಿ ಗಳು, ಬಿಒ ಕಚೇರಿ ವರ್ಗ ಮೋಹನ್ ಕುಮಾರ್ ಅವರನ್ನು ಅಭಿನಂದಿಸಿ, ಬೀಳ್ಕೊಟ್ಟರು.