ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ನಿರ್ಮಾಣ, ರಾಜಕಾಲುವೆ ಸಮಸ್ಯೆ, ಮೂಲ ಸೌಕರ್ಯಗಳಿಗಾಗಿ ಆಗ್ರಹಿಸಿ ಮಾಲೇಮಾರ್, ಕುಂಟಿಕಾನ, ಮಾಲಾಡಿ ನಿವಾಸಿಗಳು ಜನ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕೊಟ್ಟಾರಚೌಕಿ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿದರು.
ಬೇಡಿಕೆಗಳೇನು?: ಮಾಲೆಮಾರ್- ಕುಂಟಿಕಾನದಿಂದ ಕೊಟ್ಟಾರಚೌಕಿವರೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕು. ಕೊಟ್ಟಾರ ಚೌಕಿ ಜಂಕ್ಷನ್‌ನಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು. ಕೊಟ್ಟಾರಚೌಕಿ ಜಂಕ್ಷನ್‌ನಲ್ಲಿ ಪಾದಚಾರಿಗಳು ರಸ್ತೆ ದಾಟಲು ವ್ಯವಸ್ಥೆ ಮಾಡಬೇಕು ಹಾಗೂ ಬಸ್ ಬೇ, ಶೌಚಾಲಯ ನಿರ್ಮಿಸಬೇಕು. ಕೋಡಿಕಲ್ ಕ್ರಾಸ್ ಬಳಿ ಅತಿಕ್ರಮಣ ತೆರವು ಮಾಡಬೇಕು. ಕೋಡಿಕಲ್ ಕ್ರಾಸ್ ಬಳಿ ಅಪಘಾತಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ರಾಜಕಾಲುವೆ ಅತಿಕ್ರಮಣ ತೆರವು ಮಾಡಬೇಕು. ಮಳೆ ನೀರು ಹರಿಯಲು ಅವಕಾಶ ಮಾಡಿ ಪ್ರವಾಹ ತಪ್ಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.ದರಣಿಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಮುಂದಾಳು ಕುಮಾರ್ ಮಾಲೆಮಾರ್, ಮಾಲೆಮಾರ್ ಕ್ರಾಸ್‌ನಿಂದ ಕೊಟ್ಟಾರಚೌಕಿ ಕಡೆಗೆ ಬರಲು ಸರ್ವಿಸ್ ರಸ್ತೆ ಇಲ್ಲದೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಬಗ್ಗೆ 2016ರಿಂದಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಅಧಿಕಾರಿಗಳು, ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ. ಈ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎದುರು ಪ್ರತಿಭಟನೆ, ಹೆದ್ದಾರಿ ತಡೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಸ್ಥಳೀಯ ಮುಖಂಡ ವಿಜಯ ಕುಮಾರ್ ಮಾತನಾಡಿ, ಕೊಟ್ಟಾರಚೌಕಿ- ಕುಂಟಿಕಾನ ರಸ್ತೆಯನ್ನು ಅಪಘಾತ ವಲಯ ಎಂದು ಗುರುತಿಸಿ ಹಲವು ವರ್ಷ ಕಳೆದರೂ ಇದುವರೆಗೂ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ ಎಂದರು.
ಮಾಜಿ ಕಾರ್ಪೊರೇಟರ್ ದಯಾನಂದ್ ಮಾತನಾಡಿ, ಮಾಲೆಮಾರ್- ಕೊಟ್ಟಾರ ಜಂಕ್ಷನ್ ಸರ್ವಿಸ್ ರಸ್ತೆಗೆ ಸ್ಥಳಾವಕಾಶವಿದೆ. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆ ನಿರ್ಮಾಣ ಆಗುತ್ತಿಲ್ಲ ಎಂದು ಆರೋಪಿಸಿದರು.ಸಾಮಾಜಿಕ ಹೋರಾಟಗಾರ ವಿಷ್ಣುಮೂರ್ತಿ ಭಟ್, ಶಿವನ್, ಯಶವಂತ್, ಸ್ಥಳೀಯರಾದ ಶ್ಯಾಮಲಾ ಮತ್ತಿತರರು ಇದ್ದರು. ಕೊಟ್ಟಾರಚೌಕಿ ಆಟೋರಿಕ್ಷಾ ಚಾಲಕರು ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.