ಜೀವನದ ಸಾರ್ಥಕತೆಗೆ ಸೇವೆ, ತ್ಯಾಗ, ಕಾಯಕ ಅಗತ್ಯ: ಬಳಗಾನೂರು ಶಿವಶಾಂತವೀರ ಶರಣರು

KannadaprabhaNewsNetwork |  
Published : Jun 23, 2025, 11:46 PM ISTUpdated : Jun 23, 2025, 11:47 PM IST
ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಬಳ್ಳಾರಿಯ ಬಸವಭವನದಲ್ಲಿ ಜರುಗಿದ ವಿವಿಧ ಕಾರ್ಯಕ್ರಮಗಳಿಗೆ ಬಳಗಾನೂರು ಶಿವಶಾಂತವೀರ ಶರಣರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಜೀವನದ ಸಾರ್ಥಕತೆಗೆ ಮಾನವೀಯತೆ, ಸೇವೆ, ತ್ಯಾಗ, ಕಾಯಕ ಅತಿ ಅಗತ್ಯ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಜೀವನದ ಸಾರ್ಥಕತೆಗೆ ಮಾನವೀಯತೆ, ಸೇವೆ, ತ್ಯಾಗ, ಕಾಯಕ ಅತಿ ಅಗತ್ಯ ಎಂದು ಬಳಗಾನೂರು ಶಿವಶಾಂತವೀರ ಶರಣರು ತಿಳಿಸಿದರು.

ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಇಲ್ಲಿನ ಬಸವಭವನದಲ್ಲಿ ಜರುಗಿದ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪರಮ ಪೂಜ್ಯ ಶ್ರೀ ಶಿವಶಾಂತವೀರ ಶರಣರ ತುಲಾಭಾರ ಹಾಗೂ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶರಣರು ಕಾಡು ಸೇರಿ ಸಾಧನೆ ಮಾಡಿದವರಲ್ಲ. ನಾಡಿನಲ್ಲಿ ಜನರೊಂದಿಗೆ ಇದ್ದು ಸಾಧನೆಯನ್ನು ಮಾಡಿ ಸದ್ಗತಿ ಸಾಧಿಸಿದವರು. ಗುರುವಿಗೆ ಶರಣಾದೊಡೆ ಸಾಧನೆ ಮತ್ತು ಯಶಸ್ಸು ಹಿಂಬಾಲಿಸುತ್ತವೆ. ಮೌಲ್ಯಯುತ ವಿಚಾರಗಳು ಮಾನವನ ಪ್ರಗತಿಗೆ ಪೂರಕವಾಗುತ್ತವೆ ಎಂದರು.

ಮಹಾತ್ಮರು, ಶರಣರು, ಸಾಧುಗಳು ಮತ್ತು ಸಂತರ ಬದುಕಿನಲ್ಲಿ-ನುಡಿಗಳಲ್ಲಿ ಮೌಲ್ಯಗಳು-ಆದರ್ಶಗಳು ಮತ್ತು ಸಂಸ್ಕಾರಗಳು ಅಡಗಿರುತ್ತವೆ. ಮುಗ್ಧವಾದ ಭಕ್ತಿ, ಶ್ರದ್ಧೆಯ ಸ್ಮರಣೆ, ವಿಶ್ವಾಸಗಳಿಂದ ಮಹಾತ್ಮರನ್ನು-ಶರಣರನ್ನು ಸ್ಮರಿಸಿದಲ್ಲಿ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಶ್ರೀಗಳು ತಿಳಿಸಿದರು.

ಯರನಾಳ ಹಿರೇಮಠ ಸಂಸ್ಥಾನದ ಶಿವಪ್ರಸಾದ ದೇವರು ಮಾತನಾಡಿ, ತಾಯಿಯೇ ದೇವರು. ಭೂಮಿಗಿಂತಲೂ ದೊಡ್ಡದೇವರು ತಾಯಿ. ತಾಯಿಯ ಸೇವೆಯನ್ನು ಮಾಡುವುದು ಸಾಕ್ಷಾತ್ ದೇವರ ಸೇವೆ ಮಾಡಿದಂತೆ. ಚಿಕೇನಕೊಪ್ಪದ ಚನ್ನವೀರ ಶರಣರು ಮಾತೆಯರನ್ನು ಗೌರವಿಸಲು-ಅಭಿನಂದಿಸಲಿಕ್ಕಾಗಿಯೇ ಉಡಿ ತುಂಬುವ ಕಾರ್ಯ ಪ್ರಾರಂಭಿಸಿದ್ದಾರೆ ಎಂದರು.

ಇಂದಿನ ದಿನಗಳಲ್ಲಿ ವಿದ್ಯೆ ಎಲ್ಲರಿಗೂ ಸಿಕ್ಕಿದ್ದು, ವಿನಯ ಮಾಯವಾಗಿದೆ. ವಿಜ್ಞಾನ ಅಭಿವೃದ್ಧಿ ಸಾಧಿಸಿದ್ದು ಅಜ್ಞಾನ ಪರಮಾವಧಿಯನ್ನು ತಲುಪಿದೆ. ಈ ನಿಟ್ಟಿನಲ್ಲಿ ಇಂದಿನ ಯುವಶಕ್ತಿಗೆ ವಿದ್ಯೆ, ವಿಜ್ಞಾನ, ವಿನಯ ಮತ್ತು ಪರಸ್ಪರರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸಬೇಕಿದೆ ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಂ ವೀರಭದ್ರಪ್ಪ ಮಾತನಾಡಿ, ಚಿಕೇನಕೊಪ್ಪ ಚನ್ನವೀರ ಶರಣರು ನಡೆದಾಡುವ ದೇವರು. ಅವರ ತಪಸ್ಸಿನ ಸಾಧನೆ - ದೈವೀ ಶಕ್ತಿ ನಮ್ಮನ್ನೆಲ್ಲರನ್ನೂ ಇಲ್ಲಿ ಒಗ್ಗೂಡಿಸಿದೆ ಎಂದು ತಿಳಿಸಿದರು. ಅಮಾತಿ ಬಸವರಾಜ್ ಪ್ರಾಸ್ತಾವಿಕ ಮಾತನಾಡಿದರು.ಬಿಜೆಪಿ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ, ಉದ್ಯಮಿ ಮಸೀದಿಪುರ ಸಿದ್ಧರಾಮನಗೌಡ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಪಂಚಾಕ್ಷರಪ್ಪ, ಪತ್ರಕರ್ತ ಎಚ್.ಎಂ. ಮಹೇಂದ್ರಕುಮಾರ್ ಮತ್ತಿತರರಿದ್ದರು.

ಈಶ್ವರಿ ಮತ್ತು ಕುಮಾರಿ ತೇಜಸ್ವಿನಿ ಪ್ರಾರ್ಥನೆ ಸಲ್ಲಿಸಿದರು. ಶರಣ ಕುಮಾರ್ ಕೊತ್ತಲಚಿಂತ ಮತ್ತು ಸುಧಾಕರ ಸಂಗೀತ ಸೇವೆ ಸಲ್ಲಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ಹಾಗೂ ಪಂಡಿತ ಶಿವಲಿಂಗಶಾಸ್ತ್ರಿ ಕಾರ್ಯಕ್ರಮ ನಿರ್ವಹಿಸಿದರು. ಗುರು ಕಂಪ್ಯೂಟರ್ಸ್‌ನ ಪೂಜಾ-ಮೃತ್ಯುಂಜಯ ಬಾಬು ಸೇರಿದಂತೆ ನಗರದ ವಿವಿಧ ಕುಟುಂಬಗಳು ತುಲಾಭಾರ ಸೇವೆ ಸಮರ್ಪಿಸಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ