ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಮಾಡಿದರೆ ಅದು ನಿಜವಾದ ಸಮಾಜ ಸೇವೆ ಎನಿಸಿಕೊಳ್ಳುತ್ತದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಎಚ್.ಎಂ.ತಾರಾನಾಥ ಹೇಳಿದರು.ಇಲ್ಲಿನ ಕೊಡವ ಸಮಾಜದಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕ್ಲಬ್ಬಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ನೆರವೇರಿಸಿ ಅವರು ಮಾತನಾಡಿದರು.ನಾಪೋಕ್ಲು ವಲಯದ ಲಯನ್ಸ್ ಕ್ಲಬ್ ಉತ್ತಮವಾಗಿ ಕಾರ್ಯ ನಿರ್ವಹಿಸಿ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೆಲವೊಮ್ಮೆ ಕೆಲವೊಂದು ಕಾರ್ಯ ಚಟುವಟಿಕೆಗಳಲ್ಲಿ ಮನಸ್ಸಿಗೆ ಬೇಸರ ಉಂಟಾಗಬಹುದು. ಕಾರ್ಯ ಚಟುವಟಿಕೆಗಳಲ್ಲಿ ಅನುಮಾನ, ಬೇಸರಕ್ಕೆ ಆಸ್ಪದ ಕೊಡದೆ ಯಾವುದೇ ಸಂದರ್ಭದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಏನಾದರೂ ಸಾಧಿಸಲು ಆತ್ಮವಿಶ್ವಾಸ ಮುಖ್ಯ ಎಂದ ಅವರು ಅಹಂಕಾರ, ಗರ್ವ ಪಡಬಾರದು ಎಂದರು.ಕೊಡಗು ಜಿಲ್ಲೆಯಿಂದ ಹೆಚ್ಚಿನ ಯುವಕರು ಸೈನ್ಯದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಧೈರ್ಯ, ಸಾಹಸಕ್ಕೆ ಕೊಡಗು ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಯಲ್ಲಿ ಸಮಾಜ ಸೇವೆಯನ್ನು ಮಾಡುವುದರ ಮೂಲಕ ಕ್ಲಬ್ ಉತ್ತಮವಾಗಿ ಕಾರ್ಯನಿರ್ವಹಿಸಬೇಕು, ನಮ್ಮ ದಿನನಿತ್ಯದ ಚಟುವಟಿಕೆಗಳ ನಡುವೆ ಬಿಡುವು ಮಾಡಿಕೊಂಡು ಕೈಲಾದ ಸೇವೆಯನ್ನು ಸಮಾಜಕ್ಕಾಗಿ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಮಾದೇಯಂಡ ಬಿ.ಕುಟ್ಟಪ್ಪ , ಕಾರ್ಯದರ್ಶಿಯಾಗಿ ಅಪ್ಪುಮಣಿಯಂಡ ಪಿ ಭೀಮಯ್ಯ, ಖಜಾಂಜಿಯಾಗಿ ಅಪ್ಪಚೆಟ್ಟೋಳಂಡ ವಸಂತ ಮುತ್ತಪ್ಪ ಹಾಗೂ ಲಿಯೋ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಕನ್ನಿಕಾ, ಕಾರ್ಯದರ್ಶಿಯಾಗಿ ಧ್ರುವ ದೇವಯ್ಯ, ಖಜಾಂಜಿಯಾಗಿ ಅನನ್ಯ ಇತರ ಸದಸ್ಯರು ಅಧಿಕಾರ ವಹಿಸಿಕೊಂಡು ಪ್ರಮಾಣವಚನ ಸ್ವೀಕರಿಸಿದರು.ನಾಪೋಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿರುವ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿ ಕಾರ್ಯಕ್ರಮದ ವೇದಿಕೆಯಲ್ಲಿ ಲಯನ್ ಪ್ರಾಂತೀಯ ಅಧ್ಯಕ್ಷ ಕೋಟೆರ ಡಾ.ಪಂಚಮ್ ತಿಮ್ಮಯ್ಯ, ರೀಜನಲ್ ಅಂಬಾಸೆಡರ್ ಅಂಬೆಕಲ್ ನವೀನ್, ಜಿಲ್ಲಾ ರಾಯಭಾರಿ ಮೋಹನ್ ದಾಸ್, ವಲಯ ಅಧ್ಯಕ್ಷ ಬಿಂದು ಗಣಪತಿ, ಕ್ಯಾಬಿನೆಟ್ ಜಾಯಿಂಟ್ ಸೆಕ್ರೆಟರಿ ಸುಮನ್ ಬಾಲಚಂದ್ರ, ನಾಪೋಕ್ಲು ಲಯನ್ಸ್ ನಿರ್ಗಮಿತ ಕಾರ್ಯದರ್ಶಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಖಜಂಜಿ ಕಾಂಡಂಡ ರೇಖಾ ಪೊನ್ನಣ್ಣ, ಲೀಯೋ ಕ್ಲಬ್ಬಿನ ನಿರ್ಗಮಿತ ಅಧ್ಯಕ್ಷ ಅಬೀಬಾ ಪಿ.ಎಂ, ಕಾರ್ಯದರ್ಶಿ ಬಿ.ಸಿ.ನವಲ್ ನಾಚಪ್ಪ, ಖಜಾಂಚಿ ಧ್ರುವ ದೇವಯ್ಯ ಉಪಸ್ಥಿತರಿದ್ದರು.ಶೈಲಾ ಭೀಮಯ್ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕೇಟೋಳಿರ ರತ್ನ ಚರ್ಮನ ಮತ್ತು ಬಡ್ಡೀರ ನಳಿನಿ ಪೂವಯ್ಯ ಅತಿಥಿಗಳ ಪರಿಚಯ ಮಾಡಿದರು. ಈ ಸಂದರ್ಭ ವಿವಿಧ ಲಯನ್ಸ್ ಕ್ಲಬ್ಬಿನ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.