ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವ । ಬೇಡಗಂಪಣ ಅರ್ಚಕರಿಂದ ಮಾದಪ್ಪನಿಗೆ ಸೇವೆ । ಹೊಸ ವರ್ಷಕ್ಕೆ 1 ಲಕ್ಷ ಲಾಡುಗೆ ಸಿದ್ಧತೆ
ಕನ್ನಡಪ್ರಭ ವಾರ್ತೆ ಹನೂರುಮಲೆ ಮಾದೇಶ್ವರ ಬೆಟ್ಟದಲ್ಲಿ ಎಳ್ಳು ಅಮಾವಾಸ್ಯೆ ಪ್ರಯುಕ್ತ ಮಹದೇಶ್ವರನಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರಭಿವೃದ್ದಿ ಪ್ರಾಧಿಕಾರದ ವತಿಯಿಂದ ಪೂಜಾ ಕಾರ್ಯಕ್ರಮಗಳು ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯದಲ್ಲಿ ಬೇಡಗಂಪಣ ಸರದಿ ಅರ್ಚಕರಿಂದ ಮಾದೇಶ್ವರನಿಗೆ ಅಮವಾಸ್ಯೆ ಪ್ರಯುಕ್ತ ಸೋಮವಾರ ಬೆಳಿಗ್ಗೆಯಿಂದಲೇ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಮಹಾಮಂಗಳಾರತಿ ನಡೆಯಿತು.ಹರಕೆ ಹೊತ್ತ ಭಕ್ತರಿಂದ ವಿಶೇಷ ಉತ್ಸವ
ಎಳ್ಳು ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಹರಕೆ ಹೊತ್ತ ಮಾನಪ್ಪನ ಭಕ್ತರಿಂದ ಬೆಳ್ಳಿ ರಥೋತ್ಸವ ಹಾಗೂ ರುದ್ರಾಕ್ಷಿ ಮಂಟಪೋತ್ಸವ, ಹುಲಿ ವಾಹನ ಉತ್ಸವ, ಮಾದೇಶ್ವರ ಉತ್ಸವ, ಬಸವ ಉತ್ಸವ, ಉರುಳು ಸೇವೆ ಹಾಗೂ ಪಂಜಿನ ಸೇವೆ ದೂಪದ ಸೇವೆ ಮತ್ತು ಮುಡಿ ಸೇವೆಗಳು ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ಸಂಭ್ರಮ ಸಡಗರದೊಂದಿಗೆ ಜೈಕಾರಗಳೊಂದಿಗೆ ಉಘೇ ಮಾದಪ್ಪ, ಉಘೇ ಮಾದಪ್ಪ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಭಕ್ತಿಯ ಪರಾಕಾಷ್ಠೆಯನ್ನು ಮೆರೆದರು.ಸರತಿ ಸಾಲಿನಲ್ಲಿ ದರ್ಶನ:
ಎಳ್ಳು ಅಮಾವಾಸ್ಯೆ ಪ್ರಯುಕ್ತ ನಾನಾ ಭಾಗಗಳಿಂದ ಹಾಗೂ ವಿವಿಧ ಜಿಲ್ಲೆ ಮತ್ತು ತಾಲೂಕಿನಿಂದ ಹಾಗೂ ತಮಿಳುನಾಡಿನಿಂದ ಬಂದಿದ್ದ ಮಾದಪ್ಪನ ಭಕ್ತಾದಿಗಳು ಅಮಾವಾಸ್ಯೆ ಪೂಜೆಗೆ ಮಾದೇಶ್ವರನ ದರುಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಮಾದೇಶ್ವರನ ದರುಸನ ಪಡೆದು ನಂತರ ಆಲಂಬಡಿ ಬಸವನಗುಡಿಯಲ್ಲಿ ಹಾಲಾಭಿಷೇಕ ಮತ್ತು ರೈತರು ಹಾಗೂ ಭಕ್ತಾದಿಗಳು ತಾವು ತಂದಿದ್ದ ದವಸ ಧಾನ್ಯಗಳನ್ನು ಸಹ ಅರ್ಪಿಸುವ ಮೂಲಕ ಮಾದಪ್ಪನ ದರ್ಶನ ಪಡೆದು ಪುನೀತರಾದರು.ಭಾರಿ ಭಕ್ತ ಸಮೂಹ
ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ಮುಂಭಾಗ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಎಲ್ಲಿ ನೋಡಿದರೂ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿತ್ತು. ಜೊತೆಗೆ ವಿವಿಧ ಉತ್ಸವಗಳಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತಾದಿಗಳು ಮಾದೇಶ್ವರ ದರ್ಶನ ಪಡೆದರು. ದಾಸೋಹ ಭವನದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿರುವ ದಾಸೋಹ ಸವಿಯುವ ಮೂಲಕ ಮಾದೇಶ್ವರನಿಗೆ ಇಷ್ಟಾರ್ಥ ಸಿದ್ಧಿಸುವಂತೆ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇವರ ದರ್ಶನ ಪಡೆದು ಪುನೀತರಾದರು.ಬಿಗಿ ಪೊಲೀಸ್ ಬಂದೋಬಸ್ತ್:
ರಾಜ್ಯದ ನಾನಾ ಭಾಗಗಳಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಅಮಾವಾಸ್ಯೆ ಪೂಜೆಗೆ ಬಂದಿದ್ದ ಭಕ್ತಾದಿಗಳಿಗೆ ಯಾವುದೇ ಲೋಪದೋಷಗಳು ಬರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಮತ್ತು ಮಲೆ ಮಾದೇಶ್ವರ ಬೆಟ್ಟದ ಇನ್‌ಸ್ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಹೆಚ್ಚಿನ ಸಿಬ್ಬಂದಿ ಬಂದೋಬಸ್ತ್ ಕಲ್ಪಿಸುವ ಮೂಲಕ ಕ್ರಮ ಕೈಗೊಳ್ಳಲಾಗಿತ್ತು.ಹೊಸ ವರ್ಷದ ಆಚರಣೆಗೆ ಲಾಡು ತಯಾರಿಕೆ:
ಮಲೆ ಮಹದೇಶ್ವರ ಬೆಟ್ಟಕ್ಕೆ ವರ್ಷಾಂತ್ಯ ಹಾಗೂ ನೂತನ ಹೊಸ ವರ್ಷಕ್ಕೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 1 ಲಕ್ಷ ಲಾಡು ತಯಾರಿಕೆ ಮಾಡುವ ಮೂಲಕ ದಾಸ್ತಾನು ಸಹ ಮಾಡಲಾಗುತ್ತಿದೆ. ಲಾಡು ಘಟಕದ ವ್ಯವಸ್ಥಾಪಕರಾದ ಮಹದೇವಸ್ವಾಮಿ ಹಾಗೂ ಬಾಣಸಿಗರು ಲಾಡು ತಯಾರಿಕೆಯಲ್ಲಿ ತೊಡಗಿದ್ದಾರೆ.ಸಿ.ಪಿ.ಯೋಗೇಶ್ವರ್ ಭೇಟಿ:
ಮಲೆ ಮಾದೇಶ್ವರ ಬೆಟ್ಟಕ್ಕೆ ಚನ್ನಪಟ್ಟಣ ಶಾಸಕ ಯೋಗೇಶ್ವರ್ ಹಾಗೂ ಅವರ ಕುಟುಂಬದವರು ಭೇಟಿ ನೀಡಿ ಮಲೆ ಮಹದೇಶ್ವರನ ದರುಶನ ಪಡೆದಿದ್ದಾರೆ. ನಂತರ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಗಳ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮತ್ತು ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಲೆ ಮಾದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಸಿದ್ದತೆ ನಡೆಸುತ್ತಿರುವ ಬಗ್ಗೆ ಸಹ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿ ವರ್ಗದವರಿಂದ ಮಾಹಿತಿ ಪಡೆದರು.