ಸೆಸ್ಕಾಂ ನಿರ್ಲಕ್ಷ್ಯ: ತುಂಡಾಗಿ ಬೀಳುತ್ತಿರುವ ವಿದ್ಯುತ್ ತಂತಿಗಳು

KannadaprabhaNewsNetwork | Published : Jun 2, 2024 1:46 AM

ಹಳೆಯ ಇಲಾಖೆ ವಿದ್ಯುತ್ ತಂತಿಗಳನ್ನು ಬದಲಾಯಿಸದೇ ಇರುವುದರಿಂದ ತಮ್ಮ ಸಾಮರ್ಥ್ಯ ಕಳೆದುಕೊಂಡು ವಿದ್ಯುತ್ ತಂತಿಗಳು ತುಂಡಾಗುತ್ತಿವೆ. ಇದರ ಬಗ್ಗೆ ವಿದ್ಯುತ್ ಇಲಾಖೆ ಸೂಕ್ತ ಕ್ರಮ ವಹಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸೆಸ್ಕಾಂ ಇಲಾಖೆ ನಿರ್ಲಕ್ಷ್ಯದಿಂದ ತಾಲೂಕಿನಾದ್ಯಂತ ಅಲ್ಲಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬೀಳುತ್ತಿದ್ದು, ರೈತರು ಹಾಗೂ ಸಾರ್ವಜನಿಕರ ಬದುಕಿಗೆ ವಿದ್ಯುತ್ ತಂತಿಗಳು ಯಮಪಾಶಗಳಾಗಿ ಪರಿಣಮಿಸಿವೆ.

ತೀವ್ರ ಬರಗಾಲದ ನಂತರ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ರೈತರು ಕೂಡಾ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡುತ್ತಿದ್ದಾರೆ. ಆದರೆ ಪಂಪ್‌ಸೆಟ್ ಆಧಾರಿತ ರೈತರ ಕೃಷಿ ಚಟುವಟಿಕೆಗಳಿಗೆ ಮೂಲಾಧಾರವಾದ ವಿದ್ಯುತ್ ಲೈನ್‌ಗಳು ತುಂಡಾಗಿ ಬೀಳುವ ಮೂಲಕ ರೈತ ಕುಟುಂಬಗಳ ಜೀವ ತೆಗೆಯುತ್ತಿವೆ. ವಿದ್ಯುತ್ ಇಲಾಖೆ ಮತ್ತು ರೈತರ ನಡುವೆ ಸಂಪರ್ಕ ಕೊಂಡಿಯಂತಿದ್ದ ವಿದ್ಯುತ್‌ಲೈನ್‌ಗಳು ಇತ್ತೀಚೆಗೆ ಯಮಪಾಶವಾಗಿ ರೈತರು ಮತ್ತು ಯಮಪುರಿಗೆ ಸಂಪರ್ಕ ಸೇತುವೆಗಳಾಗಿ ಬದಲಾಗುತ್ತಿರುವುದು ದುಃಖಕರ ಸಂಗತಿಯಾಗಿದೆ.

ತಾಲೂಕಿನ ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಇತ್ತೀಚೆಗೆ ರೈತ ಮಹಿಳೆಯೊಬ್ಬರು ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸಾವನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ತಾಲೂಕಿನ ಬೆಡದಹಳ್ಳಿ ಗ್ರಾಮದ ಶಿವೇಗೌಡ ಎನ್ನುವವರು ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಸಾವನ್ನಪ್ಪಿದ್ದರು. ಈ ಹಿಂದೆ ತುಂಡಾದ ವಿದ್ಯುತ್ ತಂತಿ ತುಳಿದು ದನ-ಕರುಗಳೂ ಸಾವನಪ್ಪಿದ ಹಲವು ಘಟನೆಗಳು ತಾಲೂಕಿನಲ್ಲಿ ವರದಿಯಾಗಿವೆ.

ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳು:

ವಿದ್ಯುತ್ ತಂತಿ ತುಳಿದು ರೈತರ ಸಾವಿನ ಘಟನೆಗಳ ನಡುವೆ ಪುರಸಭಾ ವ್ಯಾಪ್ತಿಯ ಹೊಸಹೊಳಲಿನ ೨೧ ವಾರ್ಡಿನ ಜನ ವಸತಿ ಪ್ರದೇಶದಲ್ಲಿ ಗುರುವಾರ (ಮೇ ೩೦) ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸುವಲ್ಲಿಯೂ ಸೆಸ್ಕಾಂ ಮಂದಗತಿಯಲ್ಲಿ ಕೆಲಸ ಮಾಡುತ್ತಿದೆ. ವಿದ್ಯುತ್ ಅವಘಡದಿಂದ ರೈತರು ಮೃತಪಟ್ಟಾಗ ವಿದ್ಯುತ್ ಇಲಾಖೆ ಸಾವನಪ್ಪಿದ್ದ ಕುಟುಂಬಕ್ಕೆ ಒಂದಷ್ಟು ಪರಿಹಾರ ನೀಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಪ್ರತಿ ಬಾರಿ ರೈತರ ಸಾವು ಸಂಭವಿಸಿದಾಗಲೂ ಅದನ್ನು ತಡೆಗಟ್ಟಲು ಅಗತ್ಯ ಕ್ರಮವಹಿಸದೇ ಹಣದ ಪರಿಹಾರ ನೀಡಿಕೆಯೊಂದೇ ನಡೆಯುತ್ತಿರುವುದು ನಮ್ಮ ವ್ಯವಸ್ಥೆಯ ಲೋಪದ ಕ್ರೂರ ಮುಖವಾಗುತ್ತಿದೆ.

ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ:

ವಿದ್ಯುತ್ ಪ್ರಸರಣ ಕೇಂದ್ರದಿಂದ ಸರಬರಾಜಾಗುವ ವಿದ್ಯುತ್‌ಅನ್ನು ವಿದ್ಯುತ್ ಪರಿವರ್ತಕಗಳ (ಟಿ.ಸಿ ) ಮೂಲಕ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಲಾಗುತ್ತದೆ. ಇಲ್ಲಿ ವಿದ್ಯುತ್ ಪರಿವರ್ತಕಕ್ಕೆ ಬರುವ ವಿದ್ಯುತ್ ಸರಬರಾಜು ಮಾಡುವ ವೈರ್‌ಗಳಲ್ಲಿ ಏನಾದರೂ ವಿದ್ಯುತ್ ಅವಘಡವಾದರೆ ತಾನೇತಾನಾಗಿ ವಿದ್ಯುತ್ ಸರಬರಾಜು ನಿಂತು ಹೋಗುತ್ತದೆ. ಆದರೆ, ವಿದ್ಯುತ್ ಪರಿವರ್ತಕದಿಂದ ಪಂಪ್‌ಸೆಟ್‌ಗೆ ಹೋಗುವ ವಿದ್ಯುತ್ ತಂತಿ ಏನಾದರೂ ತುಂಡಾಗಿ ಬಿದ್ದರೆ ವಿದ್ಯುತ್ ಪರಿವರ್ತಕದಲ್ಲಿರುವ ಅರ್ಥಿಂಗ್ ಮೂಲಕ ಭೂಮಿಗೆ ವಿದ್ಯುತ್ ಹರಿದು ಟಿ.ಸಿಯ ಪ್ಯೂಸ್ ತುಂಡಾಗಬೇಕಾಗುತ್ತದೆ. ಆದರೆ ಸರಿಯಾದ ನಿರ್ವಹಣೆಯಿಲ್ಲದೇ ಈ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ವಿದ್ಯುತ್ ತಂತಿಗಳು ನೆಲಕ್ಕೆ ಬಿದ್ದರೂ ವಿದ್ಯುತ್ ಹರಿಯುತ್ತಿರುತ್ತದೆ. ಇದರಿಂದಾಗಿ ಜಮೀನಿನಲ್ಲಿ ಓಡಾಡುವ ರೈತರು ಇವುಗಳನ್ನು ತುಳಿದು ಸಾವನ್ನಪ್ಪುವ ಸಂಗತಿಗಳು ಹೆಚ್ಚಾಗುತ್ತಿವೆ.

ಹಳೆಯ ತಂತಿಗಳನ್ನು ಬದಲಿಸುತ್ತಿಲ್ಲ:

ಇದರ ಜತೆಗೆ ಹಳೆಯ ಇಲಾಖೆ ವಿದ್ಯುತ್ ತಂತಿಗಳನ್ನು ಬದಲಾಯಿಸದೇ ಇರುವುದರಿಂದ ತಮ್ಮ ಸಾಮರ್ಥ್ಯ ಕಳೆದುಕೊಂಡು ವಿದ್ಯುತ್ ತಂತಿಗಳು ತುಂಡಾಗುತ್ತಿವೆ. ಇದರ ಬಗ್ಗೆ ವಿದ್ಯುತ್ ಇಲಾಖೆ ಸೂಕ್ತ ಕ್ರಮ ವಹಿಸುತ್ತಿಲ್ಲ. ಪರಿಣಾಮ ಸೆಸ್ಕಾಂ ಆಡಳಿತ ವೈಪಲ್ಯಕ್ಕೆ ತಾಲೂಕಿನಲ್ಲಿ ಅಮಾಯಕ ರೈತರು ಮತ್ತು ಅವರು ಬದುಕಿನ ಭಾಗವಾದ ಜಾನುವಾರುಗಳು ಬಲಿಯಾಗುತ್ತಿವೆ.

‘ಕೆ.ಆರ್.ಪೇಟೆ ತಾಲೂಕಿನಲ್ಲಿ ಬಹುತೇಕ ಎಲ್ಲಾ ವಿದ್ಯುತ್ ಲೈನ್ ಗಳು ೧೯೭೦-೭೨ ರ ಅವಧಿಯಲ್ಲಿ ಅಳವಡಿಸಿದ ಲೈನ್ ಗಳು. ಹಳೆಯ ಲೈನುಗಳು ದುರ್ಬಲವಾಗಿದ್ದು ತಮ್ಮ ಸಾಮರ್ಥ್ಯ ಕಳೆದುಕೊಂಡಿವೆ. ಹಳೆಯ ಲೈನುಗಳನ್ನು ಬದಲಿಸಿ ಹೊಸ ವಿದ್ಯುತ್ ಲೈನ್ ಎಳೆಯುವಂತೆ ತಾಲೂಕು ರೈತಸಂಘ ಮೂರ್ನಾಲ್ಕು ಸಲ ಸೆಸ್ಕಾಂ ಕಚೇರಿಯ ಮುಂದೆ ಚಳುವಳಿ ಮಾಡಿ ಸೆಸ್ಕಾ ಎಂ.ಡಿ ಅವರ ಗಮನವನ್ನೂ ಸೆಳೆದಿದೆ. ಆದರೆ ವಿದ್ಯುತ್ ಇಲಾಖೆ ಮಾತ್ರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.’

- ಕಾರಿಗನಹಳ್ಳಿ ಪುಟ್ಟೇಗೌಡ, ಅಧ್ಯಕ್ಷರು, ತಾಲೂಕು ರೈತಸಂಘ