ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಯುಐಡಿಎಫ್ (Urban Infrastructure Development Fund) ಅನುದಾನದ ಅಡಿಯಲ್ಲಿ ಕೈಗೆತ್ತಿಗೊಂಡಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡುವಂತೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಯುಐಡಿಎಫ್ ನ 82 ಕೋಟಿ ರು.ಗಳ ವೆಚ್ಚದಲ್ಲಿ ಕೈಗೊಂಡಿರುವ ಮೂರು ಹಂತದ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅಧ್ಯಕ್ಷರು, ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅಗತ್ಯ ಅನುದಾನ ಲಭ್ಯವಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
18 ಕಿ.ಮೀ ಚರಂಡಿ ನಿರ್ಮಾಣ:ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಐಡಿಎಫ್ ಯೋಜನೆಯಡಿ ಮೂರು ಪ್ಯಾಕೇಜ್‌ನಲ್ಲಿ ಒಟ್ಟು 54 ಕಿಲೋ ಮೀಟರ್ ರಸ್ತೆ, ಚರಂಡಿ ಹಾಗೂ ಸೀರಳ್ಳ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದರೆ, 3ನೇ ಪ್ಯಾಕೇಜ್‌ನಲ್ಲಿ 15.40 ಕೋಟಿ ವೆಚ್ಚದಲ್ಲಿ ಸೀರಳ್ಳಕ್ಕೆ 1450 ಮೀಟರ್‌ನಷ್ಟು ತಡೆಗೋಡೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಈಗ ಕಾಮಗಾರಿಯಲ್ಲಿ ಶೇಕಡ 40ರಷ್ಟು ಪ್ರಗತಿ ಮಾತ್ರ ಸಾಧಿಸಿದ್ದೇವೆ. ಕೆಲ ವಾರ್ಡುಗಳಲ್ಲಿ ಒಳಚರಂಡಿ ಕಾಮಗಾರಿ ಆಗದಿರುವುದು, ಕಿರಿದಾದ ರಸ್ತೆಗಳು, ಜೆಸಿಬಿಯಲ್ಲಿ ಕೆಲಸ ಮಾಡುವಾಗ ಯುಜಿಡಿ ಮತ್ತು ನೀರಿನ ಪೈಪ್ ಗಳು ಒಡೆದು ಹೋಗುತ್ತಿವೆ. ಅವುಗಳನ್ನು ರಿಪೇರಿ ಮಾಡಿ ಕಾಮಗಾರಿ ಮಾಡಲು ವಿಳಂಬವಾಗುತ್ತಿದೆ ಎಂದು ತಿಳಿಸಿದರು.
ಯುಜಿಡಿ ಸಂಪರ್ಕ ಇರುವ ಕಡೆಗಳಲ್ಲಿ ಮಾತ್ರ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಉಳಿದ ವಾರ್ಡುಗಳಲ್ಲಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಡಾಂಬರೀಕರಣ ಮಾಡಲಾಗುವುದು. ಯುಜಿಡಿ ಕಾಮಗಾರಿಗೆ ಸುಮಾರು 200 ಕೋಟಿ ರುಪಾಯಿ ಅಗತ್ಯವಿದ್ದು, ಇದಕ್ಕಾಗಿ ಉಪಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಹಾಗೂ ಪೌರಾಡಳಿತ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಕೆ.ಶೇಷಾದ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಪಾರ್ವತಮ್ಮ, ಆಯುಕ್ತ ಜಯಣ್ಣ, ಎಇಇ ವಿಶ್ವನಾಥ್, ಸಹಾಯಕ ಅಭಿಯಂತರರಾದ ನಿರ್ಮಲಾ, ಪವಿತ್ರ, ಗುತ್ತಿಗೆದಾರ ಆಂಜನಪ್ಪ, ರಘು ಮತ್ತಿತರರು ಹಾಜರಿದ್ದರು.
ರಾಮನಗರ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಯುಐಡಿಎಫ್ ಅನುದಾನದಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ವೀಕ್ಷಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಪಾರ್ವತಮ್ಮ, ಆಯುಕ್ತ ಜಯಣ್ಣ ಇತರರಿದ್ದರು.