ಕನ್ನಡಪ್ರಭ ವಾರ್ತೆ ಮೈಸೂರುಇಂಗ್ಲಿಷ್ ಮಾಧ್ಯಮಗಳು ಹೆಚ್ಚಾಗುತ್ತಾ ಹೋದಂತೆ ಕನ್ನಡ ಭಾಷೆಗೆ ಬಹಳ ದೊಡ್ಡ ಹೊಡೆತ ಬಿದ್ದಿದೆ ಎಂದು ಹಿರಿಯ ಕವಿ, ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದರು.ನಗರದ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಕನ್ನಡ ವಿಭಾಗವು ಶೇಷಾದ್ರಿಪುರಂ ಸ್ವತಂತ್ರ ಪಿಯು ಕಾಲೇಜಿನ ಸಹಯೋಗದೊಂದಿಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಕನ್ನಡ ರಾಜ್ಯೋತ್ಸವವನ್ನು ಪ್ರತಿವರ್ಷ ಆಚರಿಸುವ ಒಂದು ಸಾಂಪ್ರದಾಯಿಕ ಹಬ್ಬ. ಆದರೆ, ಕನ್ನಡ ಇಂದು ಎಷ್ಟರ ಮಟ್ಟಿಗೆ ಪ್ರಸ್ತುತವಾಗಿದೆ ಎಂಬುದು ಬಹಳ ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ ಕನ್ನಡ ಭಾಷೆ ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಕನ್ನಡ ಭಾಷೆಯ ಬಳಕೆ ದಿನೇ ದಿನೇ ಕಡಿಮೆಯಾಗುತ್ತಿರುವುದೇ ಇದಕ್ಕೆ ಕಾರಣ ಎಂದರು.ಇತ್ತೀಚಿನ ವಿದ್ಯಾಮಾನದಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಆಸಕ್ತಿ ತೋರುತ್ತಿದ್ದಾರೆ. ಇದನ್ನು ತಿಳಿದು ಸರ್ಕಾರವೂ ತಮ್ಮ ನಿಯಮಗಳನ್ನು ಬದಲಿಸಿ ಎಲ್ಲವನ್ನೂ ಇಂಗ್ಲಿಷ್ ಮಯವನ್ನಾಗಿ ಮಾಡುತ್ತಾ ಬಂದಿದೆ. ಇದರಲ್ಲಿ ಶಿಕ್ಷಣವೂ ಒಂದು. ಹೀಗಾಗಿದರೇ ಕೆಲವು ವರ್ಷಗಳ ನಂತರ ಕನ್ನಡ ಓದುವವರು ಯಾರು ಎಂದು ಅವರು ಪ್ರಶ್ನಿಸಿದರು.ಇದರೊಂದಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳು ಹಾಗೂ ಮ್ಯಾಗ್ನೆಟ್ ಶಾಲೆಗಳು ಸ್ಥಾಪನೆಯಾಗುತ್ತಿರುವುದು ಕನ್ನಡ ಶಾಲೆಗಳು ಮುಚ್ಚುವ ದಾರಿಗಳಾಗುತ್ತಿವೆ. ಆದ್ದರಿಂದ ಸರ್ಕಾರ, ಪೋಷಕರು ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಶಾಲೆಯಲ್ಲಿ ಮಾತೃಭಾಷೆಯೊಂದಿಗೆ ಎರಡರಿಂದ ಮೂರು ಭಾಷೆಗಳನ್ನು ಕಲಿಸುವ ವ್ಯವಸ್ಥೆಯನ್ನು ಮಾಡಬೇಕು. ಇಂಗ್ಲೀಷ್ ಜೊತೆಗೆ ಸ್ಥಳೀಯ ಭಾಷೆಯನ್ನು ಕಲಿಸಲು ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.ಕನ್ನಡ ಸಂವೇದನೆಯ ಭಾಷೆ. ಸುಖ, ದು:ಖ, ಸಂತೋಷ ಎಲ್ಲವೂ ಕನ್ನಡಿಗರಿಗೆ ಕನ್ನಡದಲ್ಲೇ ಆಗಬೇಕು. ಜಾಗತೀಕರಣ ಮತ್ತು ಖಾಸಗೀಕರಣದಿಂದಾಗಿ ಬೇರೆ ಬೇರೆ ಭಾಷಿಕರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಕನ್ನಡ ನಾಡಿನ ಅಂಗಡಿ, ಹೊಟೇಲ್ ಗಳಲ್ಲಿ ಪರಭಾಷಿಕರೇ ಉದ್ಯೋಗದಲ್ಲಿದ್ದಾರೆ. ಇದೆಲ್ಲವೂ ಕನ್ನಡ ಕಲಿಸಲು ಮತ್ತು ಕಲಿಯಲು ತೊಂದರೆಯಾಗಿದೆ. ಇಂಥಾ ಸಂದರ್ಭದಲ್ಲಿ ಇಂಗ್ಲಿಷ್ ವಾತಾವರಣದಲ್ಲೇ ಕನ್ನಡವನ್ನು ತುರುಕಬೇಕು ಎಂದರು.ಕತೆ, ಗೀತೆ, ನಾಟಕ, ಹಾಡು, ಜನಪದ ಇತ್ಯಾದಿಗಳ ಮೂಲಕ ಕನ್ನಡವನ್ನು ಕಲಿಸುವ ಕೆಲಸವಾಗಬೇಕು. ಪರಭಾಷಿಕರಿಗೂ ಒಂದು ಅವಧಿ ಇಟ್ಟು ಕಲಿಸಬೇಕು. ಹೀಗೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ಸಾಹಿತ್ಯದಲ್ಲಿ, ಸಂಸ್ಕೃತಿಯಲ್ಲಿ ಕನ್ನಡವನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಅವರು ಕರೆ ನೀಡಿದರು.ಇದೇ ವೇಳೆ ಡಿಸಿಪಿ ಕೆ.ಎಸ್. ಸುಂದರ್ ರಾಜ್, ಮಹಾರಾಜ ಪಿಯು ಕಾಲೇಜಿನ ಪ್ರಾಂಶುಪಾಲ ಉದಯಶಂಕರ, ವೈದ್ಯ ಡಾ. ಸುಜಿತ್ ಕುಮಾರ್, ಪತ್ರಕರ್ತ ಕೆ. ನರಸಿಂಹಮೂರ್ತಿ ಹಾಗೂ ಖೋ ಖೋ ವಿಶ್ವಕಪ್ ತಂದುಕೊಟ್ಟ ಕ್ರೀಡಾಪಟು ಬಿ. ಚೈತ್ರಾ ಅವರನ್ನು ಸನ್ಮಾನಿಸಲಾಯಿತು.ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ಡಾ.ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಬಿ.ಎ. ಅನಂತರಾಮ್, ಪ್ರಾಂಶುಪಾಲೆ ಡಾ.ಕೆ. ಸೌಮ್ಯಾ ಈರಪ್ಪ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಸಿ.ಪಿ. ಲಾವಣ್ಯ, ಸಹಾಯಕ ಪ್ರಾಧ್ಯಾಪಕರಾದ ಕೆ.ಎಂ. ಸಿದ್ದಪ್ಪ, ಕೆ.ಬಿ. ರಶ್ಮಿ ಮೊದಲಾದವರು ಇದ್ದರು.