ಹುಬ್ಬಳ್ಳಿ:
ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಅವಧಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಈಗಿನ ಪತ್ರಿಕಾ ವೃತ್ತಿ ಬದಲಾಗಿದೆ. ಹಿಂದಿನ ಆಸಕ್ತಿ ಈಗಿಲ್ಲ. ದೆಹಲಿ ಅಂದ ತಕ್ಷಣ ಯುವಕರು ಹಿಂದೇಟು ಹಾಕುತ್ತಿದ್ದಾರೆ. ಅಂತಹ ಅವಕಾಶ ಸಿಕ್ಕರೆ ಮೊದಲು ಅದನ್ನು ಒಪ್ಪಿಕೊಳ್ಳಬೇಕು. ಅಲ್ಲಿ ಯುವಕರಿಗೆ ಕಲಿಕೆಗೆ ಹೆಚ್ಚು ಅವಕಾಶ ಸಿಗಲಿದೆ. ಯುವ ಪತ್ರಕರ್ತರು ಪತ್ರಿಕೆಗಳನ್ನು ಹೆಚ್ಚು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಎಐನಂತಹ ಹೊಸ ಸಾಫ್ಟ್‌ವೇರ್‌ಗಳು ಉದ್ಯೋಗ ಕಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಇಂತಹ ಸವಾಲುಗಳ ನಡುವೆ ಯುವ ಪತ್ರಕರ್ತರು ಸತ್ಯ, ಪ್ರಾಮಾಣಿಕತೆ, ಆತ್ಮಸಾಕ್ಷಿಯಿಂದ ಮುಂದೆ ಸಾಗಬೇಕು. ವಾಟ್ಸ್‌ಆ್ಯಪ್ ಯುನಿವರ್ಸಿಟಿಯಿಂದ ಬಂದ ಪ್ರಶ್ನೆಗಳಿಗೆ ನಿಜವಾದ ಉತ್ತರವನ್ನು ಪತ್ರಕರ್ತರೇ ಅರಿಯಬೇಕಾಗಿದೆ. ಸತ್ಯ ಹೇಳುವುದನ್ನು, ಆಳುವವರನ್ನು ಪ್ರಶ್ನಿಸುವುದನ್ನು ಎಂದಿಗೂ ಮರೆಯಬಾರದು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಸನತಕುಮಾರ್ ಬೆಳಗಲಿ ಮಾತನಾಡಿ, ಇಂದು ಮಾಧ್ಯಮದ ಸ್ವರೂಪ ಬದಲಾಗಿದೆ. ಈ ಹಿಂದೆ ಪತ್ರಿಕೆಯೇ ಮಾಧ್ಯಮವಾಗಿತ್ತು. ಆದರೆ, ಈಗ ಟಿವಿ, ಡಿಜಿಟಲ್ ಮಾಧ್ಯಮ ಬಂದಿವೆ. ಹೊಸ ಸವಾಲನ್ನು ಎದುರಿಸುತ್ತಿದ್ದೇವೆ. ಹಿಂದೆ ಕಷ್ಟದ ದಿನಗಳಿದ್ದರೂ ಸಹ ವಿಶ್ವಾಸಾರ್ಹತೆ ಗೌರವವಿತ್ತು. ಆದರೆ, ಈಗ ಪತ್ರಿಕೋದ್ಯಮದಲ್ಲಿ ಹೊಸ-ಹೊಸ ತಂತ್ರಜ್ಞಾನ, ಆವಿಷ್ಕಾರಗಳು ಬಂದಿದ್ದು, ವಿಶ್ವಾಸಾರ್ಹತೆ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗಾಗಿ, ಕಾಳಜಿ ಪೂರ್ವಕವಾಗಿ, ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ಕಾರ್ಯ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಹಲವಾರು ಯೋಜನೆ ಹಮ್ಮಿಕೊಳ್ಳುತ್ತಿದ್ದು, ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.