ಶೇಷಗಿರಿ ರಂಗಮಂದಿರ ನವೀಕರಣ ಕಾಮಗಾರಿಗೆ ಚಾಲನೆ

KannadaprabhaNewsNetwork | Published : Jun 26, 2024 12:30 AM

ಸಾರಾಂಶ

ರಂಗ ಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದ ೨ ಕೋಟಿ ರು. ವೆಚ್ಚದ ನವೀಕರಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಹಾನಗಲ್ಲ: ರಂಗ ಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದ ೨ ಕೋಟಿ ರು. ವೆಚ್ಚದ ನವೀಕರಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸಾಮಾಜಿಕ ಕಾರ್ಯಗಳು ನಡೆದರೆ ಅದಕ್ಕೊಂದು ಶಕ್ತಿ ಇರುತ್ತದೆ. ಎಲ್ಲವನ್ನೂ ಸರ್ಕಾರವೇ ನಿಭಾಯಿಸಬೇಕೆಂಬ ಭಾವನೆ ಬೇಡ. ಸರಕಾರದ ಅನುದಾನಗಳ ಆಧಾರದ ಮೇಲೆ ಪ್ರತಿ ಗ್ರಾಮದಲ್ಲಿ ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ. ಇದನ್ನು ಆಯಾ ಗ್ರಾಮದ ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿಗಳು ಜವಾಬ್ದಾರಿಯಿಂದ ನಿರ್ವಹಿಸಬೇಕು. ಎಲ್ಲ ಕಾಮಗಾರಿಗಳನ್ನು ಒಂದೇ ವರ್ಷದಲ್ಲಿ ಮುಗಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಗ್ರಾಮಗಳ ಜನತೆ ಕೊಡುವ ಆದ್ಯತೆಯನ್ನಾಧರಿಸಿಯೇ ಈಗ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.ಶೇಷಗಿರಿ ಇಡೀ ರಾಜ್ಯದಲ್ಲಿಯೇ ರಂಗ ಪ್ರೀತಿಗೆ ಹೆಸರಾಗಿದೆ. ಇದು ನಮ್ಮ ತಾಲೂಕಿನ ಹೆಮ್ಮೆಯೂ ಹೌದು. ಈಗಾಗಲೇ ನಿರ್ಮಾಣಗೊಂಡು ಹತ್ತು ಹಲವು ರಂಗ ಕಾರ್ಯಗಳಿಗೆ ಹೆಸರಾಗಿರುವಾಗ ಸರಕಾರ ೨ ಕೋಟಿ ಅನುದಾನ ನೀಡಿ ಇದರ ನವೀಕರಣಕ್ಕೆ ಮುಂದಾಗಿದೆ. ಇದರ ಸದುಪಯೋಗದ ಮೂಲಕ ಇಲ್ಲಿ ನಿರಂತರವಾಗಿ ರಂಗ ಚಟುವಟಿಕೆಗಳು ನಡೆಯಲಿ. ಗ್ರಾಮೀಣ ರಂಗ ಭೂಮಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಅತ್ಯಂತ ಮೆಚ್ಚುಗೆಯ ಸಂಗತಿಯೂ ಹೌದು ಎಂದು ಶ್ರೀನಿವಾಸ ಮಾನೆ ಹೆಮ್ಮೆಯಿಂದ ತಿಳಿಸಿದರು.ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ, ಚಂದ್ರಪ್ಪ ಜಾಲಗಾರ, ಗ್ರಾಪಂ ಅಧ್ಯಕ್ಷ ಸದಾನಂದ ಮೂಡಿ, ಸದಸ್ಯರಾದ ಅರುಣ ಕೊಂಡೋಜಿ, ಪರಶುರಾಮ ಅಂಬಿಗೇರ, ಶಂಕರಣ್ಣ ಗುರಪ್ಪನವರ, ಸಿದ್ದಪ್ಪ ರೊಟ್ಟಿ, ಶಿವಮೂರ್ತಿ ಹುಣಸಿಹಳ್ಳಿ, ಸಣ್ಣಪ್ಪ ಗೊರವರ, ಬಸವರಾಜ ಬಡೆಮ್ಮಿ, ಶಿವರಾಜಪ್ಪ ಕಬ್ಬೂರ, ಧರ್ಮಣ್ಣ ರೊಟ್ಟಿ, ರಾಮಚಂದ್ರಪ್ಪ ಹುಣಸಿಹಳ್ಳಿ ಮೊದಲಾದವರಿದ್ದರು.

Share this article