ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಕೊಡಗು ಘಟಕದಿಂದ ಆಯೋಜಿತ ಪಂಜೆ ಮಂಗೇಶರಾಯರ 150 ನೇ ವರ್ಷಾಚರಣೆ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಚಿದ್ವಿಲಾಸ್, ಮಡಿಕೇರಿಯ ಅಂದಿನ ಸೆಂಟ್ರಲ್ ಹೈಸ್ಕೂಲಿನಲ್ಲಿ ಪಂಜೆ ಮಂಗೇಶರಾಯರು ಮುಖ್ಯೋಪಾಧ್ಯಾಯರಾಗಿದ್ದರು ಎಂಬುದೇ ಕೊಡಗಿಗೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಹೀಗಿರುವಾಗ ಪಂಜೆ ಮಂಗೇಶರಾಯರ ಸಾಹಿತ್ಯ ಲೋಕದ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತಷ್ಟು ರೀತಿಯಲ್ಲಿ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅವರು ಪಾಠ ಮಾಡುತ್ತಿದ್ದ ತರಗತಿಯನ್ನು ಪಂಜೆಯವರ ಹೆಸರಿನಲ್ಲಿ ಗುರುತಿಸಿ, ಉತ್ತಮ ಕೃತಿಗಳ ಗ್ರಂಥಾಲಯವನ್ನು ಸ್ಥಾಪಿಸಬೇಕು. ಆ ಮೂಲಕ ಸಾಹಿತ್ಯ ಪ್ರೇಮಿಗಳ ಮನದಲ್ಲಿ ಪಂಜೆಯವರ ನೆನಪನ್ನು ಚಿರಸ್ಥಾಯಿಯಾಗಿಸಬೇಕೆಂದರು.
ಅಂತೆಯೇ, ಜೂನಿಯರ್ ಕಾಲೇಜಿನ ಆವರಣದಲ್ಲಿ ಪಂಜೆ ಮಂಗೇಶರಾಯರ ಪುತ್ಥಳಿಯನ್ನು ಸ್ಫಾಪಿಸುವ ಮೂಲಕ ಅವರನ್ನು ಸದಾ ಸ್ಮರಿಸುವಂತಾಗಬೇಕೆಂದೂ ಚಿದ್ವಿಲಾಸ್ ಅಭಿಪ್ರಾಯಪಟ್ಟರು.ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಡೊಳ್ಳು ಬಾರಿಸಿ ಉದ್ಘಾಟಿಸಿದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಕವಿಶಿಷ್ಯ ಎಂಬ ಹೆಸರಿನಿಂದ ಅನೇಕ ಸಾಹಿತ್ಯ ಲೇಖನ, ಕವಿತೆಗಳನ್ನು ಬರೆಯುವ ಮೂಲಕ ಕವಿಋಷಿಯಾಗಿದ್ದ ಪಂಜೆ ಮಂಗೇಶರಾಯರು ನಿಜವಾದ ಅರ್ಥದಲ್ಲಿ ಕವಿಗುರುವಿನಂತೆ ಇದ್ದರು. ಕೊಡಗಿನ ಕುರಿತಾದ ಎಲ್ಲಿ ಭೂರಮೆಯಂಥ ಪದ್ಯದ ಮೂಲಕ ಇಡೀ ಜಗತ್ತೇ ಕೊಡಗನ್ನು ಹಾಡಿನ ಮೂಲಕ ಗುರುತಿಸುವಂತೆ ಮಾಡಿದ್ದರು. ಕೇರಳ ಪ್ರವಾಸೋದ್ಯಮ ಇಲಾಖೆಯು ದೇವರ ನಾಡು ಎಂದು ಬಿಂಬಿಸಿಕೊಳ್ಳುತ್ತಿದೆಯಾದರೂ 1923 ರಲ್ಲಿಯೇ ಪಂಜೆಯವರು ಕೊಡಗನ್ನು ಭೂರಮೆ ದೇವನ ಸನ್ನಿಧಿ ಬಯಸಿ ಭಿಮ್ಮನೆ ಬಂದ ನಾಡೆಂದು ವಣಿ೯ಸಿದ್ದರು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನ ಕೊಡಗು ಘಟಕದ ಜಿಲ್ಲಾ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಮಡಿಕೇರಿಯ ಜ್ಯೂನಿಯರ್ ಕಾಲೇಜು ರಸ್ತೆಗೆ ಮತ್ತೊಮ್ಮೆ ಕಸಾಪ ವತಿಯಿಂದ ಮಂಜೆ ಮಂಗೇಶರಾಯರ ಹೆಸರಿನ ನಾಮಫಲಕವನ್ನು ಲೋಕಾರ್ಪಣೆ ಮಾಡಲಾಗಿದ್ದು ಅಂತೆಯೇ ವಿವಿಧ ಶಾಲಾಕಾಲೇಜುಗಳಿಗೆ ಪಂಜೆ ಮಂಗೇಶರಾಯರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಗಿದೆ ಎಂದರು. ಈ ಮೊದಲು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಿಸಲಾಗಿದ್ದ ಪಂಜೆ ಮಂಗೇಶರಾಯರ ಕೃತಿಗಳನ್ನು ಮರುಮುದ್ರಣ ಮಾಡುವಂತೆಯೂ ರಮೇಶ್ ಕಸಾಪಕ್ಕೆ ಸಲಹೆ ನೀಡಿದರು.
ಡಾ.ಕಾವೇರಿ ಪ್ರಕಾಶ್ ನಿರೂಪಿಸಿ, ಮೆ.ನಾ.ವೆಂಕಟನಾಯಕ ಸ್ವಾಗತಿಸಿದ ಕಾರ್ಯಕ್ರಮವನ್ನು ಈರಮಂಡ ಹರಿಣಿ, ಚೊಕ್ಕಾಡಿ ಪ್ರೇಮಾ ರಾಘವಯ್ಯ ಪಿ.ಎಫ್. ಸಬಾಸ್ಟಿನ್ ನಿರ್ವಹಿಸಿದರು.