ಭ್ರೂಣಹತ್ಯೆ, ಅತ್ಯಾಚಾರ ವಿಚಾರಣೆಗೆ ಮಹಿಳಾ ನ್ಯಾಯಾಲಯ ಸ್ಥಾಪಿಸಿ: ಸುನಂದಾ ಜಯರಾಂ

KannadaprabhaNewsNetwork | Published : Aug 20, 2024 12:48 AM

ಸಾರಾಂಶ

ಅತ್ಯಾಚಾರ, ಭ್ರೂಣ ಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿದ್ದರೂ ಆಳುವ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ .

ಕನ್ನಡಪ್ರಭ ವಾರ್ತೆ ಮಂಡ್ಯ

ಭ್ರೂಣ ಹತ್ಯೆ, ಅತ್ಯಾಚಾರದಂತಹ ಪ್ರಕರಣಗಳ ವಿಚಾರಣೆ ನಡೆಸಲು ಮಹಿಳಾ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ರೈತ ನಾಯಕಿ ಸುನಂದಾ ಜಯರಾಂ ಒತ್ತಾಯಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ ಸೇರಿದಂತೆ ಮಹಿಳೆಯರ ಮೇಲಿನ ಲೈಂಗಿಕ, ದೈಹಿಕ ಕಿರುಕುಳ ಪ್ರಕರಣಗಳಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುವುದು ವಿಳಂಬವಾಗಿ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮಹಿಳಾ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಆಗ್ರಹಿಸಿದರು.

ಮಹಿಳಾ ಆಯೋಗದ ಅಧ್ಯಕ್ಷರು ಸಹ ಮಹಿಳಾ ನ್ಯಾಯಾಲಯ ಸ್ಥಾಪನೆಗೆ ಒತ್ತಾಯಿಸಿದ್ದಾರೆ. ಹಾಗಾಗಿ ಸಂತ್ರಸ್ತ ಮಹಿಳೆಯರಿಗೆ ತ್ವರಿತವಾಗಿ ನ್ಯಾಯ ಸಿಗಲು ಮಹಿಳಾ ನ್ಯಾಯಾಲಯದಿಂದ ಮಾತ್ರ ಸಾಧ್ಯ ಎಂದರು.

ಅತ್ಯಾಚಾರ, ಭ್ರೂಣ ಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿದ್ದರೂ ಆಳುವ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇದು ಹೀಗೇ ಮುಂದುವರೆದರೆ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿ ವರ್ಷವೂ ಸಹಸ್ರಾರು ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಆರೋಪಿಗಳನ್ನು ಬಂಧಿಸುತ್ತಾರೆಯೇ ಹೊರತು ಮುಂದೆ ಅವರಿಗೆ ಕಾರಾಗೃಹ ಶಿಕ್ಷೆಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವುದನ್ನು ಬಿಟ್ಟು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಮೋಚನಾ ಮಹಿಳಾ ಸಂಘಟನೆಯ ಜನಾರ್ಧನ್ ಮಾತನಾಡಿ, ಶಾಲಾ ಕಾಲೇಜಿನ ಪಠ್ಯಕ್ರಮದ ಹಂತದಿಂದಲೇ ಸರಿ- ತಪ್ಪುಗಳ ಕುರಿತು ಲೈಂಗಿಕ ಶಿಕ್ಷಣ ಜಾರಿಗೆ ತರಬೇಕು. ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣ ಮಾಡುವುದರ ಜೊತೆಗೆ ಅವರ ಸುರಕ್ಷತೆ, ಭದ್ರತೆಗೆ ಇರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

ಅಕ್ರಮ ಗರ್ಭಪಾತ ನಡೆಸಲು ಎಂಟಿಪಿ ಮೆಡಿಕಲ್ ಫಿಲ್ಸ್ ಮಾತ್ರೆಗಳ ಮಾರಾಟ ಕಾಳಸಂತೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟ ಮಾರಾಟದ ಮಾಹಿತಿ ನೀಡದೆ ಮೆಡಿಕಲ್ ಸ್ಟೋರ್ ಮತ್ತು ಡ್ರಗ್ ಏಜೆನ್ಸಿಗಳ ಬಗ್ಗೆ ತನಿಖೆ ನಡೆಸಿ ಕಾನೂನು ಉಲ್ಲಂಘಿಸಿರುವ ಬಗ್ಗೆ ವರದಿ ಇದ್ದರೂ ಕ್ರಮ ಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಕೂಡಲೇ ಸರಿಪಡಿಸಿಕೊಂಡು ಅಂತವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಸುದ್ಧಿಗೋಷ್ಠಿಯಲ್ಲಿ ಮುಖಂಡರಾದ ಸಿ. ಕುಮಾರಿ, ಲತಾ ಶಂಕರ್, ಇಂಪನಾ ಇತರರು ಇದ್ದರು.

Share this article