ಕನ್ನಡಪ್ರಭ ವಾರ್ತೆ ರಾಯಚೂರು
ಮುಡಾ ಹಗರಣದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಬಿಜೆಪಿ ರಾಜಕೀಯ ಷಡ್ಯಂತ್ರ ಹೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮುಖ್ಯರಸ್ತೆ ಮೂಲಕ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಮುಖಾಂತರ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜು ಅವರು, ನಾಲ್ಕು ದಶಕಗಳಿಂದ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ರಾಜಕೀಯ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕಾಗಿ ಸುಳ್ಳು ಆರೋಪವನ್ನು ಗಟ್ಟಿಯಾಗಿ ಹಿಡಿದುಕೊಂಡು ಅಧಿಕಾರ ದುರುಪಯೋಗ ಪಡಿಸಿಕೊಂಡು ರಾಜ್ಯಪಾಲರಿಂದ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಯನ್ನು ಕೊಡಿಸಿದ್ದಾರೆ ಎಂದು ದೂರಿದರು.ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಾಯ್ದೆಗೆ 2021 ಸೆಕ್ಷನ್ 17ಎ ತಿದ್ದುಪಡಿ ಪ್ರಕಾರ ಯಾವುದೇ ಮುಖ್ಯಮಂತ್ರಿಯ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ ರಾಜ್ಯಪಾಲರಿಗೆ ದೂರು ನೀಡುವವರು ಡಿ.ಜಿ ಲೆವೆಲ್ ಅಧಿಕಾರಿ ಅಥವಾ ಲೋಕಾಯುಕ್ತ ಹಂತದ ಅಧಿಕಾರಿಯಾಗಿರಬೇಕು ಇದು ಕೇಂದ್ರದ ಬಿಜೆಪಿ ಸರ್ಕಾರವೇ ರೂಪಿಸಿದ ನಿಯಮ. ಆದರೆ ಖಾಸಗಿ ವ್ಯಕ್ತಿ ನೀಡಿದ ದೂರನ್ನು ಸ್ವೀಕರಿಸಿ ರಾಜ್ಯಪಾಲರು ಅಮಿತ್ ಷಾ ಜತೆ ಚರ್ಚಿಸಿ ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದರು.
ಬಿಜೆಪಿ ಪ್ರಜಾಪ್ರಭುತ್ವ, ಸಂವಿಧಾನ, ಬಡವರ ವಿರೋಧಿ ಸರ್ಕಾರವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಲು ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಆರೋಪ ಮಾಡಿ ತನಿಖಾ ಸಂಸ್ಥೆಗಳನ್ನು ಹಾಗೂ ರಾಜಭವನ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರ ಗೊಡ್ಡು ಬೆದರಿಕೆಗೆ ಜಗ್ಗದೇ, ಬಗ್ಗದೇ ರಾಜಕೀಯ ಹಾಗೂ ಕಾನೂನು ಹೋರಾಟದ ಮುಖಾಂತರ ಎದುರಿಸುವುದಾಗಿ ತಿಳಿಸಿದರು.ಪ್ರತಿಭಟನೆಯಲ್ಲಿ ಸಂಸದ ಜಿ.ಕುಮಾರ ನಾಯಕ, ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಜಿ.ಹಂಪಯ್ಯ ನಾಯಕ, ಹಂಪನಗೌಡ ಬಾದರ್ಲಿ, ಎಂಎಲ್‌ಸಿಗಳಾದ ವಸಂತ ಕುಮಾರ, ಶರಣಗೌಡ, ಡಿಸಿಸಿ ಅಧ್ಯಕ್ಷ ಬಸವರಾಜ ಪಾಟೀಲ್ ಇಟಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಮುಖಂಡರಾದ ಮಹಮ್ಮದ ಶಾಲಂ, ಕೆ.ಶಾಂತಪ್ಪ, ಜಯಣ್ಣ, ರುದ್ರಪ್ಪ ಅಂಗಡಿ, ಡಾ.ರಜಾಕ ಉಸ್ತಾದ, ನಾಗವೇಣಿ ಪಾಟೀಲ್, ಶ್ರೀದೇವಿ ನಾಯಕ, ರಾಣಿ ರಿಚರ್ಡ್ ಸೇರಿದಂತೆ ಬ್ಲಾಕ್ ಸಮಿತಿಗಳ ಪ್ರಮುಖರು, ಕಾರ್ಯಕರ್ತರು ಇದ್ದರು.