ಕೈಗಾರಿಕೆಗಳ ಏಕಗವಾಕ್ಷಿಗೆ ಗ್ರಹಣ!

KannadaprabhaNewsNetwork |  
Published : Oct 12, 2026, 02:00 AM IST
 ಜಿಲ್ಲಾಧಿಕಾರಿ ಸ್ನೇಹಲ್  | Kannada Prabha

ಸಾರಾಂಶ

ಪ್ರತಿ ತಿಂಗಳು ಸಭೆ ನಡೆಸಬೇಕೆಂಬ ನಿಯಮವಿದ್ದರೂ ಈ ವರ್ಷದ ಮಾರ್ಚ್‌ನಲ್ಲಿ ಕೊನೆಯ ಸಭೆ ನಡೆದ ಬಳಿಕ ಇದುವರೆಗೆ ಮತ್ತೆ ಸಭೆ ನಡೆದಿಲ್ಲ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಕೈಗಾರಿಕೆ ಸ್ಥಾಪನೆಗೆ ಅನುಮತಿ, ಕೈಗಾರಿಕಾ ನಿವೇಶನಗಳ ಅವಧಿ ವಿಸ್ತರಣೆ, ಇಲಾಖೆಗಳ ಆಕ್ಷೇಪ- ಪರಿಹಾರಕ್ಕೆ ವೇಗದ ವೇದಿಕೆಯಾಗಬೇಕಿದ್ದ "ಏಕಗವಾಕ್ಷಿ ಸಮಿತಿ " (Single Window Committee)ಗೇ ಗ್ರಹಣ ಹಿಡಿದಿದೆ.

ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಅನುಮತಿಗಳನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸಿ, ಹೂಡಿಕೆದಾರರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಸರ್ಕಾರ "ಏಕಗವಾಕ್ಷಿ ಸಮಿತಿ " ವ್ಯವಸ್ಥೆ ಜಾರಿಗೊಳಿಸಿದೆ. ಆದರೆ, ಜಿಲ್ಲೆಯಲ್ಲಿ ಇದು ಮಂದಗತಿಯಲ್ಲಿ ಸಾಗಿದೆ.

ಪ್ರತಿ ತಿಂಗಳು ಸಭೆ ನಡೆಸಬೇಕೆಂಬ ನಿಯಮವಿದ್ದರೂ ಈ ವರ್ಷದ ಮಾರ್ಚ್‌ನಲ್ಲಿ ಕೊನೆಯ ಸಭೆ ನಡೆದ ಬಳಿಕ ಇದುವರೆಗೆ ಮತ್ತೆ ಸಭೆ ನಡೆದಿಲ್ಲ. ಇದರಿಂದ ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿದ ಸಮಸ್ಯೆಗಳ ಸಮಗ್ರ ಪರಿಶೀಲನೆ ಹಾಗೂ ಇಲಾಖೆಗಳ ನಡುವಿನ ಸಮನ್ವಯಕ್ಕೆ ಹಿನ್ನಡೆಯಾಗಿದೆ.

ಹೊಸ ಕೈಗಾರಿಕೆಗಳಿಗೆ ವಿವಿಧ ಇಲಾಖೆಗಳ ಅನುಮತಿಗಳನ್ನು ಒಂದೇ ವೇದಿಕೆಯಲ್ಲಿ ಸಮನ್ವಯಗೊಳಿಸುವುದು, ಭೂಮಿ, ನಿವೇಶನ, ನಿವೇಶನ ಅವಧಿ ವಿಸ್ತರಣೆ, ಮೂಲಸೌಕರ್ಯ, ಅನುಮತಿ, ಉತ್ಪನ್ನ ಬದಲಾವಣೆ ಸೇರಿದಂತೆ ಆಡಳಿತಾತ್ಮಕ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸುವುದು ಸಮಿತಿಯ ಉದ್ದೇಶ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಅರ್ಜಿದಾರರು ಭಾಗವಹಿಸುತ್ತಾರೆ. ಆದರೆ, ಏಳು ತಿಂಗಳಿಂದ ಸಭೆ ನಡೆಯದಿರುವುದರಿಂದ ವಿವಿಧ ಇಲಾಖೆಗಳ ನಡುವೆ ಬಾಕಿ ಇರುವ ಸಮಸ್ಯೆಗಳ ಸ್ಥಿತಿ, ಕೈಗೊಂಡ ಕ್ರಮ ಹಾಗೂ ಪರಿಹಾರದ ವೇಗದ ಕುರಿತು ಪ್ರಶ್ನೆಗಳು ಎದ್ದಿವೆ.

ಮಾರ್ಚ್‌ ಬಳಿಕ ಸಭೆಯಿಲ್ಲ: ಜಿಲ್ಲಾ ಮಟ್ಟದಲ್ಲಿ ಸಭೆ ಆಯೋಜಿಸುವ ಜವಾಬ್ದಾರಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯ ಮೇಲಿದೆ. ಉದ್ಯಮಿಗಳು ಹಾಗೂ ವಿವಿಧ ಇಲಾಖೆಯಿಂದ ಬಂದ ಮನವಿಗಳನ್ನು ಕ್ರೋಡೀಕರಿಸಿ, ಜಿಲ್ಲಾಧಿಕಾರಿ ಸಮಯ ಪಡೆದು ಸಭೆ ನಿಗದಿಪಡಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ ಸಭೆಗೆ ಹಾಜರುಪಡಿಸುವುದು ಇದರ ಕರ್ತವ್ಯ. ಆದರೆ, ಮಾರ್ಚ್ ಬಳಿಕ ಸಭೆ ಕರೆಯದಿರುವುದು ವ್ಯವಸ್ಥೆಯ ಕಾರ್ಯನಿರ್ವಹಣೆ ಬಗ್ಗೆಯೇ ಪ್ರಶ್ನೆ ಮೂಡಿಸಿದೆ.

ಅಧಿಕಾರಿಗಳ ಪ್ರಕಾರ, ತಮ್ಮ ಇಲಾಖೆಗಳ ವ್ಯಾಪ್ತಿಯಲ್ಲಿ ಯಾವುದೇ ಪ್ರಮುಖ ಅರ್ಜಿಗಳು ಬಾಕಿ ಇಲ್ಲ. ಅರ್ಜಿಗಳು ಬಂದಂತೆ ಪರಿಶೀಲಿಸಿ ಅನುಮತಿ ಅಥವಾ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಉತ್ಪನ್ನ ಬದಲಾವಣೆ, ಅನುಮತಿ ನವೀಕರಣದಂತಹ ಕೆಲವು ವಿಷಯಗಳಿಗೆ ಮಾತ್ರ ಸಮಿತಿಯ ಚರ್ಚೆ ಅಗತ್ಯವಾಗುತ್ತದೆ ಎಂಬ ಸಬೂಬು ಹೇಳುತ್ತಾರೆ. ಆದರೆ, ಹಲವು ಉದ್ಯಮಿಗಳ ಪ್ರಕಾರ ಸಭೆ ನಡೆಯದ ಹಿನ್ನೆಲೆಯಲ್ಲಿ ನೂರಾರು ಅರ್ಜಿಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಈ ಕುರಿತು ಅಧಿಕಾರಿಗಳಿಂದ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ ಎಂಬ ಅಸಮಾಧಾನವೂ ಇದೆ.

ಕೈಗಾರಿಕಾ ಬಡಾವಣೆಗಳೆಲ್ಲ ಭರ್ತಿ: ಜಿಲ್ಲೆಯಲ್ಲಿ ಕೈಗಾರಿಕಾ ನಿವೇಶನಗಳಿಗೆ ಬೇಡಿಕೆ ಹೆಚ್ಚಿದೆ. ಹುಬ್ಬಳ್ಳಿ ಕೈಗಾರಿಕಾ ಪ್ರದೇಶದ 835 ನಿವೇಶನಗಳೂ ಹಂಚಿಕೆಯಾಗಿವೆ. 2010ರಲ್ಲಿ ಸ್ಥಾಪನೆಯಾದ ಗಾಮನಗಟ್ಟಿಯ 366, ರಾಮನಕೊಪ್ಪದ 81, ಲಕ್ಕಮನಹಳ್ಳಿಯ 36 ಹಾಗೂ 2011ರಲ್ಲಿ ಸ್ಥಾಪನೆಯಾದ ಬೇಲೂರು ಕೈಗಾರಿಕಾ ಪ್ರದೇಶದ 74 ನಿವೇಶನಗಳೂ ಹಂಚಿಕೆಯಾಗಿವೆ.

ಈ ಹಿನ್ನೆಲೆಯಲ್ಲಿ ಹೊಸ ಕೈಗಾರಿಕೆಗಳಿಗೆ ಜಾಗ ಒದಗಿಸುವ ಜತೆಗೆ, ಈಗಾಗಲೇ ಹಂಚಿಕೆಯಾದ ನಿವೇಶನಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಅಗತ್ಯ ಅನುಮತಿ ಮತ್ತು ಮೂಲಸೌಕರ್ಯ ಕಲ್ಪಿಸುವಲ್ಲಿ ಇಲಾಖೆಗಳ ಸಮನ್ವಯ ಮತ್ತಷ್ಟು ವೇಗಗೊಳ್ಳಬೇಕಿದೆ.

21 ಶೆಡ್‌ಗಳ ಪ್ರಕರಣ ಬಾಕಿ: ಅಧಿಕಾರಿಗಳ ಪ್ರಕಾರ, ಏಕಗವಾಕ್ಷಿ ವ್ಯವಸ್ಥೆಯಲ್ಲಿ ಬಹುತೇಕ ಪ್ರಕರಣಗಳು ಕಾಲಕಾಲಕ್ಕೆ ವಿಲೇವಾರಿಯಾಗುತ್ತಿವೆ. ಸದ್ಯ 21 ಶೆಡ್‌ಗಳಿಗೆ ಸಂಬಂಧಿಸಿದ ಒಂದು ಪ್ರಕರಣ ಬಾಕಿ ಇದ್ದು, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಏಕಗವಾಕ್ಷಿ ಸಭೆ ನಡೆದಿಲ್ಲ: ಪ್ರಮುಖ ಅರ್ಜಿಗಳು ಬಾರದ ಹಿನ್ನೆಲೆಯಲ್ಲಿ ಮಾರ್ಚ್ ಬಳಿಕ ಏಕಗವಾಕ್ಷಿ ಸಭೆ ನಡೆದಿಲ್ಲ. ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಬಳಿಕ ಸಭೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ(ಪ್ರಭಾರಿ) ಅಶೋಕ ಪ್ಯಾಟಿ ತಿಳಿಸಿದರು.

ಸಭೆ ನಡೆಸಲು ಕ್ರಮ: ಸಭೆ ವಿಳಂಬವಾಗಿರುವುದು ಈಗಷ್ಟೇ ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲಿಸಲಾಗುವುದು. ಮಾದರಿ ನೀತಿ ಸಂಹಿತೆ ಮುಗಿದ ತಕ್ಷಣ ಸಭೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಶೆ ಮುಕ್ತ ಜೀವನ ಅಳವಡಿಸಿಕೊಳ್ಳಿ: ವೀಣಾ
ಕಾಂಗ್ರೆಸ್ಸಿಗೆ ಪಾಠ ಕಲಿಸಲು ಸಕಾಲ: ಜೋಶಿ