ನಾಳೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿ ಸೇಠ್ ಪದಗ್ರಹಣ: ರಾಜಶೇಖರ ಪಾಟೀಲ್

KannadaprabhaNewsNetwork |  
Published : Oct 01, 2026, 01:45 AM IST
 | Kannada Prabha

ಸಾರಾಂಶ

ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮನ್ನಾನ ಸೇಠ್ ಅವರ ಪದಗ್ರಹಣ ಸಮಾರಂಭವು ಅಕ್ಟೋಬರ್ 2ರಂದು ನಗರದ ಯು.ಆರ್.ಸಿ. ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮನ್ನಾನ ಸೇಠ್ ಅವರ ಪದಗ್ರಹಣ ಸಮಾರಂಭವು ಅಕ್ಟೋಬರ್ 2ರಂದು ನಗರದ ಯು.ಆರ್.ಸಿ. ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ತಿಳಿಸಿದರು.

ಅವರು ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 11ಕ್ಕೆ ನಡೆಯಲಿರುವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ನಿಮಿತ್ತ ನಗರದಲ್ಲಿ ಬೈಕ್ ರ್ಯಾಲಿ ಕೂಡ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಎಲ್ಲಾ ಜಿಲ್ಲೆಗಳಲ್ಲೂ ನೂತನ ಅಧ್ಯಕ್ಷರ ಆಯ್ಕೆ ನಡೆದಿರುವುದರಿಂದ ರಾಜ್ಯ ಮಟ್ಟದ ನಾಯಕರ ಮಾರ್ಗದರ್ಶನದಂತೆ ಜಿಲ್ಲಾ ಮಟ್ಟದಲ್ಲೇ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ಜಿಲ್ಲೆಯ ಪಕ್ಷದ ಪ್ರಮುಖ ನಾಯಕರು, ತಾಲೂಕು ಘಟಕಗಳ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಬಿಎಸ್‌ಎಸ್‌ಕೆ ಕಾರ್ಖಾನೆ ಲೀಜ್‌ಗೆ ಮುಖ್ಯಮಂತ್ರಿ ಸಮ್ಮತಿ:

ಬಿಎಸ್ಎಸ್ ಕೆ (ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ) ನನ್ನ ಕ್ಷೇತ್ರದಲ್ಲಿಯೇ ಇದ್ದು, ಸುಮಾರು 2 ಸಾವಿರ ಷೇರುದಾರರಿದ್ದಾರೆ. ಕಾರ್ಖಾನೆಯನ್ನು ಶೀಘ್ರವೇ ಲೀಜ್ ಆಧಾರದ ಮೇಲೆ ಪುನರಾರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳು, ಸಹಕಾರ ಸಚಿವರು ಹಾಗೂ ಸಕ್ಕರೆ ಸಚಿವರನ್ನು ರೈತರ ನಿಯೋಗದೊಂದಿಗೆ ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಧನಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಸ್ಥಳದಲ್ಲೇ ಲೀಜ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಹಾಗೂ ಮಾಜಿ ಸಚಿವ ರಹೀಮ್ ಖಾನ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಮಾಜಿ ಎಂಎಲ್‌ಸಿ ಅರವಿಂದಕುಮಾರ್ ಅರಳಿ, ಶಂಕರ ದೊಡ್ಡಿ, ಶಂಕರರೆಡ್ಡಿ ಚಿಟ್ಟಾ, ದತ್ತು ಮೂಲಗೆ, ಪ್ರದೀಪ ಕುಶನೂರ್, ವೈಜಿನಾಥ ಯನಗುಂದಾ, ಅಜ್ಮತ್ ಪಟೇಲ್, ಎಂಎ ಸಮೀ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಭಿನ್ನ ಬಣ ಇಲ್ಲ, ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ :ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 6 ಜನರ ಹೆಸರು ಪರಿಶೀಲನೆಯಲ್ಲಿದ್ದವು. ಎಐಸಿಸಿಯಿಂದ ಆಗಮಿಸಿದ್ದ ವೀಕ್ಷಕರಾದ ರಾಜೇಶ ಗಲೋಟಿಯಾ ಅವರು ಜಿಲ್ಲಾದ್ಯಂತ ಪ್ರವಾಸ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮನ್ನಾನ್ ಸೇಠ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಹೀಗಾಗಿ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರದ ನಂತರ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿ, ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ನಗರಸಭೆ ಚುನಾವಣೆಗಳನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪಕ್ಷವು ಸರ್ವೆ ಮಾಡಿಯೇ ಮನ್ನಾನ್ ಸೇಠ್ ನೇಮಿಸಿದೆ: ರಹೀಮ್ ಖಾನ್

ಬೀದರ್: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಸರ್ವೆ ಮಾಡಿ ಮನ್ನಾನ್ ಸೇಠ್ ಅವರನ್ನು ಆಯ್ಕೆ ಮಾಡಿದೆ, ಆಯ್ಕೆಯಾದ ದಿನವೇ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ರಹೀಮ್ ಖಾನ್ ತಿಳಿಸಿದರು.

ಜಿಲ್ಲೆಯಲ್ಲಿ ಸುಮಾರು 9 ವರ್ಷಗಳ ವರೆಗೆ ಬಸವರಾಜ ಜಾಬಶೆಟ್ಟಿ ಅದ್ಯಕ್ಷರಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಅಧ್ಯಕ್ಷ ಸ್ಥಾನದೊಂದಿಗೆ ಬುಡಾ ಅಧ್ಯಕ್ಷ ಸ್ಥಾನದಲ್ಲಿಯು ಕೂಡ ಅವರು ಕಾರ್ಯ ಮಾಡಿದ್ದಾರೆ ಎಂದರು.

ಪಕ್ಷವು ಎರಡು ಸಲ ನನಗೆ ಸಚಿವ ಸ್ಥಾನ ಕೊಟ್ಟಿದೆ. ಸುಮಾರು 8-9 ಸಲ ಶಾಸಕರಾದ ತನ್ವೀರ ಸೇಠ, ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಮುಂಬರುವ ದಿನಗಳಲ್ಲಿ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮಾಡೋಣ ಎಂದರು.

ಈ ಹಿಂದೆ ಸಿದ್ರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಅನೇಕ ಕೆಲಸಗಳು ಆಗಿವೆ. ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೂಡ ಉತ್ತಮ ಕಾರ್ಯ ಮಾಡುತ್ತಿದ್ದಾರೆ.

ನಾನು ಪೌರಾಡಳಿತ ಸಚಿವನಾಗಿದ್ದಾಗ ರಾಜ್ಯದಲ್ಲಿ 7 ಕಾರ್ಪೊರೇಷನ್, 73 ಟಿಎಂಎಸಿ ಹಾಗೂ ಸಿಎಂಸಿ ಗಳನ್ನಾಗಿ ಮಾಡಿದ್ದೇನೆ. ಬೀದರ್ ನಗರದ ನಗರ ಸಭೆಯನ್ನೂ ಮಹಾನಗರ ಪಾಲಿಕೆಯನ್ನಾಗಿ ಮಾಡಿದ್ದೇನೆ. ನನ್ನ ಅವಧಿಯಲ್ಲಿಯೇ ಬೀದರ್ ನಗರದಲ್ಲಿ ರಿಂಗ್ ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಈಗ ಬೀದರ್‌ನಲ್ಲಿ 500 ಕೋಟಿ ರು. ವೆಚ್ಚದ ಕಾಮಗಾರಿಗಳು ಸದ್ಯ ನಡೆಯುತ್ತಿವೆ ಎಂದು ರಹೀಮ್ ಖಾನ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ರಾಜಕೀಯದಿಂದ ದೂರ ಉಳಿಯಬೇಕು: ಪಿ.ಎಂ.ನರೇಂದ್ರಸ್ವಾಮಿ
ಅಂಕಗಳು ಕಲಿಕೆಯ ಒಂದು ಭಾಗವೇ ಹೊರತು ಅದೇ ಶಿಕ್ಷಣದ ಮೂಲ ಗುರಿಯಲ್ಲ