ಪಿಇಎಸ್‌ ವಿವಿಯಲ್ಲಿ ಬಜಾಜ್‌ನಿಂದ ‘ಬೆಸ್ಟ್‌’ ಸ್ಕಿಲ್‌ ಲ್ಯಾಬ್‌ ಸ್ಥಾಪನೆ: ಪ್ರೊ.ಡಿ.ಜವಹಾರ್‌

KannadaprabhaNewsNetwork |  
Published : Oct 02, 2024, 01:01 AM IST
PES | Kannada Prabha

ಸಾರಾಂಶ

ಬಜಾಜ್‌ ಕಂಪನಿಯು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ 28 ಕೋಟಿ ರು. ವೆಚ್ಚದಲ್ಲಿ ನಗರದ ಪಿಇಎಸ್‌ ವಿವಿಯಲ್ಲಿ ‘ಬಜಾಜ್ ಎಂಜಿನಿಯರಿಂಗ್ ಸ್ಕಿಲ್ಸ್ ಟ್ರೈನಿಂಗ್’ (ಬೆಸ್ಟ್) ಸ್ಕಿಲ್‌ ಲ್ಯಾಬ್‌ ಸ್ಥಾಪಿಸಿದ್ದು, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ಉತ್ತೀರ್ಣರಾದವರಿಗೆ 2 ಕೋರ್ಸುಗಳನ್ನು ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಬಜಾಜ್‌ ಕಂಪನಿಯು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ 28 ಕೋಟಿ ರು. ವೆಚ್ಚದಲ್ಲಿ ನಗರದ ಪಿಇಎಸ್‌ ವಿವಿಯಲ್ಲಿ ‘ಬಜಾಜ್ ಎಂಜಿನಿಯರಿಂಗ್ ಸ್ಕಿಲ್ಸ್ ಟ್ರೈನಿಂಗ್’ (ಬೆಸ್ಟ್) ಸ್ಕಿಲ್‌ ಲ್ಯಾಬ್‌ ಸ್ಥಾಪಿಸಿದ್ದು, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ಉತ್ತೀರ್ಣರಾದವರಿಗೆ 2 ಕೋರ್ಸುಗಳನ್ನು ಆರಂಭಿಸಿದೆ.

ವಿವಿಯ ಕ್ಯಾಂಪಸ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪಿಇಎಸ್‌ ವಿವಿಯ ಸಮ ಕುಲಾಧಿಪತಿ ಪ್ರೊ.ಡಿ.ಜವಹಾರ್‌, ಬಜಾಜ್ ಕಂಪನಿಯು ದೇಶದಲ್ಲಿ 10 ಕಡೆ ಈ ರೀತಿಯ ಸ್ಕಿಲ್‌ ಲ್ಯಾಬ್‌ ಆರಂಭಿಸಿದೆ. ರಾಜ್ಯದಲ್ಲಿ ಈ ಲ್ಯಾಬ್‌ ಆರಂಭಿಸಿರುವ ಏಕೈಕ ವಿಶ್ವವಿದ್ಯಾಲಯ ಪಿಇಎಸ್‌ ಆಗಿದೆ. ಅ.4ರಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಈ ಲ್ಯಾಬ್‌ಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಬಜಾಜ್ ಆಟೋ ಲಿ. ಸಿಎಚ್‌ಆರ್‌ಒ ರವಿ ಕೈರಾನ್ ರಾಮಸ್ವಾಮಿ, ಪಿಇಎಸ್ ಸಂಸ್ಥಾಪಕ ಹಾಗೂ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕೈಗಾರಿಕೆಗಳು ಬಯಸುವ ಕೌಶಲ ಶಿಕ್ಷಣಯುಕ್ತ ಮಾನವ ಸಂಪನ್ಮೂಲಕ ಒದಗಿಸುವುದು ಈ ಲ್ಯಾಬ್‌ ಸ್ಥಾಪನೆ ಹಿಂದಿನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ 6 ತಿಂಗಳ ಅವಧಿಯ ಗ್ರಾಜ್ಯೂಯೇಟ್ ಟ್ರೈನಿಂಗ್ ಎಂಜಿನಿಯರ್ಸ್‌ (ಜಿಟಿಇ) ಮತ್ತು 4 ತಿಂಗಳ ಅವಧಿಯ ಡಿಪ್ಲೊಮಾ ಟ್ರೈನಿಂಗ್ ಎಂಜಿನಿಯರ್ಸ್‌(ಡಿಟಿಇ) ಎಂಬ ಎರಡು ಕೊರ್ಸುಗಳನ್ನು ಆರಂಭಿಸಲಾಗಿದೆ. ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ವ್ಯಾಸಂಗ ಮುಗಿಸಿ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರುವವರು ಈ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ಪ್ರವೇಶ ಪರೀಕ್ಷೆ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. 60 ಸೀಟುಗಳಲ್ಲಿ ಶೇ.50 ಮಹಿಳೆಯರಿಗೆ ಮೀಸಲಾಗಿರುತ್ತದೆ. ಪ್ರತಿ ಕೋರ್ಸುಗಳಿಗೆ 1.30 ಲಕ್ಷ ರು. ಶುಲ್ಕ ನಿಗದಿಪಡಿಸಿದೆ. ಇದರಲ್ಲಿ ಬಜಾಜ್ ಸಂಸ್ಥೆಯೇ 80 ಸಾವಿರ ಶುಲ್ಕ ಪಾವತಿಸಲಿದ್ದು, ಉಳಿದ 30000 ರು.ಗಳನ್ನು ಮಾತ್ರ ವಿದ್ಯಾರ್ಥಿಗಳು ಪಾವತಿಸಬೇಕು. ಇವರಿಗೆ ಕೌಶಲ ತರಬೇತಿ ಜತೆಗೆ ಪಿಇಎಸ್‌ನಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ ನೀಡಲಾಗುತ್ತಿದೆ. ಪ್ರತಿ ಬ್ಯಾಚ್‌ನಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿರುತ್ತದೆ ಎಂದು ವಿವರಿಸಿದರು.

ಗ್ರಾಮೀಣ ಭಾಗದವರಿಗೆ ಆದ್ಯತೆ: ಈಗಾಗಲೇ ಜಿಟಿಇ ಮೊದಲ ಬ್ಯಾಚ್‌ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತರಬೇತಿ ನಡೆಯುತ್ತಿದ್ದು, ನವೆಂಬರ್‌ಗೆ ಮುಕ್ತಾಯವಾಗಲಿದೆ. ನಂತರ ಡಿಟಿಇ ಕೋರ್ಸ್‌ಗೆ 2ನೇ ಬ್ಯಾಚ್‌ಗೆ ತರಬೇತಿ ಶುರುವಾಗಲಿದೆ. ಡಿಟಿಇ ಬ್ಯಾಚ್‌ಗೆ ಈಗಾಗಲೇ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಮತ್ತು ಗ್ರಾಮೀಣ ಭಾಗವ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆ ವೇಳೆ ನೋಂದಾಯಿಸಿಕೊಳ್ಳಬಹುದು. ಆಟೋ ಮೊಬೈಲ್ ಇಂಡಸ್ಟ್ರಿ,ರೋಬಾಟ್ಸ್ ತಂತ್ರಜ್ಞಾನ, ಸೆನ್ಸಾರ್ ತಂತ್ರಜ್ಞಾನ ಹೀಗೆ ಅನೇಕ ತಾಂತ್ರಿಕ ಕೌಶಲ್ಯ ತರಬೇತಿ ನೀಡಲಾಗುತ್ತದೆ ಎಂದು ಜವಹಾರ್ ತಿಳಿಸಿದರು.

ಈ ವೇಳೆ ಪಿಇಎಸ್ ವಿವಿ ಕುಲಪತಿ ಡಾ.ಜೆ.ಸೂರ್ಯ ಪ್ರಸಾದ್, ಕುಲಸಚಿವ ಡಾ.ಕೆ.ಎಸ್.ಶ್ರೀಧರ್, ಡಾ.ಚಂದ್ರಶೇಖರ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು