ರಾಜಿ ಆಗಬಹುದಾದ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಿ

KannadaprabhaNewsNetwork |  
Published : Dec 11, 2025, 02:15 AM IST
ಬಳ್ಳಾರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಯಾಧೀಶೆ ಕೆ.ಜಿ.ಶಾಂತಿ ಅವರು ರಾಷ್ಟ್ರೀಯ ಲೋಕ್ ಅದಾಲತ್ ಕುರಿತು ಮಾಹಿತಿ ನೀಡಿದರು.  | Kannada Prabha

ಸಾರಾಂಶ

ಸಾರ್ವಜನಿಕರು ಬಾಕಿ ಇರುವ ಮತ್ತು ರಾಜಿ ಆಗಬಹುದಾದ ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು

ಬಳ್ಳಾರಿ: ರಾಷ್ಟ್ರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದಂತೆ ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಇದೇ ಡಿ.13ರಂದು ಈ ವರ್ಷದ ಕೊನೆಯ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ. ಸಾರ್ವಜನಿಕರು ಬಾಕಿ ಇರುವ ಮತ್ತು ರಾಜಿ ಆಗಬಹುದಾದ ತಮ್ಮ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ. ಶಾಂತಿ ತಿಳಿಸಿದರು.ನಗರದ ತಾಳೂರು ರಸ್ತೆಯ ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಲೋಕ್ ಅದಾಲತ್ ನ್ಯಾಯಾಂಗದ ಒಂದು ಭಾಗ. ಉಭಯ ಕಕ್ಷಿದಾರರ ಪರಸ್ಪರ ಹೊಂದಾಣಿಕೆಗಾಗಿ ಮತ್ತು ತ್ವರಿತ ನ್ಯಾಯಕ್ಕಾಗಿಯೂ ರಾಷ್ಟ್ರೀಯ ಲೋಕ್ ಅದಾಲತ್ ಸಹಕಾರಿಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಅದಾಲತ್ ದಿನದಂದು 15 ಬೆಂಚ್ ಗಳಲ್ಲಿ ಅದಾಲತ್ ನಡೆಯಲಿದೆ. ಅಂದು ಬಗೆಹರಿಸಬಹುದಾದ ವಿವಿಧ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಹಾಗೂ ನ್ಯಾಯಾಲಯದ ಶುಲ್ಕವನ್ನು ಮರು ಪಾವತಿಸಲಾಗುತ್ತದೆ ಎಂದು ಹೇಳಿದರು.

ವೈವಾಹಿಕ, ಕೌಟುಂಬಿಕ, ಮೋಟಾರು ಅಪಘಾತ, ಚೆಕ್ ಅಮಾನ್ಯದ, ವಾಣಿಜ್ಯ, ಸೇವಾ ಪ್ರಕರಣಗಳು ಮತ್ತು ರಾಜೀಯಾಗಬಲ್ಲ, ಗ್ರಾಹಕ ವ್ಯಾಜ್ಯ, ಡಿಆರ್ ಟಿ, ಪಾಲುದಾರಿಕೆ, ಸಾರಿಗೆ ಹಾಗೂ ಇತರೇ ಸಿವಿಲ್ ಪ್ರಕರಣಗಳು ಸೇರಿದಂತೆ ಎಲ್ಲ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಇದರಿಂದ ಹಣ, ಸಮಯ ಉಳಿತಾಯವಾಗಲಿದ್ದು, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.

ಲೋಕ್ ಅದಾಲತ್ ನಲ್ಲಿ ಜನರಿಗೆ ಸುಲಭವಾಗಿ, ವೇಗವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ನ್ಯಾಯ ಒದಗಿಸಲಾಗುತ್ತದೆ. ಇದರಿಂದ ನ್ಯಾಯಾಲಯದ ಮೇಲಿನ ಹೊರೆ ಇಳಿಕೆಯಾಗಲಿದೆ. ಅಧಿಕ ಕಾಲದಿಂದ ಬಾಕಿ ಇರುವ ಪ್ರಕರಣಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯಲ್ಲಿ 35,533 ಬಾಕಿ ಪ್ರಕರಣಗಳಲ್ಲಿ ಡಿ.13ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ 8,961 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿದೆ. ಅದರಲ್ಲಿ 4,178 ಪ್ರಕರಣಗಳ ಉಭಯ ಕಕ್ಷಿದಾರರು ರಾಜಿ ಮಾತುಕತೆಯ ಮೂಲಕ ಇತ್ಯರ್ಥಕ್ಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ದಂಡ ಮೊತ್ತದಲ್ಲಿ ಶೇ.50 ರಿಯಾಯಿತಿ:

ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991-92 ರಿಂದ 2019-20ರ ಅವಧಿಯಲ್ಲಿ ದಾಖಲಾಗಿ ಪಾವತಿಗೆ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿದ್ದು, ಡಿ. 12ರ ವರೆಗೆ ಈ ರಿಯಾಯಿತಿ ಸೌಲಭ್ಯವು ಇರಲಿದೆ. ಡಿಸೆಂಬರ್ 13 ರಂದು ನಡೆಯಲಿರುವ ರಾಷ್ಟ್ರೀಯ ಲೋಕ್ ಅದಾಲತ್ ಪ್ರಯುಕ್ತ ಈ ರಿಯಾಯಿತಿ ನೀಡಲಾಗಿದೆ. ಸಾರ್ವಜನಿಕರು ಈ ಸೌಲಭ್ಯವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನೆ ಸೇರಿದಂತೆ ಜಿಲ್ಲಾ ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರೇಕೆರೆ ಒತ್ತುವರಿ ಆರೋಪ: ತುರ್ತು ಕ್ರಮಕ್ಕೆ ಸೂಚನೆ
ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ: ಮಂಜುಳಾ ಆರೋಪ