ಕೊಪ್ಪಳ: ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ನಗರದಲ್ಲಿ ಬುಧವಾರ ‘ಸೇವಾ ಜ್ಯೋತಿ ಯಾತ್ರೆ’ ಸಂಭ್ರಮದಿಂದ ನಡೆಯಿತು.
ಯಾತ್ರೆಯ ಮಾರ್ಗದುದ್ದಕ್ಕೂ ವಿವಿಧೆಡೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯಾತ್ರೆಯನ್ನು ಸ್ವಾಗತಿಸಿ ಶುಭಾಶಯ ಕೋರಿದರು. ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳ ಮೂಲಕ ಯಾತ್ರೆ ಸಾಗಿದ ಹಿನ್ನೆಲೆಯಲ್ಲಿ ಕೆಲಕಾಲ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ಯಾತ್ರೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ್ ಮಾತನಾಡಿ, ರಾಜಕೀಯವೆಂದರೆ ಕೇವಲ ಚುನಾವಣೆ ಹಾಗೂ ಅಧಿಕಾರಕ್ಕೆ ಸೀಮಿತವಾಗಬಾರದು. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಸಮಾಜದ ಒಳಿತಿಗಾಗಿ ನಿರಂತರವಾಗಿ ಸೇವೆ ಸಲ್ಲಿಸುವುದೇ ರಾಜಕೀಯದ ಪ್ರಮುಖ ಉದ್ದೇಶವಾಗಬೇಕು ಎಂದರು.ಸೇವಾ ಸಂಕಲ್ಪ ಅಭಿಯಾನದ ಮೂಲಕ ಪಕ್ಷದ ಕಾರ್ಯಕರ್ತರು ಜನಸಾಮಾನ್ಯರೊಂದಿಗೆ ಇನ್ನಷ್ಟು ನಿಕಟವಾಗಿ ಕಾರ್ಯನಿರ್ವಹಿಸಲಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಿರಂತರವಾಗಿ ಸೇವಾ ಚಟುವಟಿಕೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಯಾತ್ರೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕೈಗೊಂಡಿತ್ತು.