ಜಿಲ್ಲಾಡಳಿತದಿಂದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ । ವಿಶೇಷ ಉಪನ್ಯಾಸ
ಹಡಪದ ಅಪ್ಪಣ್ಣನವರು ಸೇವಾಯೋಗಿ, ಕಾಯಕ ಶರಣರಾಗಿದ್ದರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೊಪ್ಪಳ ತಾಲ್ಲೂಕು ಅಧ್ಯಕ್ಷ ಸಾವಿತ್ರಿ ಮುಜಮದಾರ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ವಚನ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನಮಾನವಿದೆ. ವಚನ ಸಾಹಿತ್ಯಕ್ಕೆ ಶಿವಶರಣರ ಕೊಡುಗೆ ಅಪಾರವಾಗಿದೆ. ಶರಣರು ತಮ್ಮ ಕಾಯಕದ ಜೊತೆಗೆ ವಚನಗಳ ಮೂಲಕ ಸಾಮಾಜ ಸುಧಾರಣೆಗೆ ಶ್ರಮಿಸಿದ್ದಾರೆ. ಇಂತಹ ಮಹನೀಯರಲ್ಲಿ ಅಪ್ಪಣ್ಣನವರು ಒಬ್ಬರು. ತಮ್ಮದೇ ಆದ ಆದರ್ಶಗಳೊಂದಿಗೆ ಅನುಭವಮಂಟಪದಂತಹ ಮಹಾ ಮನೆಯ ಸದಸ್ಯರಾಗಿದ್ದ ಅಪ್ಪಣ್ಣನವರು ಬಸವಣ್ಣನವರ ಕಾಲದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹಡಪದ ಎಂದರೆ, ಎಲೆ ಅಡಿಕೆ ಚೀಲ ಎಂದರ್ಥ, ಅನುಭವ ಮಂಟಪದಲ್ಲಿ ಎಲೆ ಅಡಿಕೆ ಚೀಲ ಇಟ್ಟುಕೊಂಡಿದ್ದ ಅಪ್ಪಣ್ಣನವರಿಂದ ಎಲ್ಲರೂ ಎಲೆ ಅಡಿಕೆ ಪಡೆಯಬೇಕಾಗಿತ್ತು. ಇದರಿಂದಾಗಿ ಅಪ್ಪಣ್ಣನವರಿಗೆ ಹಡಪದ ಅಪ್ಪಣ್ಣ ಎಂದು ಕರೆಯಲಾಯಿತು. ಹಡಪದ ಅಪ್ಪಣ್ಣನವರು ಭಕ್ತಿ ದಾಸೋಹ, ಕಾಯಕ ತತ್ವವನ್ನು ಪಾಲಿಸಿ ಬಸವಣ್ಣನವರ ಅನುಯಾಯಿಯಾಗಿ ಶರಣ ತತ್ವದಲ್ಲಿ ಬದುಕಿದವರು. ಸಮಾಜದಲ್ಲಿ ಎಲ್ಲರೂ ಸಮಾನರಾಗಿದ್ದು, ಯಾವುದೇ ತಾರತಮ್ಯ ಮಾಡದೇ ಎಲ್ಲರನ್ನು ಗೌರವದಿಂದ ಕಾಣಬೇಕು ಎಂದರು.
ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮಾಜದ ಮುಖಂಡರಾದ ಬಸಪ್ಪ ಹಲಗೇರಿ, ಶರಣಪ್ಪ ಬನ್ನಿಕೊಪ್ಪ, ಶಿವಾಜಿ, ಬಾಳಪ್ಪ ವಕೀಲರು, ನಿಂಗಪ್ಪ ಸೇರಿದಂತೆ ಮತ್ತಿತರರಿದ್ದರು.
ಮೆರವಣಿಗೆ:ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ಬೆಳಗ್ಗೆ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣರ ಭಾವಚಿತ್ರದ ಮೆರವಣಿಗೆಗೆ ಸಂಸದ ಕೆ. ರಾಜಶೇಖರ ಹಿಟ್ನಾಳ ಚಾಲನೆ ನೀಡಿದರು. ಮೆರವಣಿಗೆಯು ಕೊಪ್ಪಳ ಕೋಟೆ ರಸ್ತೆಯ ಮಹೇಶ್ವರ ದೇವಸ್ಥಾನದಿಂದ ಆರಂಭಗೊಂಡು, ಗಡಿಯಾರ ಕಂಬ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಅಶೋಕ ವೃತ್ತ, ಸಾಹಿತ್ಯ ಭವನದವರೆಗೆ ಅದ್ಧೂರಿಯಾಗಿ ಜರುಗಿತು. ಪೂರ್ಣಕುಂಭ, ಕಲಾತಂಡಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು.