ಜೆಡಿಎಸ್ಗೆ ಬೆಂಬಲ : ಏಳು ಕಾಂಗ್ರೆಸ್‌ ಸದಸ್ಯರು ಅನರ್ಹ

KannadaprabhaNewsNetwork | Updated : May 01 2025, 12:33 PM IST

ಸಾರಾಂಶ

 ಚುನಾವಣೆಯಲ್ಲಿ ಕಾಂಗ್ರೆಸ್‌ನ 7 ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದ ಹಿನ್ನಲೆ  ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ 

 ಶಿಡ್ಲಘಟ್ಟ : ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ನ 7 ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯ 7 ಮಂದಿ ನಗರಸಭೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದೆ. 

ಕಳೆದ 2024 ರ ಸೆಪ್ಟೆಂಬರ್ 5 ರಂದು ನಡೆದ ಶಿಡ್ಲಘಟ್ಟ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದ ಕಾಂಗ್ರೆಸ್ ನ 7 ಮಂದಿ ಸದಸ್ಯರ ವಿರುದ್ದ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಹಾಗೂ ನಗರಸಭೆ ಸದಸ್ಯ ಎಂ.ಶ್ರೀನಿವಾಸ್ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಿದ್ದರಿಂದ 7 ಮಂದಿ ನಗರಸಭೆ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶ ಹೊರಡಿಸಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಸದಸ್ಯರ ಬೆಂಬಲ:

ಕಳೆದ 2024 ರ ಸೆಪ್ಟೆಂಬರ್ 5 ರಂದು ಶಿಡ್ಲಘಟ್ಟ ನಗರಸಭೆಯ ಅಧ್ಯಕ್ಷರಾಗಿ ಜೆಡಿಎಸ್ ವೆಂಕಟಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ನ ರೂಪ ನವೀನ್ ಚುನಾಯಿತರಾದರು. ಆಗ ಸಂಖ್ಯಾಬಲವಿದ್ದರೂ ಅಧಿಕಾರ ಹಿಡಿಯಲು ಕಾಂಗ್ರೆಸ್ ಸೋತಿತು. ಆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಏಳು ಮಂದಿ ಕಾಂಗ್ರೆಸ್ ಸದಸ್ಯರು ಬೆಂಬಲಿಸಿ, ನೆರವಾಗಿದ್ದರು.ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ 9ನೇ ವಾರ್ಡ್ ನ ವೆಂಕಟಸ್ವಾಮಿ, ಕಾಂಗ್ರೆಸ್ ಎಂ.ಶ್ರೀನಿವಾಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ರೂಪ ನವೀನ್ ಮತ್ತು ಕಾಂಗ್ರೆಸ್ ನಿಂದ ಸಲ್ಮಾತಾಜ್ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದ ವೆಂಕಟಸ್ವಾಮಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರೂಪ ನವೀನ್ ಶಾಸಕ ಹಾಗೂ ಸಂಸದರ ತಲಾ ಒಂದೊಂದು ಮತ ಸೇರಿದಂತೆ ಒಟ್ಟು ತಲಾ 21 ಮತಗಳನ್ನು ಪಡೆಯುವ ಮೂಲಕ ವಿಜಯ ಸಾಧಿಸಿದ್ದರು. 10 ಮತಗಳನ್ನು ಪಡೆದು ಕಾಂಗ್ರೆಸ್ ನ ಎಂ.ಶ್ರೀನಿವಾಸ್ ಮತ್ತು ಸಲ್ಮಾತಾಜ್ ಪರಾಭವಗೊಂಡಿದ್ದರು.

ನಗರಸಭೆಯಲ್ಲಿ ಕಾಂಗ್ರೆಸ್-13, ಜೆಡಿಎಸ್-10, ಬಿಜೆಪಿ-2, ಬಿಎಸ್ಪಿ-2 ಹಾಗೂ ಸ್ವತಂತ್ರರು-4 ಸೇರಿ ಒಟ್ಟು 31 ಸಂಖ್ಯಾಬಲವಿದೆ. ಈ ಪೈಕಿ ಕಾಂಗ್ರೆಸ್ ನ ಶಿವಮ್ಮ ಹಾಗೂ ಜೆಡಿಎಸ್ ನ ಮುಸ್ತರುನ್ನಿಸಾ ಚುನಾವಣೆ ಪ್ರಕ್ರಿಯೆಯಲ್ಲಿ ಗೈರಾಗಿದ್ದು 29 ಸದಸ್ಯರು ಹಾಜರಾಗಿದ್ದರು. ಜೆಡಿಎಸ್ ಅಭ್ಯರ್ಥಿಗಳ ಪರ 19 ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪರ 10 ಮತಗಳಷ್ಟೆ ಬಿದ್ದಿದ್ದವು. ಶಾಸಕ ಬಿ.ಎನ್.ರವಿಕುಮಾರ್, ಸಂಸದ ಮಲ್ಲೇಶ್ಬಾಬು ಜೆಡಿಎಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದರು.

ಕಾನೂನು ಹೋರಾಟ: ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅನರ್ಹಗೊಂಡಿರುವ 7 ಮಂದಿ ನಗರಸಭೆ ಸದಸ್ಯರು, ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ

ಬಾಕ್ಸ್‌ಅನರ್ಹಗೊಂಡ ಸದಸ್ಯರುನಗರಸಭೆಯ 3ನೇ ವಾರ್ಡಿನ ಸದಸ್ಯೆ ಎಸ್.ಚಿತ್ರಮನೋಹರ್, 10ನೇ ವಾರ್ಡಿನ ಸದಸ್ಯ ಎಸ್.ಎಂ.ಮಂಜುನಾಥ್, 11ನೇ ವಾರ್ಡಿನ ಸದಸ್ಯ ಎಲ್.ಅನಿಲ್ಕುಮಾರ್, 16ನೇ ವಾರ್ಡಿನ ಎನ್.ಕೃಷ್ಣಮೂರ್ತಿ, 22ನೇ ವಾರ್ಡಿನ ಟಿ.ಮಂಜುನಾಥ್, 28ನೇ ವಾರ್ಡಿನ ಜಭೀಉಲ್ಲಾ ಮತ್ತು 7ನೇ ವಾರ್ಡಿನ ಶಿವಮ್ಮ ಮುನಿರಾಜು ಅನರ್ಹಗೊಂಡವರು.

Share this article