ಕುಡಿವ ನೀರಿಗಾಗಿ ₹750 ಕೋಟಿ ಹಣ ಬಿಡುಗಡೆ: ಶಾಸಕ ಬೇಳೂರು ಗೋಪಾಲಕೃಷ್ಣ

KannadaprabhaNewsNetwork | Published : Feb 10, 2025 1:50 AM

ಸಾರಾಂಶ

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ 750 ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಕುಡಿವ ನೀರಿನ ಯೋಜನೆಗೆ ಚಾಲನೆ

ಕನ್ನಡಪ್ರಭ ವಾರ್ತೆ ಆನಂದಪುರ

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ 750 ಕೋಟಿ ರು. ಹಣ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಸಮೀಪದ ಗೌತಮಪುರ ಗ್ರಾಪಂ ವ್ಯಾಪ್ತಿಯಲ್ಲಿ ಅನೇಕ ರಸ್ತೆ ಕಾಮಗಾರಿ ಹಾಗೂ ಸಮುದಾಯ ಭವನದ ಮತ್ತು ಗೌತಮ ಪುರದಲ್ಲಿ 24 ತಾಸು ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಹು ನಿರೀಕ್ಷಿತ ಜಲ ಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಆನಂದಪುರ ಹೋಬಳಿ ವ್ಯಾಪ್ತಿಯ ಅಂಬ್ಲಿಗೋಳ ಜಲಾಶಯದ ನೀರಿನ್ನು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ನಂತರ ಗ್ರಾಮ ಪಂಚಾಯಿತಿಯ ಪ್ರತಿಯೊಂದು ಮನೆಮನೆಗೂ ದಿನದ 24 ಗಂಟೆಗಳ ಕಾಲ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದರು.

ಸಾಗರ ಪಟ್ಟಣಕ್ಕೆ ಈಗಾಗಲೇ ಶರಾವತಿ ಹಿನ್ನಿರನಿಂದ ಕುಡಿಯುವ ನೀರು ದೊರೆಯುತ್ತಿದೆ. ಹಾವಿನ ಹಳ್ಳಿ ಹಾಗೂ ಕಸಬಾ ಹೋಬಳಿಗೆ ಕುಕ್ಕೋಡಿ ಬಳಿ ನೀರಿನ ಶುದ್ಧೀಕರಣ ಘಟಕದ ಮೂಲಕ ಈ ಭಾಗಕ್ಕೆ ಶುದ್ಧ ಕುಡಿಯುವ ನೀರು ದೊರೆಯಲಿದೆ. ಹೊಸನಗರ ವ್ಯಾಪ್ತಿಗೆ ಚಕ್ರ ನಗರದಿಂದ ಕುಡಿಯುವ ನೀರಿನ ಯೋಜನೆ ತಯಾರಾಗಿದ್ದು ಶೀಘ್ರದಲ್ಲೇ ಕಾರ್ಯ ಆರಂಭಗೊಳ್ಳಲಿದೆ. ಒಟ್ಟಾರೆ ಕ್ಷೇತ್ರದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ದೊರೆಯಲಿದೆ ಎಂದು ಹೇಳಿದರು.ಸಣ್ಣ ನೀರಾವರಿ ಯೋಜನೆಯ ಅಡಿಯಲ್ಲಿ ಬರುವಂತಹ ಕೆರೆಗಳ ಅಭಿವೃದ್ಧಿಗೆ ಈಗಾಗಲೇ 18 ಕೋಟಿ ರು. ಹಣ ಮಂಜೂರಾಗಿದ್ದು, ಪ್ರತಿಯೊಂದು ಕೆರೆಯ ಅಭಿವೃದ್ಧಿಗೆ 50 ಲಕ್ಷಕ್ಕೂ ಅಧಿಕ ಹಣ ದೊರೆಯಲಿದೆ. ಹಿಂದೆ ಸಾಗರದಲ್ಲಿ ಇದ್ದಂತಹ ಸಣ್ಣ ನೀರಾವರಿ ಇಲಾಖೆಯ ಕಚೇರಿಯನ್ನು ಶಿಕಾರಿಪುರಕ್ಕೆ ಸ್ಥಳಾಂತರಿಸಿದ್ದು ಈಗ ಮತ್ತೆ ಶಿಕಾರಿಪುರದಿಂದ ಸಾಗರಕ್ಕೆ ಸ್ಥಳಾಂತರ ಮಾಡಿಸಿಯೇ ತೀರುತ್ತೇನೆ ಎಂದರು.

ರೈತರ ಅರಣ್ಯ ಸಮಸ್ಯೆ ಶೀಘ್ರದಲ್ಲಿ ಪರಿಹಾರಗೊಳ್ಳಲಿದ್ದು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ಕಾರ್ಯ ಪ್ರಾರಂಭವಾಗಿದೆ. ಯಾವ ರೈತರು ಹೊಸದಾಗಿ ಕಾಡನ್ನು ಕಡಿಯುವ ಪ್ರಯತ್ನ ಮಾಡಬೇಡಿ. ಕಾರಣ ಅರಣ್ಯ ಇಲಾಖೆಯ ಕಾಯ್ದೆ ತುಂಬಾ ಕಠಿಣವಾಗಿದ್ದು ಅಕ್ರಮ ಮಾಡುವರ ವಿರುದ್ಧ ಕಠಿಣ ಕ್ರಮ ಜರುಗಿಸುವಲ್ಲಿ ಅರಣ್ಯ ಇಲಾಖೆ ಮುಂದಾಗಲಿದೆ ಎಂದು ರೈತರಿಗೆ ಎಚ್ಚರಿಕೆ ನೀಡಿದರು.ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಮಂಜುನಾಥ್ ದಾಸನ್, ಶಿವಕುಮಾರ್, ವಿಠಲ, ನಾಗರಾಜ್, ಸಾವಿತ್ರಮ್ಮ, ಶಕುಂತಲಾ ರಮೇಶ್, ಯಶೋಧ ಶಿವಶಂಕರ್, ರೇಣುಕಾ ಮರಿಯಪ್ಪ, ಸಾಗರದ ನಗರ ಪ್ರಾಧಿಕಾರದ ಸೋಮಶೇಖರ್ ಲಗ್ಗೆರೆ, ಸಾಗರ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಸಾಗರ ಈ.ಓ.ಶಿವಪ್ರಕಾಶ್, ಪಿಡಿಒ ಆದರ್ಶ, ಹರಟೆ ಆನಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article