ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ತಾಳವಟ್ಟಿ ಗ್ರಾಮದಲ್ಲಿ ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹಾಗೂ ನೂತನ ಶಾಲಾ ಕೊಠಡಿ ಉದ್ಘಾಟನೆ ನೆರವೇರಿಸಿ ಮಾತನಾಡಿ, 17 ಸಾವಿರ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದ್ದು, ನೇಮಕಾತಿ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಧಿ ತೆಗೆದುಕೊಳ್ಳದೇ ಕೇವಲ 3ರಿಂದ 4 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸದಾ ಸರ್ಕಾರದ ಕಡೆ ಮುಖ ಮಾಡುವುದು ಬೇಡ. ಅಭಿವೃದ್ಧಿ ಕೇವಲ ಸರ್ಕಾರದ ಕರ್ತವ್ಯ ಮಾತ್ರವಲ್ಲದೇ, ಸಾರ್ವಜನಿಕರು, ಗ್ರಾಮಸ್ಥರು, ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು, ಜನಪ್ರತಿನಿಧಿಗಳ ವೈಯಕ್ತಿಕ ಕರ್ತವ್ಯವೂ ಹೌದು. ಶಿಕ್ಷಣಕ್ಕೆ ಒತ್ತು ನೀಡುವುದು ಸಾರ್ವಜನಿಕರ ಸಾಮಾಜಿಕ ಜವಾಬ್ದಾರಿ ಎಂದರು.ರಾಜ್ಯ ಶಿಕ್ಷಣ ನೀತಿ (ಎಸ್‍ಇಪಿ) ಕರಡು ವರದಿ ಸಲ್ಲಿಸಲಾಗಿದ್ದು, ಅದರಲ್ಲಿರುವ ನ್ಯೂನ್ಯತೆಗಳನ್ನು ಪರಿಶೀಲನೆ ನಡೆಸಲು ಉಪ ಸಮಿತಿ ರಚನೆ ಮಾಡಲಾಗುವುದು. ನಂತರ ಅಂತಿಮವಾಗಿ ಅನುಷ್ಠಾನ ಮಾಡಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಒಪ್ಪುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ 307 ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷವೇ ರಾಜ್ಯ ಸರ್ಕಾರ ವತಿಯಿಂದ 500 ಕೆಪಿಎಸ್ ಶಾಲೆಗಳನ್ನು 15 ದಿನದೊಳಗಾಗಿ ಘೋಷಣೆ ಮಾಡಲಾಗುವುದು. ಇದರ ಜತೆಗೆ ಹೈದರಾಬಾದ್ ಕರ್ನಾಟಕದಲ್ಲಿ ಅಕ್ಷರ ಅವಿಷ್ಕಾರ ವತಿಯಿಂದ 100 ಕೆಪಿಎಸ್ ಶಾಲೆಗಳು ಸೇರಿ ಒಟ್ಟು 600 ಕೆಪಿಎಸ್ ಶಾಲೆಗಳು ಕಾರ್ಯಾರಂಭ ಮಾಡಲಿದೆ. ಒಂದು ಕೆಪಿಎಸ್ ಶಾಲೆಯಲ್ಲಿ 1200 ಮಕ್ಕಳು ಉತ್ತಮ ವಾತಾವರಣದಲ್ಲಿ ವ್ಯಾಸಂಗ ಮಾಡಬಹುದಾಗಿದ್ದು, ಖಾಸಗಿ ಶಾಲೆಗಳಿಗಿಂತ ಉತ್ತಮವಾದ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ದೊರೆಯಲಿದೆ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ತಾಳವಟ್ಟಿ ಗ್ರಾಮದ ಹಿರಿಯರು ಸೇರಿ ಸುಮಾರು ಒಂದು ಕೋಟಿ ರು. ಹಾಗೂ ಸರ್ಕಾರದಿಂದ 25 ಲಕ್ಷ ರು. ವೆಚ್ಚ ಮಾಡಿ ಶತಮಾನೋತ್ಸವ ಶಾಲಾ ಕಟ್ಟಡ ಉದ್ಘಾಟನೆ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾದ ಪ್ರತಿಭಾವಂತ ಶಿಕ್ಷಕರಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲು, ಮೊಟ್ಟೆ, ಸಮಸ್ತ್ರ, ಶೂ ಸೇರಿದಂತೆ ಹಲವಾರು ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ತಾಳವಟ್ಟಿ ಶಾಲೆ ಅನೇಕ ಹಿರಿಯರಿಗೆ ಶಿಕ್ಷಣ ಕೊಡುವುದರಲ್ಲಿ 100 ವರ್ಷಗಳ ದೊಡ್ಡ ಯಶಸ್ಸು ಕಂಡಿದೆ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಶಾಲಾ ಶಿಕ್ಷಣ ಉಪ ನಿರ್ದೇಶಕ ಎಂ.ಆರ್.ಮಂಜುನಾಥ್, ನಾಸಿರುದ್ದೀನ್, ತಹಶೀಲ್ದಾರ್ ಸಿದ್ದೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ,ಶಾಲಾ ಪುನಃಶ್ಚೇತನ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ.ವಿ.ವೀರಭದ್ರಯ್ಯ, ಗೌರವಾಧ್ಯಕ್ಷ ಎ.ಚಂದ್ರಾರೆಡ್ಡಿ, ಕಾರ್ಯಾಧ್ಯಕ್ಷ ಜಲೀಲ್ ಸಾಬ್, ವಿಶ್ವ ಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ನೀಲಕಂಠದೇವ, ಸಮಿತಿಯ ಲಕ್ಷ್ಮಿಕಾಂತ್ ಇದ್ದರು.