ಲೋಕಸಭೆ ಚುನಾವಣೆ । ಬೆಳಿಗ್ಗೆ 7ರಿಂದ ಆರಂಭವಾಗಿ ಸಂಜೆ ಮುಕ್ತಾಯ । 95 ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸಿದ ಮತದಾರ
ಲೋಕಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ತಾಲೂಕಿನಾದ್ಯಂತ ಶೇಕಡ 70ರಷ್ಟು ಮತದಾನವಾಗಿದ್ದು, ಬೆಳಿಗ್ಗೆ 7 ಗಂಟೆಯಿಂದಲೇ ಪ್ರಾರಂಭವಾದ ಮತದಾನದಲ್ಲಿ ಬೆಳಗ್ಗೆ ನಿಧಾನ ಗತಿಯಲ್ಲಿ ಪ್ರಾರಂಭವಾದ ಮತದಾನ ಬಿಸಿಲು ಏರುತ್ತ ತುಸು ಚುರುಕುಗೊಂಡು ಸಂಜೆ ಮುಕ್ತಾಯದ ವೇಳೆಗೆ ಶೇಕಡ 70ಕ್ಕೂ ಮತದಾನವಾಗಿದೆ.
ಚಿಗಳೂರು ಮತಗಟ್ಟೆ ಸಂಖ್ಯೆ 141 ಮತ್ತು ಆಲೂರು ಪೂರ್ವಭಾಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 59ರಲ್ಲಿ ಇವಿಎಂ ಮತ ಯಂತ್ರಗಳಲ್ಲಿ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ, ತಕ್ಷಣ ಬದಲಾಯಿಸಿ ಮತದಾನಕ್ಕೆ ಅನುಕೂಲ ಕಲ್ಪಿಸಲಾಯಿತು. ಉಳಿದಂತೆ ತಾಲೂಕಿನ ಎಲ್ಲ 95 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.ಕಣತೂರು ಮತಗಟ್ಟೆಯಲ್ಲಿ 1300 ಕ್ಕೂ ಹೆಚ್ಚು ಮತದಾರರಿರುವುದರಿಂದ ಮತಗಟ್ಟೆ ವ್ಯಾಪ್ತಿಯೊಳಗಿರುವ ಮತದಾರರಿಗೆ ಟೋಕನ್ ನೀಡಿ, ಸಮಯ ಮೀರಿದ ನಂತರವೂ ಮತದಾನಕ್ಕೆ ಅನುಕೂಲ ಕಲ್ಪಿಸಲಾಯಿತು ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ನಂದಕುಮಾರ್ ತಿಳಿಸಿದರು.
ಬೆಳಿಗ್ಗೆ 7 ರಿಂದ 11 ಗಂಟೆವರೆಗೆ ಮತದಾರರು ಚುರುಕಾಗಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮಧ್ಯಾಹ್ನ ಒಂದು ಗಂಟೆಯಿಂದ ನಾಲ್ಕು ಗಂಟೆವರೆಗೆ ಬಿಸಿಲಿನ ತಾಪದಿಂದ ಮತದಾನ ಮಂದಗತಿಯಲ್ಲಿ ಸಾಗಿತು. ಆದರೂ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶೇ. 50ರಷ್ಟು ಮತದಾನವಾಗಿತ್ತು.
ಚುನಾವಣೆಗೆ ಸ್ಪರ್ಧಿಸಿರುವ ಆಲೂರು ತಾಲೂಕು ನಿವಾಸಿ ಹೇಮಂತ ಗವೀಶ್ ಭರತೂರು ಮತಗಟ್ಟೆ ಸಂಖ್ಯೆ 230ರಲ್ಲಿ, ಮಾಜಿ ಶಾಸಕ ಜೆಡಿಎಸ್ ಮುಖಂಡ ಎಚ್. ಕೆ. ಕುಮಾರಸ್ವಾಮಿಯವರು ಪತ್ನಿ ಚಂಚಲ ಕುಮಾರಸ್ವಾಮಿ ಜೊತೆ ಬೋಸ್ಮಾನಹಳ್ಳಿ ಮತಗಟ್ಟೆ ಸಂಖ್ಯೆ 199 ರಲ್ಲಿ ಮತದಾನ ಮಾಡಿದರು. ಬಸವೇಶಪುರ ಗ್ರಾಮದ ವಿಕಲಚೇತನ ಸತೀಶ್ ಬ್ಯಾಬಕಾಲೋನಿ ಮತಗಟ್ಟೆಯಲ್ಲಿ ವ್ಹೀಲ್ ಚೇರ್ ಮೂಲಕ ಮತಗಟ್ಟೆಗೆ ಬಂದು ಮತದಾನ ಮಾಡಿದರು.
ಆಲೂರಲ್ಲಿ ಪಕ್ಷೇತರ ಅಭ್ಯರ್ಥಿ ಹೇಮಂತ್ ಗವೀಶ್ ಭರತೂರು ಮತಗಟ್ಟೆಯಲ್ಲಿ ಮತ ಚಲಾಯಿಸಿದರು