ಕಾಂಕ್ರೀಟ್‌ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ ಹಲವು ಸಂಘಟನೆಗಳ ಪ್ರತಿಭಟನೆ

KannadaprabhaNewsNetwork |  
Published : Jul 28, 2025, 12:30 AM IST
ಕೆ ಕೆ ಪಿ ಸುದ್ದಿ, 02: ನಗರದಲ್ಲಿ ನಿರ್ಮಾಣ ಮಾಡುತ್ತಿರುವ ಕಾಂಕ್ರೀಟ್ ರಸ್ತೆ ನಿಯಮಾನುಸಾರ ಮಾಡುವಂತೆ ಆಗ್ರಹ.  | Kannada Prabha

ಸಾರಾಂಶ

ರಸ್ತೆ ಕಾಮಗಾರಿಯು ಒಂದು ತಿಂಗಳ ಹಿಂದೆ ಪ್ರಾರಂಭವಾಗಿದ್ದು, ಸೀಮೆ ಎಣ್ಣೆ ಬಂಕ್ ಮುಂಭಾಗದಿಂದ ಚನ್ನಬಸಪ್ಪ ವೃತ್ತದವರೆಗೆ ಒಂದು ಭಾಗದಲ್ಲಿ ಕಾಂಕ್ರೀಟ್ ಕಾಮಗಾರಿಯನ್ನು ನಡೆಸಲಾಗಿದೆ. ಎಷ್ಟು ವೆಚ್ಚದಲ್ಲಿ ಯಾವ ಗುತ್ತಿಗೆದಾರ ಕೆಲಸ ಮಾಡಿಸುತ್ತಿದ್ದಾರೆ, ಯಾವಾಗ ಕೆಲಸ ಮುಕ್ತಾಯ ಮಾಡುತ್ತಾರೆ ಎಂಬುದರ ಬಗ್ಗೆ ಎಲ್ಲಿಯೂ ಮಾಹಿತಿ ಫಲಕ ಹಾಕಿಲ್ಲ.

ಕನ್ನಡಪ್ರಭ ವಾರ್ತೆ ಕನಕಪುರ

ನಗರದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯ ಬಗ್ಗೆ ಸಾರ್ವಜನಿಕ ನಾಮಫಲಕ ಹಾಕಬೇಕು, ರಸ್ತೆಯಲ್ಲಿರುವ ಕಿರು ಸೇತುವೆಗಳನ್ನು ದೊಡ್ಡ ಸೇತುವೆಗಳನ್ನಾಗಿ ನಿರ್ಮಿಸಬೇಕೆಂದು ಒತ್ತಾಯಿಸಿ ಹಲವು ಸಂಘಟನೆಗಳ ಮುಖಂಡರು ಕಾಮಗಾರಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ರಸ್ತೆ ಕಾಮಗಾರಿಯು ಒಂದು ತಿಂಗಳ ಹಿಂದೆ ಪ್ರಾರಂಭವಾಗಿದ್ದು, ಸೀಮೆ ಎಣ್ಣೆ ಬಂಕ್ ಮುಂಭಾಗದಿಂದ ಚನ್ನಬಸಪ್ಪ ವೃತ್ತದವರೆಗೆ ಒಂದು ಭಾಗದಲ್ಲಿ ಕಾಂಕ್ರೀಟ್ ಕಾಮಗಾರಿಯನ್ನು ನಡೆಸಲಾಗಿದೆ. ಎಷ್ಟು ವೆಚ್ಚದಲ್ಲಿ ಯಾವ ಗುತ್ತಿಗೆದಾರ ಕೆಲಸ ಮಾಡಿಸುತ್ತಿದ್ದಾರೆ, ಯಾವಾಗ ಕೆಲಸ ಮುಕ್ತಾಯ ಮಾಡುತ್ತಾರೆ ಎಂಬುದರ ಬಗ್ಗೆ ಎಲ್ಲಿಯೂ ಮಾಹಿತಿ ಫಲಕ ಹಾಕಿಲ್ಲ. ಅಲ್ಲದೆ ಕಾಂಕ್ರೀಟ್ ರಸ್ತೆ ಮಾಡುತ್ತಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ರಸ್ತೆ ನಿರ್ಮಾಣದಿಂದ ಇಷ್ಟೆಲ್ಲಾ ಸಮಸ್ಯೆಗಳು ಆಗುತ್ತಿದ್ದರೂ ಸಂಬಂಧಪಟ್ಟವರಾಗಲಿ, ಪೊಲೀಸರಾಗಲಿ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಡದೆ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ಸುಮ್ಮನಾಗಿದ್ದಾರೆ. ಚನ್ನಬಸಪ್ಪ ವೃತದಲ್ಲಿ ಹಳೆಯ ಕಾಲದಲ್ಲಿ ನಿರ್ಮಿಸಿದ ಒಂದು ಕಿರು ಸೇತುವೆ ಇದೆ, ನಗರದ ಅರ್ಧಭಾಗದಷ್ಟು ನೀರು ಈ ಒಂದು ಸೇತುವೆಯಲ್ಲಿಯೇ ಹೋಗಬೇಕಿದೆ. ಅಲ್ಲದೆ ಅಡ್ಡಹಳ್ಳದ ಸೇತುವೆಯು ತೀರ ಹಿಂದೆ ನಿರ್ಮಿಸಿದ್ದರಿಂದ ಅದು ಕಿರಿದಾಗಿದೆ, ಇಲ್ಲಿಯೂ ಹೊಸದಾಗಿ ದೊಡ್ಡದಾದ ಸೇತುವೆಯನ್ನು ನಿರ್ಮಿಸಿ ನಂತರ ಕಾಂಕ್ರೀಟ್ ರಸ್ತೆಯನ್ನು ಮಾಡಬೇಕೆಂಬುದು ಸಾರ್ವಜನಿಕರು ಮತ್ತು ಸಂಘಟನೆಗಳ ಮುಖಂಡರ ಒತ್ತಾಯವಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡ ಕುಮಾರಸ್ವಾಮಿ, ಚೀಲೂರು ಮುನಿರಾಜು, ಮುನಿಸಿದ್ದೇಗೌಡ, ರಾಜೇಶ್, ಪುಟ್ಟ ಲಿಂಗಯ್ಯ, ಪ್ರದೀಪ್ ಮೊದಲಾದವರು ಶುಕ್ರವಾರ ಕಾಂಕ್ರೀಟ್ ಕಾಮಗಾರಿಯನ್ನು ಮಾಡದಂತೆ ತಡೆದು ಸ್ಥಗಿತಗೊಳಿಸಿದರು. ಸ್ಥಳಕ್ಕೆ ಗುತ್ತಿಗೆದಾರ, ರಸ್ತೆಗೆ ಸಂಬಂಧಿಸಿದ ಹೈವೇ ಪ್ರಾಧಿಕಾರದ ಅಧಿಕಾರಿಗಳು, ಇಂಜಿನಿಯರ್ ಬರಬೇಕು, ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

‘ಸರ್ಕಾರದ ಅಭಿವೃದ್ಧಿ ಕೆಲಸಗಳು ಸಾರ್ವಜನಿಕರ ಹಣದಿಂದ ಮಾಡುವ ಕಾಮಗಾರಿಗಳಾಗಿದ್ದು, ಇದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇರಬೇಕು. ಸಣ್ಣಪುಟ್ಟ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿಯ ನಾಮಫಲಕ ಹಾಕಲಾಗುತ್ತದೆ. ಆದರೆ ಇಲ್ಲಿ ಕೋಟಿ ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದರೂ ಸಹ ಎಲ್ಲಿಯೂ ಮಾಹಿತಿ ಇಲ್ಲ. ಸರ್ಕಾರದ ಹಣವೊ, ಸ್ವಂತದ್ದೊ ಗೊತ್ತಾಗುತ್ತಿಲ್ಲ, ಅದನ್ನು ಸಾರ್ವಜನಿಕವಾಗಿ ತಿಳಿಸಬೇಕು’.

-ಕುಮಾರಸ್ವಾಮಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಕನಕಪುರ

‘ಹಳೆಯ ಡಾಂಬರು ರಸ್ತೆಗೆ ಒಂದು ಅಡಿ ಎತ್ತರದಷ್ಟು ಕಾಂಕ್ರೀಟ್ ಹಾಕಿ ರಸ್ತೆ ಮಾಡಲಾಗುತ್ತಿದೆ. ಚನ್ನಬಸಪ್ಪ ವೃತ್ತ ಮತ್ತು ಅಡ್ಡಹಳ್ಳದಲ್ಲಿ ಕಿರಿದಾದ ಹಳೆಯ ಸೇತುವೆಗಳಿವೆ. ದೊಡ್ಡ ಸೇತುವೆಗಳನ್ನು ನಿರ್ಮಿಸಿ ನಂತರದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಬೇಕು. ಸಂಬಂಧಪಟ್ಟ ಅಧಿಕಾರಿಗಳು, ಇಂಜಿನಿಯರ್‌ಗಳು ಸೂಕ್ತ ಕ್ರಮವಹಿಸಬೇಕು’.

-ಚೀಲೂರು ಮುನಿರಾಜು, ರೈತ ಸಂಘದ ರಾಜ್ಯ ಸಂಚಾಲಕ, ಕನಕಪುರ

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ