ಅಂಬೇಡ್ಕರ್ ಬಗ್ಗೆ ತಿಳಿಸಲು ಸರ್ಕಾರದಿಂದ ಹತ್ತು ಹಲವಾರು ಕಾರ್ಯಕ್ರಮ

KannadaprabhaNewsNetwork | Published : Apr 15, 2025 12:50 AM

ಸಾರಾಂಶ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಸಾಧನೆ, ಹೋರಾಟದ ಕುರಿತು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಿಳಿದುಕೊಂಡಿರುವುದು ಹೆಮ್ಮೆಯ ಸಂಗತಿ. ಮಕ್ಕಳಿಗೆ ಹಾಗೂ ಯುವ ಪೀಳಿಗೆಗೆ ಅವರ ಕುರಿತು ಸಂಪೂರ್ಣವಾಗಿ ತಿಳಿಸುವ ಉದ್ದೇಶದಿಂದ ಸರ್ಕಾರ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ಮುಂಡರಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಸಾಧನೆ, ಹೋರಾಟದ ಕುರಿತು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಿಳಿದುಕೊಂಡಿರುವುದು ಹೆಮ್ಮೆಯ ಸಂಗತಿ. ಮಕ್ಕಳಿಗೆ ಹಾಗೂ ಯುವ ಪೀಳಿಗೆಗೆ ಅವರ ಕುರಿತು ಸಂಪೂರ್ಣವಾಗಿ ತಿಳಿಸುವ ಉದ್ದೇಶದಿಂದ ಸರ್ಕಾರ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.

ಅವರು ಸೋಮವಾರ ತಹಸೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಸಂವಿಧಾನಶಿಲ್ಪಿ, ಮಹಾಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬುದ್ಧ, ಬಸವ, ಅಂಬೇಡ್ಕರ್ ಈ ಮೂರು ಜನ ಮಹಾನ್ ವ್ಯಕ್ತಿಗಳು ಆಯಾ ಕಾಲಮಾನಕ್ಕೆ ತಕ್ಕಂತೆ ಜನತೆಗೆ ತಿದ್ದಿ ಬುದ್ಧಿ ಹೇಳುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ. ಡಾ. ಅಂಬೇಡ್ಕರ್ ಬರೆದಿರುವ ಸಂವಿಧಾನ ಇಡೀ ಪ್ರಪಂಚದಲ್ಲಿಯೇ ಮಾದರಿಯಾಗಿರುವಂತದ್ದು. ಕೇವಲ ಭಾರತದೇಶದಲ್ಲಿ ಮಾತ್ರವಲ್ಲದೇ ವಿಶ್ವದ ವಿವಿಧ ದೇಶಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

ಡಿ.ಎಸ್.ಎಸ್. ಮುಖಂಡರಾದ ಎಚ್.ಡಿ. ಪೂಜಾರ, ಸೋಮಣ್ಣ ಹೈತಾಪೂರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ವಿವಿಧ ರಂಗಗಳಲ್ಲಿ ಸಾಧನೆ ಮಾಡಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಅವರು ತಮ್ಮ ಸಂವಿಧಾನದ ಮೂಲಕ ನಮ್ಮ ದೇಶದ ಎಲ್ಲ ವರ್ಗದ ಜನತೆಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕೆಂದು ವಿಶೇಷ ಕಾನೂನು ಜಾರಿಗೊಳಿಸಿದರು. ಕೆಲವೇ ಜನರಿಗೆ ಮೀಸಲಾಗಿದ್ದ ಮತದಾನದ ಹಕ್ಕನ್ನು ಸರ್ವರಿಗೂ ದೊರೆಯುವಂತೆ ಮಾಡಿದರು. ಅಂಬೇಡ್ಕರ್ ಕೇವಲ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮಾತ್ರ ಸೀಮಿತವಾದವರಲ್ಲ. ಅವರು ಎಲ್ಲ ವರ್ಗಗಳಿಗೂ ಬೇಕಾದವರಾಗಿದ್ದಾರೆ ಎಂದರು.

ಯುವ ಮುಖಂಡ ಚಂದ್ರಶೇಖರ ಪೂಜಾರ ಮಾತನಾಡಿ, ಎಸ್ಸಿ ಎಸ್ಟಿ ಸಮುದಾಯದವರು ಏನಾದರೂ ಸಮಸ್ಯೆಗಳನ್ನು ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದಾಗ ಅವರೊಂದಿಗೆ ಸರಿಯಾಗಿ ಮಾತನಾಡಿ ಸಲಹೆ ಸೂಚನೆ ನೀಡಿ ಪರಿಹರಿಸಲು ಪ್ರಯತ್ನಿಸಿದರೆ ಅಂಬೇಡ್ಕರ್ ಜಯಂತಿಗೆ ನಿಜವಾದ ಅರ್ಥಬರುತ್ತದೆ ಎಂದರು. ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಚಂದ್ರು ಪೂಜಾರ, ವೆಂಕಟೇಶ ಗುಗ್ಗರಿ, ಅಶ್ವಿನಿ ಗೌಡರ್, ಮಾರುತಿ ಮ್ಯಾಗೇರಿ, ಮಂಜುನಾಥ ಇಟಗಿ, ಲಕ್ಷ್ಮಣ ತಗಡಿನಮನಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ತಾಪಂ ಇಒ ವಿಶ್ವನಾಥ ಹೊಸಮನಿ, ಸಿಪಿಐ ಮಂಜುನಾಥ ಕುಸುಗಲ್, ಬಿಇಒ ಎಚ್.ಎಂ.ಫಡ್ನೇಶಿ, ಅಬಕಾರಿ ಅಧಿಕಾರಿ ಸುವರ್ಣ ಕೋಟಿ, ಅರಣ್ಯಾಧಿಕಾರಿ ಸವಿತಾ, ಕಪ್ಪತ್ ಹಿಲ್ಸ್ ಅಧಿಕಾರಿ ಮಂಜುನಾಥ ಮೇಗಲಮನಿ, ಬಿಸಿಎಂ ಅಧಿಕಾರಿ ಎಸ್.ವಿ. ಕಲ್ಮಠ, ಸವಿತಾ ಸಾಶ್ವಿಹಳ್ಳಿ, ದುರಗಪ್ಪ ಪೂಜಾರ, ರಾಮಣ್ಣ ಕೋಳಿ, ವೈ.ಎ.ನಾಗಮ್ಮನವರ, ಅಡಿವೆಪ್ಪ ಛಲವಾದಿ, ನಿಂಗರಾಜ ಹಾಲಿನವರ, ಮಂಜುನಾಥ ಮುದೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅರುಣಾ ಸೋರಗಾವಿ ಸ್ವಾಗತಿಸಿ, ಶ್ರೀಕಾಂತ ಅರಹುಣಸಿ ನಿರೂಪಿಸಿ, ವಂದಿಸಿದರು.

Share this article