ಸಿ.ಕೆ. ನಾಗರಾಜ
ಈಗಾಗಲೇ ಕೆಲವರು ಬಿತ್ತಿದ ಬೆಳೆಗಳು ಸಂಪೂರ್ಣವಾಗಿ ಒಣಗುತ್ತಿವೆ. ತುಂಗಭದ್ರಾ ಜಲಾಶಯ ಹೊಸಪೇಟೆ ತಾಲೂಕಿನಲ್ಲಿದ್ದರೂ ಜಲಾಶಯದಲ್ಲಿ ನೀರಿಲ್ಲ. ಮಲೆನಾಡಿನಲ್ಲಿ ಸ್ವಲ್ಪಮಟ್ಟಿಗೆ ಆಗೊಮ್ಮೆ ಈಗೊಮ್ಮೆ ಮಳೆ ಸುರಿದಿದ್ದರಿಂದ ತುಂಗಭದ್ರಾ ಜಲಾಶಯದಲ್ಲಿ ಜು.27ರಂದು 32.596 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ 75.870 ಟಿಎಂಸಿ ನೀರು ಸಂಗ್ರಹವಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅರ್ಧ ನೀರು ಸಹ ತುಂಗಭದ್ರಾ ಜಲಾಶಯಕ್ಕೆ ಬಂದಿಲ್ಲ.
ತಾಲೂಕಿನ ಬಹುತೇಕ ಕೆರೆಗಳು ಬತ್ತಿ ಹೋಗಿವೆ. ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. ಮಳೆ ಕೊರತೆಯಿಂದಾಗಿ ನದಿ ಸೇರಿದಂತೆ ಹಳ್ಳ-ಕೊಳ್ಳಗಳು ಬರಿದಾಗಿವೆ. ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಗೊಲ್ಲರಹಳ್ಳಿಯ ಎರಡು ಕೆರೆಗಳು, ವ್ಯಾಸನಕೆರೆ, ಹಾರುವನಹಳ್ಳಿ, ಚಿಲಕನಹಟ್ಟಿ, ನಂದಿಬಂಡಿ, ಗುಂಡಾ, ಗರಗ, ಜಿ.ನಾಗಲಾಪುರ, ದೇವಲಾಪುರ ಸೇರಿದಂತೆ ಇನ್ನಿತರೆ ಗ್ರಾಮಗಳ ಕೆರೆಗಳು ಸಂಪೂರ್ಣವಾಗಿ ಬತ್ತಿಹೋಗಿವೆ.ವಿಜಯನಗರ ಜಿಲ್ಲೆಯ ಅತಿದೊಡ್ಡ ಕೆರೆಯಾದ ಡಣಾಯಕನಕೆರೆಗೆ ಮಳೆ ನೀರು ಜೊತೆಗೆ ತುಂಗಭದ್ರಾ ಜಲಾಶಯದ ಹಿನ್ನೀರನ್ನು ಹರಿಸುವ ಮೂಲಕ ಕಳೆದ ವರ್ಷ ಕೆರೆ ತುಂಬಿ ಕೋಡಿಹರಿದಿತ್ತು. ಹಿಂದಿನ ವರ್ಷದ ನೀರು ಉಳಿದುಕೊಂಡಿದ್ದರಿಂದ ಈ ವರ್ಷ ಸ್ವಲ್ಪಮಟ್ಟಿಗೆ ಕೆರೆ ನೀರು ಉಳಿದಿವೆ. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ನೀರು ಆಗುತ್ತೋ ಇಲ್ಲವೋ ಎನ್ನುವ ಆತಂಕ ರೈತರಲ್ಲಿ ಮೂಡಿದೆ.
ತಾಲೂಕಿನಲ್ಲಿ ನೈರುತ್ಯ ಮುಂಗಾರು ಮಳೆಯು ಜೂನ್ 1 ರಿಂದ 25 ವರೆಗೆ 158.6 ಎಂಎಂ ಮಳೆ ಆಗಬೇಕಾಗಿತ್ತು. ಆದರೆ 32.5 ಎಂಎಂ ಮಳೆ ಆಗಿದೆ. ಇದರಂತೆ ಜುಲೈ 1ರಿಂದ 25ವರೆಗೆ 72.8 ಎಂಎಂ ಮಳೆ ಆಗಬೇಕಾಗಿತ್ತು. ಆದರೆ 13.3 ಎಂಎಂ ಮಾತ್ರ ಮಳೆ ಆಗಿದೆ. ಶೇ.82ರಷ್ಟು ಮಳೆ ಕೊರತೆಯಾಗಿದೆ ಎಂದು ವಿಜಯನಗರ ಜಿಲ್ಲೆಯ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ಕೆ. ವಾಮದೇವ ತಿಳಿಸಿದರು.
ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದೆ. ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಸಮರ್ಪಕ ಮಳೆ ಆಗದೇ ಮಳೆ ಕೊರತೆ ಉಂಟಾಗಿದೆ. ಬಹುತೇಕ ಪ್ರದೇಶದಲ್ಲಿ ಬರ ವೀಕ್ಷಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಸಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ.